ಜೈಪುರ: 1971ರಲ್ಲಿ ಬಾಂಗ್ಲಾ ವಿಮೋಚನೆಗಾಗಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಿದ ಸ್ಮರಣಾರ್ಥ ದೇಶಾದ್ಯಂತ ‘ವಿಜಯ ದಿವಸ’ (ಡಿಸೆಂಬರ್ 16) ಆಚರಿಸಿ ಮೂರು ದಿನ ಆಗಿರುವ ಬೆನ್ನಲ್ಲೇ 1971ರ ಯುದ್ಧದ ವೀರ ಯೋಧ, ಲಾನ್ಸ್ ನಾಯಕ್ ಭೈರೋನ್ ಸಿಂಗ್ ರಾಠೋಡ್ (81) (Bhairon Singh Rathore) ಅವರು ಸೋಮವಾರ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭೈರೋನ್ ಸಿಂಗ್ ರಾಠೋಡ್ ಅವರು ರಾಜಸ್ಥಾನದ ಜೋಧ್‌ಪುರದಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಯೋಧ ನಿಧನರಾಗಿರುವ ಹಿನ್ನೆಲೆಯಲ್ಲಿ ಬಿಎಸ್‌ಎಫ್ ಸಂತಾಪ ಸೂಚಿಸಿದೆ. “ಬಿಎಸ್‌ಎಫ್‌ನ ವೀರ ಯೋಧ, ಸೇನಾ ಮೆಡಲ್ ಪುರಸ್ಕೃತ, 1971ರ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ಭೈರೋನ್ ಸಿಂಗ್ ರಾಠೋಡ್ ಅವರು ನಿಧನರಾಗಿದ್ದು, ಅವರ ಶೌರ್ಯ, ಧೈರ್ಯ, ಸಾಹಸಕ್ಕೆ ಬಿಎಸ್‌ಎಫ್ ನಮನ ಸಲ್ಲಿಸುತ್ತದೆ” ಎಂದು ಟ್ವೀಟ್ ಮಾಡಿದೆ.
1971ರ ಡಿಸೆಂಬರ್‌ನಲ್ಲಿ ರಾಜಸ್ಥಾನದ ಲೋಂಗೇವಾಲಾದಲ್ಲಿ ನಡೆದ ಯುದ್ಧದಲ್ಲಿ ಬಿಎಸ್‌ಎಫ್ ಯೋಧರು ಪಾಕ್ ಸೈನಿಕರ ವಿರುದ್ಧ ಅಪ್ರತಿಮ ಶೌರ್ಯ ಮೆರೆದಿದ್ದರು. ರಾಠೋಡ್ ಅವರು ಬಿಎಸ್‌ಎಫ್‌ನ 14ನೇ ಯೂನಿಟ್ ಸದಸ್ಯರಾಗಿದ್ದರು. ಇವರ ಶೌರ್ಯಕ್ಕಾಗಿ 1972ರಲ್ಲಿ ಸೇನಾ ಮೆಡಲ್ ನೀಡಿ ಗೌರವಿಸಲಾಗಿತ್ತು. ಇವರು 1987ರಲ್ಲಿ ನಿವೃತ್ತರಾಗಿದ್ದರು. ಲೋಂಗೇವಾಲಾದಲ್ಲಿ ನಡೆದ ಕದನದ ಕುರಿತೇ ‘ಬಾರ್ಡರ್’ ಸಿನಿಮಾ ನಿರ್ಮಿಸಲಾಗಿದೆ. ರಾಠೋಡ್ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ | Vijay Diwas | ವಿಜಯ ದಿವಸ್ ಇತಿಹಾಸ ತಿಳಿಯುವುದು ಯುವ ಜನಾಂಗಕ್ಕೆ ಅಗತ್ಯ