Site icon Vistara News

1984 anti sikh riots case: ಸಿಖ್ ವಿರೋಧಿ ದಂಗೆ ಆರೋಪಿ, ಕೈ ನಾಯಕ ಟೈಟ್ಲರ್ ಧ್ವನಿ ಮಾದರಿಯನ್ನು ಸಿಬಿಐ ಸಂಗ್ರಹಿಸಿದ್ದೇಕೆ?

1984 anti Sikh riots Case: CBI records congress leader Jagdish Tytler Voice Sample

ನವದೆಹಲಿ: 1984ರ ಸಿಖ್ ವಿರೋಧಿ ದಂಗೆಯ ಪ್ರಕರಣಕ್ಕೆ (1984 anti Sikh riots Case) ಸಂಬಂಧಿಸಿದಂತೆ, ಆರೋಪಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ (Jagdish Tytler) ಅವರ ಧ್ವನಿ ಮಾದರಿ(ವಾಯ್ಸ್ ಸ್ಯಾಂಪಲ್ಸ್) ಗಳನ್ನು ಕೇಂದ್ರ ತನಿಖಾ ದಳ (CBI) ಮಂಗಳವಾರ ಪಡೆದುಕೊಂಡಿದೆ. ದಿಲ್ಲಿಯ ಸಿಬಿಐ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಧ್ವನಿ ಮಾದರಿ ಸಂಗ್ರಹಿಸಲಾಗಿದೆ. 1984ರಲ್ಲಿ ರಾಜಧಾನಿಯ ದಿಲ್ಲಿಯ ಪುಲ್ ಬಂಗಾಶ್ ಪ್ರದೇಶದಲ್ಲಿ ಮೂರು ಜನರು ಸಾವಿನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಟೈಟ್ಲರ್‌ಗೆ ಸಮನ್ಸ್ ನೀಡಿತ್ತು. ಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಟೈಟ್ಲರ್ ಎದುರಿಸುತ್ತಿದ್ದಾರೆ.

ಮಂಗಳವಾರ ಕೇಂದ್ರ ವಿಧವಿಜ್ಞಾನ ಪ್ರಯೋಗಾಲಯಕ್ಕೆ ಜಗದೀಶ್ ಟೈಟ್ಲರ್ ಆಗಮಿಸಿದ್ದಾರೆ. ಧ್ವನಿ ಮಾದರಿ ಸಂಗ್ರಹಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. 39 ವರ್ಷಗಳ ಹಳೆಯ ಈ ದಂಗೆ ಪ್ರಕರಣದಲ್ಲಿ ಟೈಟ್ಲರ್ ವಿರುದ್ಧ ತಾಜಾ ಸಾಕ್ಷ್ಯ ದೊರೆತ ಹಿನ್ನೆಲೆಯಲ್ಲಿ ಜಗದೀಶ್ ಟೈಟ್ಲರ್ ಅವರ ಧ್ವನಿ ಮಾದರಿಯನ್ನು ಸಿಬಿಐ ಸಂಗ್ರಹಿಸುತ್ತಿದೆ.

ಏನಿದು ಸಿಖ್ ವಿರೋಧಿ ದಂಗೆ ಪ್ರಕರಣ?

1984ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಅಂಗರಕ್ಷಕರೇ ಗುಂಡಿಟ್ಟು ಕೊಲೆ ಮಾಡಿದರು. ಸಿಖ್ ಸಮುದಾಯದ ಪವಿತ್ರ ಕ್ಷೇತ್ರವಾದ ಅಮೃತಸರ ಸ್ವರ್ಣ ಮಂದಿರದಲ್ಲಿ ಖಲಿಸ್ತಾನಿ ಉಗ್ರರನ್ನು ಸದೆ ಬಡೆಯಲು ಇಂದಿರಾ ಅವರು ಆಪರೇಷನ್ ಬ್ಲೂಸ್ಟಾರ್ ಕೈಗೊಂಡಿದ್ದರು. ಇಂದಿರಾ ಹತ್ಯೆಯ ಬಳಿಕ, ದೆಹಲಿ ಸೇರಿದಂತೆ ದೇಶಾದ್ಯಂತ ಸಿಖ್ ವಿರೋಧಿ ದಂಗೆ ನಡೆಯಿತು. ಕನಿಷ್ಠ 3 ಸಾವಿರ ಜನರು ಈ ದಂಗೆಯಲ್ಲಿ ಪ್ರಾಣ ತೆತ್ತರು. ಸ್ವತಂತ್ರ ಮೂಲಗಳ ಪ್ರಕಾರ ಒಟ್ಟು 8 ಸಾವಿರ ಜನರು ಮೃತಪಟ್ಟಿದ್ದಾರೆ. ದಿಲ್ಲಿಯಲ್ಲೇ ಮೂರು ಸಾವಿರ ಜನರು ದಂಗೆಗೆ ಬಲಿಯಾಗಿದ್ದಾರೆ.

ಈ ದಂಗೆ ಕುರಿತು ಸಿಬಿಐ ವಿಚಾರಣೆ ನಡೆಸುತ್ತಿದೆ. ಈ ಹಿಂದೆ ಮೂರು ಬಾರಿ ಜಗದೀಶ್ ಟೈಟ್ಲರ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ. ಹಾಗಿದ್ದೂ, ಸಿಬಿಐ ಕೋರ್ಟ್ ಮಾತ್ರ ಈ ಕುರಿತು ವಿಚಾರಣೆ ನಡೆಸುವಂತೆ ಸೂಚಿಸುತ್ತಲೇ ಬಂದಿದೆ. ಈಗ ಹೊಸ ಸಾಕ್ಷ್ಯ ದೊರೆತಿರುವುದರಿಂದ ಸಿಬಿಐ ಜಗದೀಶ್ ಟೈಟ್ಲರ್ ಅವರ ಧ್ವನಿ ಪರೀಕ್ಷೆಗೆ ಮುಂದಾಗಿದೆ.

ಇದನ್ನೂ ಓದಿ: Jagdish Tytler | ಟೀಕೆ ಹಿನ್ನೆಲೆ ಭಾರತ್‌ ಜೋಡೋ ಯಾತ್ರೆಯಿಂದ ಹಿಂದೆ ಸರಿದ ಸಿಖ್‌ ವಿರೋಧಿ ದಂಗೆ ಆರೋಪಿ ಟೈಟ್ಲರ್

ಜಗದೀಶ್ ಟೈಟ್ಲರ್ ಮಾತ್ರವಲ್ಲದೇ, ಕಾಂಗ್ರೆಸ್‌ನ ಇತರ ನಾಯಕರಾದ ಸಜ್ಜನ್ ಕುಮಾರ್ ಹಾಗೂ ಕಮಲ್ ನಾಥ ಅವರ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು. ಸಜ್ಜನ್ ಕುಮಾರ್ ಅವರಂತೂ ಈ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

Exit mobile version