ಭೋಪಾಲ್: ಭಾರತದಲ್ಲಿ ಯಾವುದೇ ಮನೆಗೆ ಹೆಣ್ಣುಮಗಳೊಬ್ಬಳು ಮದುವೆಯಾಗಿ ಹೋದಳು ಎಂದರೆ ಆ ಮನೆಗೆ ಲಕ್ಷ್ಮೀ ಕಾಲಿಟ್ಟಳು ಎಂದೇ ನಂಬಲಾಗುತ್ತದೆ. ಮುಂದಿನ ಕಾರ್ಯಗಳೆಲ್ಲ ಶುಭವಾಗುತ್ತವೆ ಎಂಬ ನಂಬಿಕೆ ಇದೆ. ಆದರೆ, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಇಬ್ಬರು ಕಸಿನ್ ಬ್ರದರ್‌ಗಳನ್ನು ಮದುವೆಯಾದ ಇಬ್ಬರು ಸಹೋದರಿಯರು, ಆ ಮನೆಗೆ ಬೆಳಕಾಗುವ ಬದಲು ಲಕ್ಷಾಂತರ ರೂಪಾಯಿ ನಗದು, ಚಿನ್ನವನ್ನು ಕದ್ದು (Viral News) ಪರಾರಿಯಾಗಿದ್ದಾರೆ.
ಉತ್ತರ ಪ್ರದೇಶದ ಸಂಜನಾ ಚೌಹಾಣ್ ಹಾಗೂ ಅಂಜಲಿ ಚೌಹಾಣ್ ಎಂಬ ಇಬ್ಬರು ಸಹೋದರಿಯರು ಮಧ್ಯಪ್ರದೇಶದ ಗ್ವಾಲಿಯರ್‌ನ ದರ್ಪಣ ಕಾಲೊನಿ ನಿವಾಸಿಗಳಾದ ಭರತ್ ಗುಪ್ತಾ ಹಾಗೂ ರೋಹಿತ್ ಗುಪ್ತಾ ಎಂಬ ಕಸಿನ್ ಬ್ರದರ್‌ಗಳನ್ನು ಜೂನ್ 11ರಂದು ಮದುವೆಯಾಗಿದ್ದರು. ಮೊದ ಮೊದಲು ಮನೆ ತುಂಬ ಓಡಾಡಿಕೊಂಡು, ಎಲ್ಲರ ಜತೆ ಆತ್ಮೀಯವಾಗಿ ಬೆರೆತಂತೆ ನಾಟಕವಾಡಿದ ಇವರು, ಮನೆಯಲ್ಲಿದ್ದ 2.5 ಲಕ್ಷ ರೂಪಾಯಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.
ಇಬ್ಬರು ಸಹೋದರಿಯರೂ ಉತ್ತರ ಪ್ರದೇಶದ ಗೋರಖ್‌ಪುರದವರಾಗಿದ್ದಾರೆ. ಇಬ್ಬರ ವಿರುದ್ಧವೂ ಥಾತಿಪುರ ಪೊಲೀಸ್ ಠಾಣೆಯಲ್ಲಿ ಭರತ್ ಗುಪ್ತಾ ದೂರು ನೀಡಿದ್ದಾರೆ. “ಗೆಳೆಯರು ಹಾಗೂ ಸಂಬಂಧಿಕರು ಮಾಹಿತಿ ನೀಡಿದಂತೆ ಗೋರಖ್‌ಪುರದ ಸಂಜನಾ ಹಾಗೂ ಅಂಜಲಿ ಎಂಬುವರ ಜತೆ ನಾನು ಹಾಗೂ ನನ್ನ ಕಸಿನ್ ಬ್ರದರ್ ಜೂನ್ 9ರಂದು ನಿಶ್ಚಿತಾರ್ಥ ಮಾಡಿಕೊಂಡೆವು. ಜೂನ್ 11ರಂದು ನಮ್ಮ ಮದುವೆಯಾಯಿತು. ಮದುವೆಯಾದ ಐದು ದಿನದ ಬಳಿಕ ಹೈಕೋರ್ಟ್‌ನಲ್ಲಿ ಕೆಲಸವಿದ್ದ ಕಾರಣ ನಾನು ಮನೆಯಿಂದ ಹೋಗಿದ್ದೆ. ಇದೇ ವೇಳೆ ಇಬ್ಬರೂ ಸಹೋದರಿಯರು ಹಣ ಹಾಗೂ ಚಿನ್ನ ಕದ್ದು ಪರಾರಿಯಾಗಿದ್ದಾರೆ” ಎಂದು ಭರತ್ ಗುಪ್ತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Free Bus Service : 11 ತಿಂಗಳ ಮಗುವನ್ನು ಬಿಟ್ಟು ಪ್ರಿಯಕರನ ಬಳಿ ಓಡಿ ಬಂದ ಮಹಿಳೆ, ಇದಕ್ಕಿದೆ ಫ್ರೀ ಬಸ್ ಕನೆಕ್ಷನ್
ಮನೆಯಲ್ಲಿ ಭರತ್ ಗುಪ್ತಾ ತಾಯಿ ಹಾಗೂ ಸಹೋದರಿ ಇದ್ದರೂ, ಅವರಿಬ್ಬರ ಕಣ್ಣುತಪ್ಪಿಸಿ ಸಹೋದರಿಯರು ಪರಾರಿಯಾಗಿದ್ದಾರೆ. ಕೂಡಲೇ ಭರತ್ ಗುಪ್ತಾ ತಾಯಿಯು ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಗ, ಭರತ್ ಗುಪ್ತಾ ಇಬ್ಬರು ಸಹೋದರಿಯರಿಗೂ ಕರೆ ಮಾಡಿದ್ದಾರೆ. ಆದರೆ, ಅವರಿಬ್ಬರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು ಎಂಬುದಾಗಿ ಭರತ್ ಗುಪ್ತಾ ತಿಳಿಸಿದ್ದಾರೆ. ಒಟ್ಟಿನಲ್ಲಿ, ಮದುವೆಯಾಗಿ, ಅತ್ತೆ ಹಾಗೂ ಗಂಡನ ಮನೆಗೆ ಬೆಳಕಾಗಬೇಕಾದ ವಧುಗಳು ಮಾರಕವಾಗಿದ್ದಾರೆ. ಈಗ ಬೇರೆಯವರನ್ನು ಮದುವೆಯಾಗಲೂ ಭರತ್ ಗುಪ್ತಾ ಹಾಗೂ ರೋಹಿತ್ ಗುಪ್ತಾ ಭಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.