Site icon Vistara News

ಉತ್ತರ ಪ್ರದೇಶ ಯೋಗಿ ಸರ್ಕಾರದ ಇಬ್ಬರು ಸಚಿವರ ಮುನಿಸು; ರಾಜೀನಾಮೆ ನೀಡುವ ಸಾಧ್ಯತೆ

Yogi Adityanath

ಲಖನೌ: ಉತ್ತರ ಪ್ರದೇಶ ಬಿಜೆಪಿ ಸರ್ಕಾರದಲ್ಲಿ ನಿಧಾನವಾಗಿ ಆಂತರಿಕ ಕಲಹ ಪ್ರಾರಂಭವಾಗುತ್ತಿರುವ ಲಕ್ಷಣ ಗೋಚರಿಸುತ್ತದೆ. ಯೋಗಿ ಸರ್ಕಾರದಿಂದ ಇಬ್ಬರು ಸಚಿವರು ಬಂಡಾಯವೆದ್ದಿದ್ದು, ಶೀಘ್ರದಲ್ಲೇ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಯೋಗಿ ಸಂಪುಟ ಇದನ್ನು ನಿರಾಕರಿಸಿದೆ. ಯಾರೂ ಅಸಮಾಧಾನಗೊಂಡಿಲ್ಲ, ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದೆ. ಉತ್ತರ ಪ್ರದೇಶದ ಜಲಶಕ್ತಿ ಇಲಾಖೆ ರಾಜ್ಯ ಸಚಿವ ದಿನೇಶ್‌ ಖಾಟಿಕ್‌ ಮತ್ತು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಸಚಿವ ಜಿತಿನ್‌ ಪ್ರಸಾದ್‌ ಅವರಿಬ್ಬರೂ ತಮ್ಮ ಸಚಿವ ಸ್ಥಾನ ತೊರೆಯಲು ಸಿದ್ಧರಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ತಮ್ಮತಮ್ಮ ಇಲಾಖೆಯ ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಇಬ್ಬರೂ ಅಸಮಾಧಾನ ಹೊಂದಿದ್ದಾರೆ.

ಜಿತಿನ್‌ ಪ್ರಸಾದ್‌ ಕಾಂಗ್ರೆಸ್‌ನಲ್ಲಿದ್ದು, 2021ರ ಜೂನ್‌ನಲ್ಲಿ ಬಿಜೆಪಿಗೆ ಸೇರಿದವರು. ಉತ್ತರ ಪ್ರದೇಶದಲ್ಲಿ ಕಳೆದ ಅವಧಿ ಬಿಜೆಪಿ ಸರ್ಕಾರದಲ್ಲಿ, ಸೆಪ್ಟೆಂಬರ್‌ ತಿಂಗಳಿಂದ 2022ರ ಮಾರ್ಚ್‌ವರೆಗೆ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದರು. ಈ ಸಲ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಅವರಿಗೆ ಲೋಕೋಪಯೋಗಿ ಇಲಾಖೆ ನೀಡಲಾಗಿತ್ತು. ಈ ಖಾತೆ ಕಳೆದ ಅವಧಿಯಲ್ಲಿ ಕೇಶವ್‌ ಪ್ರಸಾದ ಮೌರ್ಯ (ಉತ್ತರ ಪ್ರದೇಶ ಉಪಮುಖ್ಯಮಂತ್ರಿ) ಕೈಯಲ್ಲಿತ್ತು. ಆದರೆ ಈಗ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ, ಜಿತಿನ್‌ ಪ್ರಸಾದ್‌ರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ಅನಿಲ್‌ ಕುಮಾರ್‌ ಪಾಂಡೆಯನ್ನು ವರ್ಗಾವಣೆ ಮಾಡಲಾಗಿದೆ ಮತ್ತು ಈ ಇಲಾಖೆಯ ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಆಗಿನಿಂದಲೂ ಜಿತಿನ್‌ ಪ್ರಸಾದ್‌ ತೀವ್ರ ಅಸಮಾಧಾನಗೊಂಡಿದ್ದು, ಅವರು ಇಂದು ದೆಹಲಿಗೆ ತೆರಳಿ ಅಮಿತ್‌ ಶಾರನ್ನು ಭೇಟಿಯಾಗಲಿದ್ದಾರೆ ಎಂದೂ ಹೇಳಲಾಗಿದೆ.

ಇನ್ನೊಬ್ಬ ಸಚಿವ ದಿನೇಶ್‌ ಖಾಟಿಕ್‌ ಜಲಸಂಪನ್ಮೂಲ ಇಲಾಖೆ ಕಿರಿಯ ಸಚಿವರು. ಈ ಇಲಾಖೆಗೆ ಮುಖ್ಯ ಸಚಿವ ಸ್ವತಂತ್ರ ದೇವ್‌ ಸಿಂಗ್‌. ದಿನೇಶ್‌ ಖಾಟಿಕ್‌ ಕೂಡ ತಮ್ಮ ಇಲಾಖೆಯಲ್ಲಿ ಕೆಲವು ಅಧಿಕಾರಿಗಳ ವರ್ಗಾವಣೆ ಆಗಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ. ಇವರು ಮಂಗಳವಾರ ನಡೆದ ಕ್ಯಾಬಿನೆಟ್‌ ಸಭೆಗೂ ಹಾಜರಾಗಿಲ್ಲ. ಇಲಾಖೆಯಲ್ಲಿ ಕೆಲಸಗಳನ್ನು ಸರಿಯಾಗಿ ಹಂಚಲಾಗುತ್ತಿಲ್ಲ. ಜವಾಬ್ದಾರಿ ನಿಭಾಯಿಸಲೂ ಸಾಧ್ಯವಾಗುತ್ತಿಲ್ಲ ಎಂದು ಇವರು ಕೋಪಗೊಂಡಿದ್ದಾರೆ. ಅಷ್ಟೇ ಅಲ್ಲ, ಸಚಿವ ಸ್ವತಂತ್ರ ದೇವ್‌ ಸಿಂಗ್‌ ವಿರುದ್ಧ ಯೋಗಿ ಆದಿತ್ಯನಾಥ್‌ಗೆ ದೂರು ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಇನ್ನೊಂದು ಮಾಹಿತಿಯ ಪ್ರಕಾರ, ದಿನೇಶ್‌ ಖಾಟಿಕ್‌ ಈಗಾಗಲೇ ರಾಜೀನಾಮೆ ಕೊಟ್ಟಾಗಿದೆ. ಆದರೆ ಅದನ್ನು ಅಧಿಕೃತಪಡಿಸುತ್ತಿಲ್ಲ.

ಇದನ್ನೂ ಓದಿ: ಉತ್ತರ ಪ್ರದೇಶದ ಬಿಜೆಪಿ ಶಾಸಕನಿಗೆ ಮಹಿಳೆಯರಿಂದ ಕೆಸರಿನ ಮಜ್ಜನ! ಏನಿದು ವಿಚಿತ್ರ ಆಚರಣೆ?

Exit mobile version