Site icon Vistara News

ರಾಜ್ಯಸಭೆಯ 19 ಸಂಸದರು ಅಮಾನತು; ಮುಂಗಾರು ಅಧಿವೇಶನಕ್ಕೆ ಒಂದು ವಾರ ಕಾಲಿಡುವಂತಿಲ್ಲ

Rajya Sabha

ನವ ದೆಹಲಿ: ನಿನ್ನೆ (ಜುಲೈ 25) ಲೋಕಸಭೆ ಕಲಾಪಕ್ಕೆ ಅಡ್ಡಿಪಡಿಸಿದ ನಾಲ್ವರು ಕಾಂಗ್ರೆಸ್‌ ಸಂಸದರನ್ನು ಸ್ಪೀಕರ್‌ ಓಂಬಿರ್ಲಾ ಅಮಾನತು ಮಾಡಿದ್ದರು. ಅವರು ಇನ್ನು ಈ ಬಾರಿಯ ಮುಂಗಾರು ಅಧಿವೇಶನಕ್ಕೆ ಹಾಜರಾಗುವಂತಿಲ್ಲ ಎಂದೂ ಆದೇಶಿಸಲಾಗಿದೆ. ಅದರ ಬೆನ್ನಲ್ಲೇ ಇಂದು ರಾಜ್ಯಸಭೆಯಲ್ಲಿ 19 ಸಂಸದರನ್ನು ಅಮಾನತುಗೊಳಿಸಲಾಗಿದೆ. ಟಿಎಂಸಿ, ಡಿಎಂಕೆ, ಸಿಪಿಐ(ಎಂ), ಸಿಪಿಐ, ಟಿಆರ್‌ಎಸ್‌ ಪಕ್ಷಗಳಿಗೆ ಸೇರಿದ ಸಂಸದರನ್ನು ರಾಜ್ಯಸಭೆ ಉಪಾಧ್ಯಕ್ಷ ಅಮಾನತುಗೊಳಿಸಿದ್ದು, ಇನ್ನು ಒಂದು ವಾರಗಳ ಕಾಲ ಅವರು ಕಲಾಪಕ್ಕೆ ಆಗಮಿಸುವಂತಿಲ್ಲ ಎಂದು ಸೂಚಿಸಿದ್ದಾರೆ. ಇವರೆಲ್ಲ ಅಶಿಸ್ತಿನಿಂದ ವರ್ತಿಸಿದ್ದಕ್ಕೆ ಅಮಾನತು ಶಿಕ್ಷೆ ನೀಡಲಾಗಿದೆ ಎನ್ನಲಾಗಿದೆ. ಹಾಗೇ, ಒಂದೇ ದಿನದಲ್ಲಿ ಇಷ್ಟು ಸಂಸದರು ಅಮಾನತುಗೊಂಡಿರಲಿಲ್ಲ.

ಇಂದು ಅಮಾನತುಗೊಂಡವರು: ತೃಣಮೂಲ ಕಾಂಗ್ರೆಸ್‌ನ ಸಂಸದರಾದ ಸುಷ್ಮಿತಾ ದೇವ್‌, ಮೌಸಮ್‌ ಮೂರ್‌, ಶಾಂತಾ ಛೆಟ್ರಿ, ಡೋಲಾ ಸೇನ್‌, ಡಾ. ಶಂತನು ಸೇನ್‌, ಅಭಿ ರಂಜನ್‌ ಬಿಸ್ವಾರ್‌, ಮೊಹಮ್ಮದ್‌ ನಾದಿಮುಲ್‌ ಹಕ್‌, ಡಿಎಂಕೆ ಪಕ್ಷದ ಎಂ.ಹಮೀದ್‌ ಅಬ್ದುಲ್ಲಾ, ಎಸ್‌. ಕಲ್ಯಾಣಸುಂದರಮ್‌, ಆರ್‌.ಗಿರಂಜನ್‌, ಎನ್‌.ಆರ್‌.ಎಲಂಗೊ, ಎಂ.ಷಣ್ಮುಗಂ, ಡಾ. ಕನಿಮೋಳಿ ಎನ್‌ವಿಎನ್‌ ಸೋಮು, ಸಿಪಿಐ ಪಕ್ಷದ ಸಂಸದ ಸಂದೋಶ್‌ ಕುಮಾರ್‌ ಪಿ., ಸಿಪಿಐ (ಎಂ)ನ ವಿ.ಶಿವದಾಸನ್‌, ಎ.ಎ.ರಹೀಮ್‌ ಮತ್ತು ಟಿಆರ್‌ಎಸ್‌ ಪಕ್ಷದ ದಾಮೋದರ್‌ ರಾವ್‌ ದಿವಾಕೊಂಡಾ, ರವೀಂದ್ರ ವಾದಿರಾಜು.

ಇಂದು ಬೆಳಗ್ಗೆ ರಾಜ್ಯಸಭಾ ಕಲಾಪ ಪ್ರಾರಂಭ ಆಗುತ್ತಿದ್ದಂತೆ ಪ್ರತಿಪಕ್ಷಗಳ ಸದಸ್ಯರು ಗದ್ದಲ ಶುರುವಿಟ್ಟುಕೊಂಡರು. ಪ್ರಶ್ನೋತ್ತರ ವೇಳೆಯಲ್ಲೂ 15 ನಿಮಿಷ ಕಲಾಪ ಮುಂದೂಡಲ್ಪಟ್ಟಿತು. ಮತ್ತೆ ಟಿಎಂಸಿ ಸಂಸದರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಲು ಪ್ರಾರಂಭಿಸಿದರು. ಬೆಲೆ ಏರಿಕೆ ಎಂಬ ಒಂದೇ ವಿಷಯವನ್ನು ಇಟ್ಟುಕೊಂಡು ದೊಡ್ಡಮಟ್ಟದಲ್ಲಿ ಗಲಾಟೆ ಸೃಷ್ಟಿಸಿದರು. ಕೇಂದ್ರದ ವಿರುದ್ಧ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. ಸಂಸತ್ತಿನ ಒಳಗೆ ಇಂಥ ಫಲಕ ಪ್ರದರ್ಶನ ನಿಷೇಧಿಸಲಾಗಿದ್ದರೂ ಅದನ್ನು ತೋರಿಸಿದ್ದನ್ನು, ನಿಯಮ ಉಲ್ಲಂಘನೆ, ಅಶಿಸ್ತು ಎಂದು ಪರಿಗಣಿಸಿ ಅಮಾನತು ಮಾಡಲಾಯಿತು.

ಕಲಾಪದಿಂದ ಅಮಾನತುಗೊಂಡರೂ ಅಲ್ಲಿಂದ ಹೊರಹೋಗಲು ತೃಣಮೂಲ ಕಾಂಗ್ರೆಸ್‌ ಸಂಸದರು ಕ್ಯಾತೆ ತೆಗೆದರು. ಅಲ್ಲಿಯೇ ನಿಂತು ಪ್ರತಿಭಟನೆ ಮುಂದುವರಿಸಿದರು. ಹೀಗಾಗಿ ಮತ್ತೆ ರಾಜ್ಯಸಭೆ ಕಲಾಪ ಒಂದು ತಾಸುಗಳ ಕಾಲ ಮುಂದೂಡಲ್ಪಟ್ಟಿತ್ತು. ಬಳಿಕ ಅಮಾನತುಗೊಂಡವರೆಲ್ಲ ಹೊರಹೋಗಿದ್ದರೆ. ಈ ಘಟನೆ ಬಳಿಕ ಪ್ರತಿಕ್ರಿಯೆ ನೀಡಿದ ಟಿಎಂಸಿ ಸಂಸದ ಡೆರೆಕ್‌ ಒ ಬ್ರಿಯಾನ್, ʼಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಸೇರಿ ಪ್ರಜಾಪ್ರಭುತ್ವವನ್ನೇ ಅಮಾನತು ಮಾಡುತ್ತಿದ್ದಾರೆ. ಅಂಥದ್ದರಲ್ಲಿ ಸಂಸದರ ಅಮಾನು ಮಾಡುವುದು ಯಾವ ಲೆಕ್ಕ?ʼ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಲೋಕಸಭೆಯಲ್ಲಿ ಫಲಕ ಪ್ರದರ್ಶನ, ನಾಲ್ವರು ಕೈ ಸಂಸದರು ಸಸ್ಪೆಂಡ್‌, ಹಾಲಿ ಅಧಿವೇಶನವಿಡೀ ಪ್ರವೇಶವಿಲ್ಲ

Exit mobile version