ನವದೆಹಲಿ: ನೂತನ ಸಂಸತ್ ಭವನ (New Parliament) ಉದ್ಘಾಟನಾ ಕಾರ್ಯಕ್ರಮ ಮೇ 28ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ಸಂಸತ್ ಭವನವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಆದರೆ, ಈ ಕಾರ್ಯಕ್ರಮಕ್ಕೆ 19 ಪ್ರತಿಪಕ್ಷಗಳು ಬಹಿಷ್ಕಾರ ಹಾಕಿವೆ. ಸಂಸತ್ತಿನಿಂದ ಪ್ರಜಾಪ್ರಭುತ್ವದ ಆತ್ಮವನ್ನೇ ಕಿತ್ತು ಹಾಕಿರುವಾಗ, ಹೊಸ ಕಟ್ಟಡದಲ್ಲಿ ಯಾವುದೇ ಮೌಲ್ಯ ಇರಲು ಸಾಧ್ಯವಿಲ್ಲ ಎಂದು 19 ಪಕ್ಷಗಳು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿವೆ.
ಶಿವಸೇನೆ (UBT)ಯ ನಾಯಕ ಸಂಜಯ್ ರಾವತ್ ಅವರೂ ಈ ಬಗ್ಗೆ ಹೇಳಿಕೆ ನೀಡಿದ್ದು, ಎಲ್ಲ ಪ್ರತಿಪಕ್ಷಗಳು ಹೊಸ ಸಂಸತ್ ಭವನ ಉದ್ಘಾಟನೆಯನ್ನು ಬಹಿಷ್ಕರಿಸಿವೆ. ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಭಾರತ್ ರಾಷ್ಟ್ರ ಸಮಿತಿ(BRS) ಹಾಗೂ ಶಿರೋಮಣಿ ಅಕಾಲಿ ದಳ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಜಗನ್ ಮೋಹನ್ ರೆಡ್ಡಿ ಅವರ ನೇತೃತ್ವದ ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಾರ್ಟಿ(YSRCP) ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
19 ಪಕ್ಷಗಳ ಜಂಟಿ ಹೇಳಿಕೆಯನ್ನು ಟ್ವೀಟ್ ಮಾಡಿದ ಕಾಂಗ್ರೆಸ್ ಪಾರ್ಟಿ
ಎಂ ಕೆ ಸ್ಟಾಲಿನ್ ನೇತೃತ್ವದ ದ್ರಾವಿಡ್ ಮನ್ನೇತ್ರ ಕಳಗಂ(DMK), ಲಾಲು ಪ್ರಸಾದ್ ಯಾದವ್ ಅವರು ರಾಷ್ಟ್ರೀಯ ಜನತಾ ದಳ(RJD), ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾ ದಳ(JDU), ಶರದ್ ಪವಾರ್ ಅವರು ರಾಷ್ಟ್ರೀಯವಾಗಿ ಕಾಂಗ್ರೆಸ್ ಪಾರ್ಟಿ(Cognress Party) ಸೇರಿದಂತೆ 19 ಪಕ್ಷಗಳು ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸಿವೆ. ಈಗಾಗಲೇ ಆಮ್ ಆದ್ಮಿ ಪಾರ್ಟಿ, ತೃಣಮೂಲ ಕಾಂಗ್ರೆಸ್ ಪಾರ್ಟಿ ಮತ್ತು ಕಮ್ಯುನಿಸ್ಟ್ ಪಾರ್ಟಿಗಳು ಕೂಡ ಭಾಗವಹಿಸುವುದಿಲ್ಲ ಎಂದು ಹೇಳಿವೆ.
ಇದನ್ನೂ ಓದಿ: New Parliament House : ಹೊಸ ಸಂಸತ್ ಭವನದಲ್ಲಿ ಮಿಂಚಲಿವೆ 5000 ಬಗೆಯ ಕಲಾಕೃತಿಗಳು
ಹೊಸದಾಗಿ ನಿರ್ಮಾಣ ಮಾಡಲಾಗಿರುವ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭಾ ಸ್ಫೀಕರ್ ಓಂ ಬಿರ್ಲಾ ಅವರು ಮೇ 28ರಂದು ಲೋಕಾರ್ಪಣೆ ಮಾಡಲಿದ್ದಾರೆ. ರಾಜ್ಯಸಭೆ ಮತ್ತು ಲೋಕಸಭೆಯ ಎಲ್ಲ ಸಂಸದರಿಗೆ ಭೌತಿಕವಾಗಿ ಮತ್ತು ಡಿಜಿಟಲ್ ಆಗಿ ಆಮಂತ್ರಣವನ್ನು ಕಳುಹಿಸಿಕೊಡಲಾಗಿದೆ. ಜತೆಗೆ, ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳಿಗೆ ಆಹ್ವಾನವನ್ನು ನೀಡಲಾಗಿದೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.