Site icon Vistara News

Apprenticeship Mela | ನಾಳೆ 197 ಜಿಲ್ಲೆಗಳಲ್ಲಿ ಅಪ್ರೆಂಟಿಷಿಪ್ ಮೇಳ! ಭಾಗವಹಿಸುವುದು ಹೇಗೆ?

ನವದೆಹಲಿ: ಉದ್ಯೋಗ ಮೇಳವನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರವು ಇದೀಗ ‘ಪ್ರಧಾನಿ ರಾಷ್ಟ್ರೀಯ ಅಪ್ರೆಂಟಿಷಿಪ್ ಮೇಳ'(PM National Apprenticeship Mela-PMNAM)ವನ್ನು 197 ಜಿಲ್ಲೆಗಳಲ್ಲಿ ಕೈಗೊಳ್ಳಲಿದೆ. ಭಾರತೀಯ ಯುವ ಸಮುದಾಯಕ್ಕೆ ಉದ್ಯೋಗ ಕೌಶಲಗಳನ್ನು ನೀಡುವುದಕ್ಕಾಗಿ ಕೇಂದ್ರ ಸರ್ಕಾರವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕೇಂದ್ರ ಕೌಶಲ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ(ಎಂಎಸ್‌ಡಿಇ) ಇಲಾಖೆಯು ಡಿಸೆಂಬರ್ 12ರಂದು ದೇಶಾದ್ಯಂತ ಈ ಮೇಳವನ್ನು ಆಯೋಜಿಸುತ್ತಿದ್ದು, ಸ್ಥಳೀಯ ಯುವಕರು ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಮೇಳದ ಭಾಗವಾಗಿ ಹಲವಾರು ಸ್ಥಳೀಯ ಉದ್ಯಮಗಳಿಗೆ ಅಹ್ವಾನ ನೀಡಲಾಗಿದೆ. ಅಪ್ರೆಂಟಿಷಿಪ್ ಮೂಲಕ ಸ್ಥಳೀಯ ಯುವಕರಲ್ಲಿ ಉದ್ಯೋಗ ಕೌಶಲ ಬೆಳೆಸಿಕೊಳ್ಳುವುದಕ್ಕೆ ತರಬೇತಿ ನೀಡಲಾಗುತ್ತಿದೆ. ಯುವಕರಿಗೆ ಸ್ಥಳೀಯ ಉದ್ಯಮಗಳು ಅಪ್ರೆಂಟಿಷಿಪ್ ಒದಗಿಸಲಿವೆ. ಬೇರೆ ಬೇರೆ ವಲಯಗಳ ನಾನಾ ಕಂಪನಿಗಳ ಭಾಗವಹಿಸುವಿಕೆಗೆ ಈ ಕಾರ್ಯಕ್ರಮವು ಸಾಕ್ಷಿಯಾಗಲಿದೆ. ಭಾಗವಹಿಸುವ ಕಂಪನಿಗಳು ಒಂದೇ ವೇದಿಕೆಯಲ್ಲಿ ಸಂಭಾವ್ಯ ಅಪ್ರೆಂಟಿಸ್‌ಗಳನ್ನು ಭೇಟಿ ಮಾಡಲು ಮತ್ತು ಸ್ಥಳದಲ್ಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮತ್ತು ಅವರ ಸಂಸ್ಥೆಯ ಭಾಗವಾಗಲು ಅವಕಾಶವನ್ನು ಒದಗಿಸುತ್ತದೆ.

5ರಿಂದ 12ನೇ ತರಗತಿ ಪಾಸಾದವರು, ಸ್ಕಿಲ್ ಟ್ರೈನಿಂಗ್ ಸರ್ಟಿಫಿಕೇಟ್ ಹೊಂದಿದವರು, ಐಟಿಐ ಡಿಪ್ಲೋಮಾ ಪೂರೈಸಿದವರು, ಪದವೀಧರರು ಈ ಅಪ್ರೆಂಟಿಷಿಪ್ ಪ್ರೋಗ್ರಾಮ್‌ಗೆ ಮೇಳದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ತಮ್ಮ ರೆಸ್ಯೂಮ್‌, ಎಲ್ಲ ಅಂಕಪಟ್ಟಿಗಳು, ಸರ್ಟಿಫಿಕೇಟ್ಸ್‌ನ, ಫೋಟೋ ಐಡಿ(ಆಧಾರ/ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ) ಮೂರು ಪ್ರತಿಗಳು ಮತ್ತು ಮೂರು ಪಾಸ್‌ಪೋರ್ಟ್ ಸೈಜ್ ಫೋಟೋಗಳೊಂದಿಗೆ ಮೇಳಕ್ಕೆ ಬರಬೇಕು.

ಇದನ್ನೂ ಓದಿ | Rozgar Mela | 10 ಲಕ್ಷ ಉದ್ಯೋಗ ನೇಮಕಾತಿ ಅಭಿಯಾನ ರೋಜ್‌ಗಾರ ಮೇಳಕ್ಕೆ ಪ್ರಧಾನಿ ಮೋದಿ ಚಾಲನೆ

Exit mobile version