ನವದೆಹಲಿ: ಕಾಂಗ್ರೆಸ್‌ನ ವಿವಾದಿತ ನಾಯಕ, 1984ರಲ್ಲಿ ಸಾವಿರಾರು ಸಿಖ್ಖರ ಹತ್ಯೆಗೆ ಕಾರಣವಾದ ಸಿಖ್ ವಿರೋಧಿ ದಂಗೆಯ ಪ್ರಮುಖ ಆರೋಪಿ ಜಗದೀಶ್ ಟೈಟ್ಲರ್ (Jagdish Tytler) ಅವರಿಗೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ರಚಿಸಿರುವ ಚುನಾವಣೆ ಸಮಿತಿಯ ಸದಸ್ಯತ್ವ ನೀಡುವ ಮೂಲಕ ಕಾಂಗ್ರೆಸ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್ ಜಗದೀಶ್ ಟೈಟ್ಲರ್ ಅವರನ್ನು ದೂರವಿರಿಸಿತ್ತು. 1980ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದ ಜಗದೀಶ್ ಟೈಟ್ಲರ್ ಅವರಿಗೆ ಕಾಂಗ್ರೆಸ್, 1991 ಹಾಗೂ 2004ರ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಿತ್ತು. ಎರಡೂ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ್ದರು. ಆದರೆ, ಸಿಖ್ ವಿರೋಧಿ ದಂಗೆ ಕುರಿತು ನಾನಾವತಿ ಸಮಿತಿ ವರದಿ ಬಹಿರಂಗವಾಗುತ್ತಲೇ ಟೈಟ್ಲರ್ ರಾಜೀನಾಮೆ ನೀಡಿದ್ದರು. ಅದಾದ ಬಳಿಕ ಕಾಂಗ್ರೆಸ್ ಅಂತರ ಕಾಪಾಡಿಕೊಂಡಿತ್ತು. ಆದರೆ, ಈಗ ಚುನಾವಣೆ ಸಮಿತಿ ಸದಸ್ಯತ್ವ ನೀಡುವ ಮೂಲಕ ಕಾಂಗ್ರೆಸ್ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಸಿಖ್ಖರ ಗಾಯದ ಮೇಲೆ ಉಪ್ಪು ಸುರಿದಂತೆ ಎಂದ ಬಿಜೆಪಿ
“ಜಗದೀಶ್ ಟೈಟ್ಲರ್ ಅವರಿಗೆ ಹುದ್ದೆ ನೀಡುವ ಮೂಲಕ ಸಿಖ್ಖರ ಗಾಯದ ಮೇಲೆ ಕಾಂಗ್ರೆಸ್ ಉಪ್ಪು ಸುರಿದಿದೆ” ಎಂದು ಬಿಜೆಪಿ ವಕ್ತಾರ ಆರ್.ಪಿ.ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು. “ಸಿಖ್ ವಿರೋಧಿ ದಂಗೆ ಕುರಿತು ಕಾಂಗ್ರೆಸ್‌ಗೆ ಪಶ್ಚಾತ್ತಾಪವೇ ಇಲ್ಲ. ಇದೇ ಕಾರಣಕ್ಕೆ ರಾಜೀವ್ ಗಾಂಧಿ ತಂಡದಲ್ಲಿದ್ದ ಟೈಟ್ಲರ್ ಅವರಿಗೆ ಹುದ್ದೆ ನೀಡಲಾಗಿದೆ. ಇದು ಕಾಂಗ್ರೆಸ್‌ನ ನಿಜವಾದ ಮುಖವಾಡ” ಎಂದಿದ್ದಾರೆ.
ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯಾದ ಬಳಿಕ ಅಂದರೆ 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆಯಲ್ಲಿ ಸಾವಿರಾರು ಸಿಖ್ಖರನ್ನು ಹತ್ಯೆ ಮಾಡಲಾಗಿತ್ತು. ಇದರಲ್ಲಿ ಜಗದೀಶ್ ಟೈಟ್ಲರ್ ಅವರು ಪ್ರಮುಖ ಆರೋಪಿಯಾಗಿದ್ದಾರೆ.
ಇದನ್ನೂ ಓದಿ | MCD Election 2022 | ದೆಹಲಿ ಮಹಾನಗರ ಪಾಲಿಕೆಗೆ ಡಿಸೆಂಬರ್ 4ರಂದು ಚುನಾವಣೆ, ಬಿಜೆಪಿ, ಆಪ್ ಮಧ್ಯೆ ಪೈಪೋಟಿ