Site icon Vistara News

Sukhdev Singh Gogamedi : ಕರ್ಣಿಸೇನಾ ನಾಯಕನನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಮೂವರ ಬಂಧನ

Sukhdev murder case

ನವದೆಹಲಿ: ರಾಷ್ಟ್ರೀಯ ರಜಪೂತ್ ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೇಡಿ (Sukhdev Singh Gogamedi) ಅವರ ಮನೆಗೆ ನುಗ್ಗಿ ಹತ್ತಿರದಿಂದಲೇ ಹಲವು ಸುತ್ತು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶೂಟರ್ ಗಳು ಸೇರಿದಂತೆ ಮೂವರನ್ನು ಹರಿಯಾಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಪೊಲೀಸರು ಮತ್ತು ರಾಜಸ್ಥಾನ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆಯಲ್ಲಿ ರೋಹಿತ್ ರಾಥೋಡ್ ಮತ್ತು ನಿತಿನ್ ಫೌಜಿ ಎಂಬ ಇಬ್ಬರು ಶೂ ಟರ್​ಗಳನ್ನು ಶನಿವಾರ ಸಂಜೆ ಚಂಡೀಗಢದಲ್ಲಿ ಸೆರೆಯಾಗಿದ್ದಾರೆ .

ಶೂಟರ್​ಗಳ ಜತೆಗೆ ಅವರ ಇನ್ನೊಬ್ಬ ಸಹಚರ ಉಧಮ್ ಸಿಂಗ್ ಎಂಬಾತ ಕೂಡ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ನಾಲ್ವರನ್ನು ಬಂಧಿಸಿದಂತಾಗಿದೆ. ಇನ್ನೂಹಲವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಮನೆಗೆ ನುಗ್ಗಿ ಕೊಲೆ

ಶೂಟರ್​ಗಳಾದ ರೋಹಿತ್ ಮತ್ತು ನಿತಿನ್​ಗೆ ಕೊಲೆ ಮಾಡಿದ ಬಳಿಕ ಸ್ಥಳದಿಂದ ಪರಾರಿಯಾಗಲು ಸಹಾಯ ಮಾಡಿದ ಆರೋಪದ ಮೇಲೆ ರಾಜಸ್ಥಾನ ಪೊಲೀಸರು ಶನಿವಾರ ರಾಮ್ವೀರ್ ಜಾಟ್ ಎಂಬಾತನನ್ನು ಬಂಧಿಸಿದ್ದರು. ಆತನನ್ನು ವಿಚಾರಣೆ ನಡೆಸಿದ ಬಳಿಕ ಉಳಿದ ಮೂವರನ್ನು ಬಂಧನ ಮಾಡಿದ್ದಾರೆ.

ಕಳೆದ ಮಂಗಳವಾರ ಸುಖದೇವ್ ಸಿಂಗ್ ಗೋಗಮೇಡಿ ಅವರ ಮನೆಗೆ ನುಗ್ಗಿ ಆತ್ಮೀಯವಾಗಿ ಮಾತನಾಡಿದ್ದ ಅರೋಪಿಗಳು ಅವರ ಜತೆಯೇ ಚಹಾ ಸೇವಿಸಿದ್ದರು. ಬಳಿಕ ಪಾಯಿಂಟ್-ಬ್ಲಾಂಕ್ ರೇಂಜ್​ನಿಂದ ಅನೇಕ ಸುತ್ತು ಗುಂಡು ಹಾರಿಸಿದ್ದರು. ಸುಖ್​ದೇವ್ ಅವರ ಬಾಡಿಗಾರ್ಡ್​ಗಳು ಹಾಗೂ ಅರೋಪಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಒಬ್ಬ ಆರೋಪಿ ಸ್ಥಳದಲ್ಲೇ ಮೃತಪಟ್ಟಿದ್ದ. ರೋಹಿತ್ ರಾಥೋಡ್ ಮತ್ತು ನಿತಿನ್ ಫೌಜಿ ಪರಾರಿಯಾಗಿದ್ದರು.

ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ಗ್ಯಾಂಗ್​ಸ್ಟರ್​ ರೋಹಿತ್ ಗೋದಾರಾ ಈ ಕೊಲೆಯ ಹೊಣೆಯನ್ನು ವಹಿಸಿಕೊಂಡಿದ್ದ. ಫೇಸ್​ಬುಕ್​ನಲ್ಲಿ ಕೊಲೆ ಕುರಿತು ಬರೆದುಕೊಂಡಿದ್ದ. ವಿರೋಧಿಗಳ ಜತೆ ಕೈಜೋಡಿಸಿದ್ದೇ ಕೊಲೆಗೆ ಕಾರಣ ಎಂಬುದಾಗಿ ಬರೆದುಕೊಂಡಿದ್ದ.

ಇದನ್ನೂ ಓದಿ : Robbery Case : ವಾಹನ ಅಪಹರಿಸಿ 50 ಲಕ್ಷ ರೂ. ದರೋಡೆ, ಇಬ್ಬರ ಮೇಲೆ ಹಲ್ಲೆ

ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಸುಖ್​ದೇವ್​ ಗೋಗಮೇಡಿಯನ್ನು ಹತ್ಯೆ ಮಾಡಿದ ನಂತರ ಶೂಟರ್ ಗಳು ರೋಹಿತ್ ಗೋದಾರಾ ಅವರ ಆಪ್ತ ವೀರೇಂದ್ರ ಚೌಹಾಣ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶೂಟರ್ ಗಳ ಇದ್ದ ಸ್ಥಳವನ್ನು ಅವರ ಮೊಬೈಲ್ ಫೋನ್ ಗಳ ಲೊಕೇಷ್​ ಆಧರಿಸಿ ಪತ್ತೆಹಚ್ಚಲಾಗಿದೆ. ಅವರು ಮೊದಲು ಹಿಸಾರ್ಗೆ ರೈಲು ಮೂಲಕ ಪ್ರಯಾಣ ಮಾಡಿದ್ದರು. ಅಲ್ಲಿಂದ ಉಧಮ್ ಸಿಂಗ್ ಅವರೊಂದಿಗೆ ಮನಾಲಿಗೆ ಹೋಗಿದ್ದರು ಎಂದು ಅವರು ಪೊಲೀಸರು ತಿಳಿಸಿದ್ದಾರೆ. ಬಳಿಕ ಆರೋಪಿಗಳು ಒಂದು ದಿನ ಮಂಡಿಯಲ್ಲಿ ಪ್ರದೇಶದಲ್ಲಿ ಉಳಿದುಕೊಂಡಿದ್ದರು.ಮಂಡಿಯಿಂದ, ಮೂವರು ಪುರುಷರು ಚಂಡೀಗಢಕ್ಕೆ ಬಂದಿದ್ದರು. ಅಲ್ಲಿ ಪೊಲೀಸರು ಅವರಿಗೆ ಬಲೆ ಬೀಸಿದ್ದರು.

ಆತ್ಮೀಯವಾಗಿ ಮಾತನಾಡುತ್ತಲೇ ಸುಖ್​ದೇವ್ ಮೇಲೆ ಹಾರಿಸಿದ್ರು 5 ಗುಂಡು

ಬಲಪಂಥೀಯ ಸಂಸ್ಥೆಯಾಗಿರುವ ರಾಷ್ಟ್ರೀಯ ರಜಪೂತ್ ಕರ್ಣಿ ಸೇನಾದ ಮುಖ್ಯಸ್ಥ ಸುಖದೇವ್ ಸಿಂಗ್ ಗೋಗಮೇಡಿ (Sukhdev Singh Gogamedi) ಅವರನ್ನು ಹತ್ಯೆ ಮಾಡುವ ಮೊದಲು ಜೈಪುರದ ಅವರ ಮನೆಯಲ್ಲಿ ಆರೋಪಿಗು ಅವರೊಂದಿಗೆ ಚಹಾ ಸೇವಿಸಿದ್ದರು.

ಆಘಾತಕಾರಿ ವೀಡಿಯೊದಲ್ಲಿ ಆರೋಪಿಯು ಗುಂಡು ಹಾರಿಸುವ ಮೊದಲು ಅವರೊಂದಿಗೆ ಕುಳಿತು ಮಾತನಾಡಿದ್ದಾರೆ. ಏಕಾಏಕಿ ಎದ್ದು ಅವರ ಬೆಂಗಾವಲು ಸಿಬ್ಬಂದಿ ಸೇರಿದಂತೆ ಹಲವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಬಳಿಕ ಸುಖ್​ದೇವ್ ಅವರ ತಲೆಗೆ ರಿವಾಲ್ವರ್ ಇಟ್ಟು ಗುಂಡು ಹೊಡೆದಿದ್ದಾರೆ.

ಸಿಸಿಟಿವಿ ವೀಡಿಯೊದಲ್ಲಿ ದುಷ್ಕರ್ಮಿಗಳು ಸುಖ್​ದೇವ್ ಅವರು ಫೋನ್ ನೋಡುತ್ತಿರುವ ವೇಳೆ ಅವರ ಅವರಿಗೆ ಅರಿವಿಲ್ಲದ ಹೊತ್ತಿನಲ್ಲಿಯೇ ಗುಂಡು ಹಾರಿಸಿದ್ದಾರೆ. ಅವರ ಕಾವಲುಗಾರರಲ್ಲಿ ಒಬ್ಬರು ಬಂದೂಕುಧಾರಿಗಳನ್ನು ತಡೆಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಈ ವೇಳೆ ಗೂಂಡಾಗಳು ಅವರ ಮೇಲೆಯೂ ಗುಂಡು ಹಾರಿಸಿದ್ದಾರೆ.

“ದುಷ್ಕರ್ಮಿಗಳು ಸುಖದೇವ್ ಸಿಂಗ್ ಗೊಗಮೇಡಿ ಅವರನ್ನು ಗುಂಡಿಕ್ಕಿ ಕೊಲ್ಲುವ ಮೊದಲು ಕನಿಷ್ಠ 10 ನಿಮಿಷಗಳ ಕಾಲ ಅವರೊಂದಿಗೆ ಕುಳಿತಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version