ಶ್ರೀನಗರ: ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ಮಿಲಿಟರಿ ಆಸ್ಪತ್ರೆ ಬಳಿ ಭಾರತೀಯ ಸೈನಿಕರ ಗುಂಡಿಗೆ ಇಬ್ಬರು ನಾಗರಿಕರು ಬಲಿಯಾಗಿದ್ದಾರೆ. ಇನ್ನೊಬ್ಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಇಬ್ಬರು ನಾಗರಿಕರ ಹತ್ಯೆ ಬೆನ್ನಲ್ಲೇ ಸ್ಥಳದಲ್ಲಿ ಪ್ರತಿಭಟನೆ ಪ್ರಾರಂಭವಾಗಿದೆ. ಸೇನಾ ಕ್ಯಾಂಪ್ಗೆ ಜನರು ಕಲ್ಲು ಹೊಡೆಯುತ್ತಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ಸೇನೆ, ‘ರಾಜೌರಿ ಸೇನಾ ಶಿಬಿರದ ಬಳಿ ಇಬ್ಬರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಆಗ ಅಲ್ಲಿ ಕಾವಲಿಗಿದ್ದ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ. ಇವರಿಬ್ಬರೂ ಸ್ಥಳೀಯ ನಾಗರಿಕರೇ ಆಗಿದ್ದಾರೆ’ ಎಂದು ತಿಳಿಸಿದೆ.
ಹತ್ಯೆಗೀಡಾದ ಇಬ್ಬರೂ ಹಮಾಲರಾಗಿದ್ದು, ಒಬ್ಬನ ಹೆಸರು ಶೈಲೇಂದ್ರ ಕುಮಾರ್ ಮತ್ತು ಇನ್ನೊಬ್ಬಾತ ಕಮಲ್ ಕಿಶೋರ್. ಇಂದು ಮುಂಜಾನೆ 6.15ರ ಹೊತ್ತಲ್ಲಿ ಸೇನೆಗೆ ಸಂಬಂಧಪಟ್ಟ ಯಾವುದೋ ಕೆಲಸಕ್ಕೇ ಸೇನಾ ಕ್ಯಾಂಪ್ನ ಗೇಟ್ ಬಳಿ ಬಂದಿದ್ದರು. ಇವರಿಬ್ಬರೂ ರಾಜೌರಿಯ ನಿವಾಸಿಗಳೇ ಆಗಿದ್ದಾರೆ. ಆರ್ಮಿ ಕ್ಯಾಂಪ್ ಬಳಿ ಇದ್ದ ಸೈನಿಕನೊಬ್ಬ ಗುಂಡು ಹಾರಿಸಿದ್ದಾಗಿ ವರದಿಯಾಗಿದೆ. ಆದರೆ ಫೈರಿಂಗ್ಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಗೊಂಡವನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ವಿಸ್ತಾರ Explainer | ಪಾಕಿಸ್ತಾನದ ಡ್ರೋನ್ ಉರುಳಿಸಲಿದೆ ಭಾರತೀಯ ಸೇನೆಯ ಗಿಡುಗ, ಹೇಗಿದರ ಆಪರೇಷನ್?