Site icon Vistara News

Haryana Violence: ಹರ್ಯಾಣದಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ; ಇಬ್ಬರು ಹೋಮ್‌ಗಾರ್ಡ್ಸ್ ಸಾವು, 7 ಪೊಲೀಸರಿಗೆ ಗಾಯ

Haryana Violence

ನವದೆಹಲಿ: ಹರ್ಯಾಣದಲ್ಲಿ (Haryana Violence) ಧಾರ್ಮಿಕ ಮೆರವಣಿಗೆ ಮೇಲೆ ಕಲ್ಲು ತೂರಾಟ (Stone Pelting) ಮತ್ತು ಕಾರುಗಳಿಗೆ ಬೆಂಕಿ ಹಚ್ಚಿದ ಗುಂಪೊಂದು ಗುಂಡಿನ ದಾಳಿ ನಡೆಸಿದ್ದರಿಂದ ಇಬ್ಬರು ಗೃಹರಕ್ಷಕರು ಮೃತಪಟ್ಟಿದ್ದು(Home Guards Killed), ಏಳು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ವೇಳೆ ಹಿಂಸಾಚಾರ ನಡೆಸುತ್ತಿದ್ದ ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿ ಗಾಳಿಯಲ್ಲಿ ಗುಂಡು ಹಾರಿಸಿದರು. ಇಂಟರ್ನೆಟ್ (internet Shutdown) ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಕರ್ಫ್ಯೂ ಹೇರಲಾಗಿದೆ. ಏತನ್ಮಧ್ಯೆ, ಹಿಂಸಾಚಾರದಿಂದಾಗಿ ಗುರುಗ್ರಾಮ್ (Gurugram) ಬಳಿಯ ನೂಲ್ಹರ್ ಮಹಾದೇವ್ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದ ಸುಮಾರು 2,500 ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಪೊಲೀಸರು ರಕ್ಷಿಸಿ, ಸುರಕ್ಷಿತ ಪ್ರದೇಶಕ್ಕೆ ಕಳುಹಿಸಿದ್ದಾರೆ. ಇವರೆಲ್ಲರೂ ಧಾರ್ಮಿಕ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿದ್ದರು.

ಗುರುಗ್ರಾಮ್‌ಗೆ ಹೊಂದಿಕೊಂಡಿರುವ ನುಹ್‌ನಲ್ಲಿ ಧಾರ್ಮಿಕ ಮೆರವಣಿಗೆ ನಡೆಯುತ್ತಿತ್ತು. ವಿಶ್ವ ಹಿಂದೂ ಪರಿಷತ್‌ ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆಯನ್ನು ಆಯೋಜಿಸಿತ್ತು. ಯುವಕರಿದ್ದ ಗುಂಪೊಂದು ಗುರಗ್ರಾಮ್-ಅಲ್ವಾರ್ ರಾಷ್ಟ್ರೀಯ ಹೆದ್ದಾರಿ ಧಾರ್ಮಿಕ ಮೆರವಣಿಗೆಯನ್ನು ತಡೆದು, ಕಲ್ಲು ತೂರಾಟ ನಡೆಸಿತು. ಹಿಂಸಾಚಾರ ಭುಗಿಲೇಳುತ್ತಿದ್ದಂತೆ ಹೆದ್ದಾರಿಯಲ್ಲಿದ್ದ ಖಾಸಗಿ ಹಾಗೂ ಸರ್ಕಾರಿ ವಾಹನಗಳಿಗೆ ಗುಂಪು ಬೆಂಕಿ ಹಚ್ಚಿತು.

ಸಂಜೆಯ ಹೊತ್ತಿಗೆ ಹಿಂಸಾಚಾರವು ಗುರುಗ್ರಾಮ್-ಸೋಹ್ನಾ ಹೆದ್ದಾರಿಗೆ ಹರಡಿತು. ಅಲ್ಲಿ ಹಲವಾರು ಕಾರುಗಳಿಗೆ ಬೆಂಕಿ ಹಚ್ಚಲಾಯಿತು ಮತ್ತು ಪೊಲೀಸರ ಮೇಲೆ ಕಲ್ಲುಗಳನ್ನು ಎಸೆಯಲಾಯಿತು ಎಂದು ಮೂಲಗಳು ತಿಳಿಸಿವೆ. ಬಜರಂಗ ದಳ ಕಾರ್ಯಕರ್ತರೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಮಾಡಿದ ಅವಹೇಳನಕಾರಿ ಪೋಸ್ಟ್‌ ಈ ಹಿಂಸಾಚಾರಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Manipur violence: ಮಣಿಪುರದಲ್ಲಿ ಅಮಾನುಷ ಘಟನೆ; ಇಬ್ಬರು ಕುಕಿ ಮಹಿಳೆಯರ ಬೆತ್ತಲೆ ಮೆರವಣಿಗೆ ವಿಡಿಯೋ ಮುನ್ನೆಲೆಗೆ, ಭುಗಿಲೆದ್ದ ಆಕ್ರೋಶ

ಬಜರಂಗದಳದ ಕಾರ್ಯಕರ್ತ ಮೋನು ಮಾನೇಸರ್ ಮತ್ತು ಆತನ ಸಹಚರರು – ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ ಇತಿಹಾಸವನ್ನು ಹೊಂದಿದ್ದಾರೆ. ಕೆಲವು ದಿನಗಳ ಹಿಂದೆ ವೀಡಿಯೊವನ್ನು ಇವರು ಷೇರ್ ಮಾಡಿದ್ದರು. ಯಾತ್ರೆಯ ಸಮಯದಲ್ಲಿ ಮೇವಾತ್‌ನಲ್ಲಿ ಉಳಿಯುವುದಾಗಿ ಬಹಿರಂಗವಾಗಿ ಸವಾಲು ಹಾಕಿದ್ದರು ಎಂದು ಮೂಲಗಳು ತಿಳಿಸಿವೆ. ಸ್ಥಳೀಯರಿಗೆ ಮೋನು ಸವಾಲು ಹಾಕಿದ್ದೇ ಈ ಹಿಂಸಾಚಾರಕ್ಕೆ ಕಾರಣ ಎನ್ನಲಾಗುತ್ತಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version