ರಾಜೌರಿ: ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಗಡಿ ನಿಯಂತ್ರಣಾ ರೇಖೆ ಬಳಿಯ ಕೇರಿ ಸೆಕ್ಟರ್ನಲ್ಲಿ ಸೇನಾ ಆಂಬ್ಯುಲೆನ್ಸ್ವೊಂದು ಅಪಘಾತಕ್ಕೀಡಾಗಿ, ಇಬ್ಬರು ಯೋಧರು (Army jawans killed) ಮೃತಪಟ್ಟಿದ್ದಾರೆ. ಇನ್ನೂ ಮೂವರು ಯೋಧರು ಗಾಯಗೊಂಡಿದ್ದಾರೆ. ಡುಂಗಿ ಗಲಾ ಎಂಬಲ್ಲಿ ಈ ದುರಂತ ಆಗಿದೆ. ಅಲ್ಲಿನ ತಿರುವಿನ ಬಳಿ ಚಾಲಕ ನಿಯಂತ್ರಣ ತಪ್ಪಿದ ಆಂಬ್ಯುಲೆನ್ಸ್ ಕಂದಕಕ್ಕೆ ಉರುಳಿಬಿದ್ದಿದೆ. ಮೃತ ಯೋಧರ ಶವವನ್ನು ಕಂದಕದಿಂದ ಹೊರ ತೆಗೆಯಲಾಗಿದೆ. ಗಾಯಗೊಂಡವರನ್ನು ಮೇಲೆತ್ತಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಹಲವು ಕಡಿದಾದ ರಸ್ತೆಗಳಿದ್ದು, ಈ ಹಿಂದೆಯೂ ಹಲವು ಸೇನಾ ವಾಹನಗಳು ಹೀಗೆ ಉರುಳಿ ಕಂದಕಕ್ಕೆ ಬಿದ್ದ ಉದಾಹರಣೆಗಳಿವೆ. ಬರಿ ಅಲ್ಲಿ ಮಾತ್ರವಲ್ಲ ಉತ್ತರ ಸಿಕ್ಕಿಂನಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ ದೊಡ್ಡ ಮಟ್ಟದ ಅಪಘಾತವಾಗಿತ್ತು. ಚಾಟೆನ್ನಿಂದ ತಂಗು ಕಡೆಗೆ ತೆರಳುತ್ತಿದ್ದ ಸೇನಾ ವಾಹನ ಆಳವಾದ ಇಳಿಜಾರಿನಲ್ಲಿ ಆಯತಪ್ಪಿ, ಕಂದಕಕ್ಕೆ ಬಿದ್ದು 16 ಯೋಧರು ಮತ್ತು ನಾಲ್ಕು ಮಂದಿ ಸಾರ್ವಜನಿಕರು ಮೃತಪಟ್ಟಿದ್ದರು.
ಇದನ್ನೂ ಓದಿ: Poonch Terror Attack: ಸೇನಾ ವಾಹನದ ಮೇಲೆ ದಾಳಿ ನಡೆಸಲು ಉಗ್ರರಿಗೆ ಸ್ಥಳೀಯರಿಂದಲೇ ಸಿಕ್ಕಿತ್ತು ನೆರವು