ಜೈಪುರ: ರಾಜಸ್ಥಾನದ ʼಕೋಟಾʼ ನಗರ ಎಂದರೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಾವಿರಾರು ವಿದ್ಯಾರ್ಥಿಗಳು ತಯಾರಿ ನಡೆಸುವ ತಾಣ ಎಂದೇ ಖ್ಯಾತಿಯಾಗಿದೆ. ನೂರಾರು ಕೋಚಿಂಗ್ ಸೆಂಟರ್‌ಗಳು ಕೋಟಾ ನಗರವನ್ನು ವಿದ್ಯೆಯ ಕಾಶಿಯನ್ನಾಗಿಸಿವೆ. ಇಲ್ಲಿನ ಕೋಚಿಂಗ್ ಸೆಂಟರ್, ಸ್ಪರ್ಧಾತ್ಮಕ ಪರೀಕ್ಷೆಗೆ ನಡೆಸುವ ತಯಾರಿಯನ್ನು ಆಧರಿಸಿ ʼಕೋಟಾ ಫ್ಯಾಕ್ಟರಿʼ ಎಂಬ ವೆಬ್ ಸಿರೀಸ್ ಕೂಡ ಬಂದಿದೆ. ಇಂತಹ ಕೋಟಾ ಈಗ ಸೂಸೈಡ್ ಫ್ಯಾಕ್ಟರಿಯಾಗಿ ಪರಿಣಮಿಸಿದೆ. ಒಂದೇ ದಿನ ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು ಆತ್ಮಹತ್ಯೆ (Kota Suicides) ಮಾಡಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ.
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (NEET) ತಯಾರಿ ನಡೆಸುತ್ತಿದ್ದ ಮೆಹುಲ್ ವೈಷ್ಣವ್ (18) ಜೂನ್ 27ರಂದು ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎರಡು ತಿಂಗಳಿಂದ ಈತ ನೀಟ್ ತರಬೇತಿ ಪಡೆಯುತ್ತಿದ್ದ. ಆತನ ರೂಮ್‌ಮೇಟ್‌ಗಳು ರಾತ್ರಿ ಹೊರಗೆ ಹೋದಾಗ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಉದಯಪುರ ಜಿಲ್ಲೆಯವನು ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಮೆಹುಲ್ ವೈಷ್ಣವ್ ಕೋಣೆಯಲ್ಲಿ ಡೆತ್‌ನೋಟ್ ಪತ್ತೆಯಾಗಿಲ್ಲ.
ಜೂನ್ 27ರಂದೇ ಆದಿತ್ಯ ಎಂಬ ಮತ್ತೊಬ್ಬ ವಿದ್ಯಾರ್ಥಿ ಕೂಡ ಹಾಸ್ಟೆಲ್ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಇಬ್ಬರೂ ಯಾವುದೇ ಡೆತ್‌ನೋಟ್ ಬರೆದಿಟ್ಟಿಲ್ಲ. ಹಾಗಾಗಿ, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಅವರು ತರಬೇತಿ ಪಡೆಯುತ್ತಿದ್ದ ಕೋಚಿಂಗ್ ಸೆಂಟರ್‌ನಲ್ಲಿ, ಕಾಲೇಜ್‌ನಲ್ಲಿ ಒತ್ತಡ ಇರುವ ಕಾರಣದಿಂದ ಅಥವಾ ಭವಿಷ್ಯದ ಕುರಿತ ಅಭದ್ರತೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
2 ತಿಂಗಳಲ್ಲಿ 11 ವಿದ್ಯಾರ್ಥಿಗಳು ಆತ್ಮಹತ್ಯೆ
ಕಳೆದ ಎರಡು ತಿಂಗಳಲ್ಲಿ ಕೋಟಾದಲ್ಲಿ 11 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಮೇ ತಿಂಗಳಲ್ಲಿ 5 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರೆ, ಮೆಹುಲ್ ವೈಷ್ಣವ್ ಹಾಗೂ ಆದಿತ್ಯ ಅವರನ್ನು ಸೇರಿಸಿ ಜೂನ್‌ನಲ್ಲಿ 6 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭವಿಷ್ಯದ ಅಭದ್ರತೆ, ಪೋಷಕರ ಒತ್ತಡ, ಹಣಕಾಸು ತೊಂದರೆ ಸೇರಿ ಹಲವು ಕಾರಣಗಳಿಂದಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ