ಲಖನೌ: 2005ರಲ್ಲಿ ಉತ್ತರ ಪ್ರದೇಶದಲ್ಲಿ ಶ್ರಮಜೀವಿ ಎಕ್ಸ್‌ಪ್ರೆಸ್ ರೈಲು ಸ್ಫೋಟಿಸಿದ (Shramjeevi Express Train Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ನ್ಯಾಯಾಲಯವು ಇಬ್ಬರಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಬಾಂಗ್ಲಾದೇಶದ (Bangladesh) ನಾಗರಿಕ ಹಿಲಾಲುದ್ದೀನ್ ಹಾಗೂ ಪಶ್ಚಿಮ ಬಂಗಾಳ (West Bengal) ಮೂಲದ ನೈಫಿಕುಲ್ ವಿಶ್ವಾಸ್ ಎಂಬುವರಿಗೆ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ರಾಜೇಶ್ ಕುಮಾರ್ ರೈ ಅವರು ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ರೈಲು ಸ್ಫೋಟಿಸಿದ ಪ್ರಕರಣದಲ್ಲಿ 2016ರಲ್ಲಿ ಉತ್ತರ ಪ್ರದೇಶ ನ್ಯಾಯಾಲಯವು ಇಬ್ಬರಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಇದನ್ನು ಪ್ರಶ್ನಿಸಿದ ಇಬ್ಬರು ಅಪರಾಧಿಗಳು ಹೈಕೋರ್ಟ್ ಮೊರೆ ಹೋಗಿದ್ದು, ಹೈಕೋರ್ಟ್‌ನಲ್ಲಿಯೇ ಅರ್ಜಿ ಇದೆ. ಇನ್ನು ಪ್ರಕರಣದಲ್ಲಿ ಇಬ್ಬರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಇನ್ನೊಬ್ಬ ಆರೋಪಿಯು ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಲೇ ಇದ್ದಾರೆ. ಈಗ ಇನ್ನಿಬ್ಬರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
“ದುಷ್ಕರ್ಮಿಗಳು ರೈಲು ಸ್ಫೋಟಿಸಿದ ಕಾರಣ ಜನ ಹೆಚ್ಚು ನೋವು ಅನುಭವಿಸುವಂತಾಯಿತು. ಅಪರಾಧಿಗಳು ಮುಗ್ಧ ಜನರ ಜತೆ ಯಾವುದೇ ದ್ವೇಷ, ಶತ್ರುತ್ವ ಹೊಂದಿರಲಿಲ್ಲ. ಜನರಲ್ಲಿ ಭಯವನ್ನು ಹೆಚ್ಚಿಸುವ ಒಂದೇ ಒಂದು ದೃಷ್ಟಿಯಿಂದ ರೈಲು ಸ್ಫೋಟಿಸಲಾಗಿದೆ. ಇಂತಹ ಹೀನ ಹಾಗೂ ಕ್ರೂರ ಕೃತ್ಯ ಎಸಗಿದವರಿಗೆ ಕರುಣೆ ಅಥವಾ ದಯೆ ತೋರುವುದರಲ್ಲಿ ಯಾವುದೇ ಅರ್ಥ ಇರುವುದಿಲ್ಲ. ಹಾಗಾಗಿ, ಇಬ್ಬರಿಗೂ ಗಲ್ಲು ಶಿಕ್ಷೆ ವಿಧಿಸಲಾಗಿದೆ” ಎಂದು ನ್ಯಾಯಾಲಯವು 10 ಪುಟದ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: ಕತಾರ್‌ನಲ್ಲಿ ಗಲ್ಲು ಶಿಕ್ಷೆಯಿಂದ ನೌಕಾಪಡೆ ಅಧಿಕಾರಿಗಳು ಪಾರು; ಭಾರತಕ್ಕೆ ರಾಜತಾಂತ್ರಿಕ ಗೆಲುವು
2015ರಲ್ಲಿ ಏನಾಗಿತ್ತು?
ಅದು 2005ರ ಜುಲೈ 28ರ ಸಂಜೆ 5 ಗಂಟೆ. ಬಿಹಾರದಿಂದ ಪಟನಾ-ನ್ಯೂ ಡೆಲ್ಲಿ ರೈಲು ದೆಹಲಿಗೆ ಹೊರಟಿತ್ತು. ರೈಲು ಉತ್ತರ ಪ್ರದೇಶದ ಜೌನ್‌ಪುರ ರೈಲು ನಿಲ್ದಾಣ ಬಳಿ ಬರುತ್ತಲೇ ರೈಲಿನಲ್ಲಿ ಆರ್‌ಡಿಎಕ್ಸ್ ಸ್ಫೋಟಗೊಂಡಿತ್ತು. ಸ್ಫೋಟದ ತೀವ್ರತೆಗೆ ರೈಲಿನಲ್ಲಿದ್ದ 14 ಜನ ಮೃತಪಟ್ಟರೆ 62 ಮಂದಿ ಗಾಯಗೊಂಡಿದ್ದರು. ರೈಲು ಬೋಗಿಯ ಶೌಚಾಲಯದಲ್ಲಿ ಆರ್‌ಡಿಎಕ್ಸ್ ಸ್ಫೋಟಿಸಿದ್ದು ದೇಶಾದ್ಯಂತ ಸಂಚಲನ ಮೂಡಿಸಿತ್ತು. 2000ನೇ ಇಸವಿಯಲ್ಲಿ ಅಯೋಧ್ಯೆ ರೈಲು ಸ್ಫೋಟಿಸಿದ ಸ್ಫೋಟಕವನ್ನೇ ಶ್ರಮಜೀವಿ ಎಕ್ಸ್‌ಪ್ರೆಸ್ ರೈಲು ಸ್ಫೋಟಿಸಲು ಬಳಸಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ