ನವದೆಹಲಿ: “ದೇಶದ ಏಳಿಗೆಗಾಗಿ ಯುವ ಮತದಾರರು ತಪ್ಪದೆ ಮತ ಚಲಾಯಿಸಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೊದಲ ಸಲ ಮತದಾನ ಮಾಡುತ್ತಿರುವವರಿಗೆ (First Time Voters) ಕಿವಿಮಾತು ಹೇಳಿದ್ದಾರೆ. ರಾಷ್ಟ್ರೀಯ ಮತದಾರರ ಹಿನ್ನೆಲೆಯಲ್ಲಿ ಆಯೋಜಿಸಿದ್ದ ನಮೋ ನವಮತದಾತ ಸಮ್ಮೇಳನದಲ್ಲಿ ವರ್ಚ್ಯುವಲ್ ವೇದಿಕೆ ಮೂಲಕ ಫಸ್ಟ್ ಟೈಮ್ ಮತದಾರರನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಇದೇ ವೇಳೆ ಅವರು ದೇಶದ ಜನತೆಗೆ ರಾಷ್ಟ್ರೀಯ ಮತದಾರರ ದಿನದ (National Voters Day) ಶುಭಾಶಯ ಕೋರಿದರು.
“ನೀವಿಗ (ಮೊದಲ ಸಲ ಮತ ಚಲಾಯಿಸುತ್ತಿರುವವರು) ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಭಾಗವಾಗುತ್ತಿದ್ದೀರಿ. ನಿಮ್ಮ ಹೆಸರು ಈಗ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಭಾರತವು ಅಮೃತ ಕಾಲದಲ್ಲಿದ್ದಾಗಲೇ ನೀವು ಮತದಾನ ಮಾಡುವ ಅದ್ಭುತ ಅವಕಾಶ ಪಡೆದಿದ್ದೀರಿ. ಭಾರತವು ಜಗತ್ತಿನಲ್ಲೇ ಅಭಿವೃದ್ಧಿಯ ಪರಾಕಾಷ್ಠೆ ತಲುಪಲು 25 ವರ್ಷ ಬೇಕಾಗುತ್ತದೆ. 2047ರ ವೇಳೆಗೆ ಭಾರತವು ಏಳಿಗೆಯ ಏಣಿ ಹತ್ತಬೇಕು ಎಂಬ ಮನೋಭಾವ ಇಟ್ಟುಕೊಂಡು ಎಲ್ಲ ಫಸ್ಟ್ ಟೈಮ್ ಮತದಾರರು ಮತ ಚಲಾಯಿಸಬೇಕು” ಎಂದು ಕರೆ ನೀಡಿದರು.
PM Shri @narendramodi's address at Namo Navmatdata Sammelan. #MeraPehlaVoteModiKohttps://t.co/t2zA2r49ur
— BJYM (@BJYM) January 25, 2024
“ಭಾರತವು 2047ರ ವೇಳೆಗೆ ಮತ್ತಷ್ಟು ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದೇಶವನ್ನು ಸೃಷ್ಟಿಸುವ ಶಕ್ತಿ ನಿಮ್ಮಲ್ಲಿದೆ. ಮುಂದಿನ 25 ವರ್ಷಗಳಲ್ಲಿ ನಿಮ್ಮ ಏಳಿಗೆಯ ಜತೆಗೆ ದೇಶವು ಅಭೂತಪೂರ್ವ ಏಳಿಗೆ ಹೊಂದುವ ಅವಶ್ಯಕತೆ ಇದೆ. ಹಾಗಾಗಿ, ನವ ಮತದಾರರು ಚುನಾವಣೆಯಲ್ಲಿ ತಪ್ಪದೆ ತಮ್ಮ ಹಕ್ಕು ಚಲಾಯಿಸಬೇಕು. ಇದರೊಂದಿಗೆ ನವ ಭಾರತ ನಿರ್ಮಾಣಕ್ಕೆ ನೀವು ಕೂಡ ಕೊಡುಗೆ ನೀಡಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿ: Lok Sabha Election: ಬುಲಂದ್‌ಶಹರ್‌ನಲ್ಲಿ ಲೋಕಸಭೆ ಚುನಾವಣೆಗೆ ಇಂದು ಮೋದಿ ರಣಕಹಳೆ
“ದೇಶದಲ್ಲಿ ಈಗ ಜನ ಈಗ ವಿಶ್ವಾಸಾರ್ಹತೆ ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು, ಭ್ರಷ್ಟಾಚಾರದ ಬಗ್ಗೆ ಅಲ್ಲ. ಭಾರತದ ಯಶಸ್ಸಿನ ಕತೆಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆಯೇ ಹೊರತು, ಹಗರಣಗಳ ಬಗ್ಗೆ ಅಲ್ಲ. ಇದಕ್ಕೂ ಮೊದಲು ಭಾರತವು ವಿಶ್ವದ ಐದು ಬೃಹತ್ ಆರ್ಥಿಕ ದೇಶಗಳ ಪಟ್ಟಿಯಲ್ಲಿ ಇರಲಿಲ್ಲ. ಆದರೀಗ ಭಾರತವು ವಿಶ್ವದಲ್ಲೇ ಬೃಹತ್ ಆರ್ಥಿಕತೆ ಹೊಂದಿರುವ ಐದನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ನಮ್ಮ ದೇಶವು ಮೂರನೇ ಬೃಹತ್ ಆರ್ಥಿಕತೆ ಹೊಂದಿರುವ ದೇಶವಾಗಲಿದೆ” ಎಂದು ಹೇಳಿದರು. ದೇಶದ ಸುಮಾರು 5 ಸಾವಿರ ಕಡೆ ಬಿಜೆಪಿಯು ನಮೋ ನವ ಮತದಾತ ಸಮ್ಮೇಳಣ ಆಯೋಜಿಸಿತ್ತು. ವರ್ಚ್ಯುವಲ್ ವೇದಿಕೆ ಮೂಲಕ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಫಸ್ಟ್ ಟೈಮ್ ವೋಟರ್ಸ್ ಭಾಗಿಯಾಗಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ