Site icon Vistara News

ISRO Spying Case | ನಂಬಿ ನಾರಾಯಣನ್‌ ವಿರುದ್ಧದ ಆರೋಪ ಸುಳ್ಳು, ಇದು ಜಾಗತಿಕ ಪಿತೂರಿ, ಕೇರಳ ಹೈಕೋರ್ಟ್‌ಗೆ ಸಿಬಿಐ ಮಾಹಿತಿ

ISRO Spying Case

ತಿರುವನಂತಪುರಂ: 1994ರಲ್ಲಿ ನಡೆದ ಇಸ್ರೊ ಬೇಹುಗಾರಿಕೆ (ISRO Spying Case) ಪ್ರಕರಣದಲ್ಲಿ ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ವಿರುದ್ಧದ ಆರೋಪಗಳು ಸುಳ್ಳು ಎಂದು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಯು ಕೇರಳ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಹಾಗೆಯೇ, “ನಂಬಿ ನಾರಾಯಣನ್‌ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಜಾಗತಿಕವಾಗಿ ಪಿತೂರಿ ನಡೆದಿದೆ” ಎಂದು ಮಾಹಿತಿ ನೀಡಿದೆ.

ನಂಬಿ ನಾರಾಯಣನ್‌ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಪಿತೂರಿ ನಡೆಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ವೇಳೆ ಕೇರಳ ಹೈಕೋರ್ಟ್‌ಗೆ ಸಿಬಿಐ ಮಾಹಿತಿ ನೀಡಿದೆ. “ಬೇಹುಗಾರಿಕೆ ಪ್ರಕರಣದಲ್ಲಿ ನಂಬಿ ನಾರಾಯಣನ್‌ ಅವರನ್ನು ಸಿಲುಕಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಿತೂರಿ ನಡೆದಿದೆ. ಅವರ ವಿರುದ್ಧ ಮಾಡಿದ ಎಲ್ಲ ಆರೋಪಗಳು ಸುಳ್ಳು” ಎಂದು ಸಿಬಿಐ ತಿಳಿಸಿದೆ. ಈಗಾಗಲೇ ಪ್ರಕರಣದಲ್ಲಿ ನಂಬಿ ನಾರಾಯಣನ್‌ ಅವರನ್ನು ಸುಪ್ರೀಂ ಕೋರ್ಟ್‌ ಖುಲಾಸೆಗೊಳಿಸಿದೆ. ಅವರಿಗೆ 50 ಲಕ್ಷ ರೂ. ಪರಿಹಾರವನ್ನೂ ಘೋಷಿಸಿದೆ.

ಏನಿದು ಪ್ರಕರಣ?
1994ರಲ್ಲಿ ಇಸ್ರೊ ಬಾಹ್ಯಾಕಾಶ ಯೋಜನೆಗಳ ದಾಖಲೆಗಳನ್ನು ಸಂಸ್ಥೆಯ ಇಬ್ಬರು ವಿಜ್ಞಾನಿಗಳು ಹಾಗೂ ಮಾಲ್ಡೀವ್ಸ್‌ನ ಇಬ್ಬರು ಮಹಿಳೆಯರು ಸೇರಿ ನಾಲ್ಕು ದೇಶಗಳಿಗೆ ಸೋರಿಕೆ ಮಾಡಲಾದ ಪ್ರಕರಣದಲ್ಲಿ ನಂಬಿ ನಾರಾಯಣನ್‌ ಸಿಲುಕಿದ್ದಾರೆ. ಆಗ ಅವರು ಇಸ್ರೊದ ಪ್ರಮುಖ ವಿಜ್ಞಾನಿಯಾಗಿದ್ದರು. ಇವರೂ ಮಾಹಿತಿ ಸೋರಿಕೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಬಂಧಿಸಲಾಗಿತ್ತು. ಆದರೆ, ಪ್ರಕರಣದಲ್ಲಿ ನಂಬಿ ನಾರಾಯಣನ್‌ ಅವರನ್ನು ಸುಪ್ರೀಂ ಕೋರ್ಟ್‌ ಖುಲಾಸೆಗೊಳಿಸಿದೆ. ನಂಬಿ ನಾರಾಯಣನ್‌ ಅವರ ಜೀವನ ಆಧರಿಸಿ ರಾಕೆಟ್ರಿ: ದಿ ನಂಬಿ ಎಫೆಕ್ಟ್‌ ಎಂಬ ಸಿನಿಮಾ ಕೂಡ ತೆರೆ ಕಂಡಿದೆ.

ಇದನ್ನೂ ಓದಿ | Rocketry: The Nambi Effect | ಸಿನಿಮಾಗಾಗಿ ಮನೆ ಕಳೆದುಕೊಂಡ್ರಾ ಮಾಧವನ್? ನಟ ಹೇಳಿದ್ದೇನು?

Exit mobile version