ನವದೆಹಲಿ: ದೇಶ-ವಿದೇಶಗಳಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ನಿರತರಾಗಿರುವ ಖಲಿಸ್ತಾನಿ ಉಗ್ರರನ್ನು (Khalistani Terrorists) ಮಟ್ಟಹಾಕುವಲ್ಲಿ ದೆಹಲಿ ಪೊಲೀಸರು ಮಹತ್ವದ ಮುನ್ನಡೆ ಸಾಧಿಸಿದ್ದಾರೆ. ಕೆನಡಾ ಖಲಿಸ್ತಾನಿ ಉಗ್ರ ಅರ್ಶ್‌ದೀಪ್ ಸಿಂಗ್ ದಲ್ಲಾ (ಆರ್ಶ್ ದಲ್ಲಾ) ಗ್ಯಾಂಗ್‌ನ (Arsh Dalla Gang) ಇಬ್ಬರು ಶೂಟರ್‌ಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಶೂಟರ್‌ಗಳನ್ನು ಬಂಧಿಸಿದ್ದಾರೆ.
ದೆಹಲಿಯ ಮಯೂರ ವಿಹಾರದಲ್ಲಿ ಖಲಿಸ್ತಾನಿ ಉಗ್ರರು ಅಡಗಿದ್ದಾರೆ ಎಂಬ ಕುರಿತು ನಿಖರ ಮಾಹಿತಿ ಪಡೆದ ದೆಹಲಿ ಪೊಲೀಸ್ ಇಲಾಖೆಯ ಸೆಷಲ್ ಸೆಲ್ ವಿಭಾಗದ ಪೊಲೀಸರು ಎನ್‌ಕೌಂಟರ್ ಆರಂಭಿಸಿದ್ದಾರೆ. ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ ಪೊಲೀಸರು ಸೋಮವಾರ ಬೆಳಗ್ಗೆ ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಪರಾರಿಯಾಗಲು ಯತ್ನಿಸಿದ ಶೂಟರ್‌ಗಳ ಕಾಲಿಗೆ ಗುಂಡು ಹಾರಿಸುವ ಮೂಲಕ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
#WATCH | Delhi: After a brief encounter last night, Delhi police special cell arrested two shooters of Arsh Dalla gang from Mayur Vihar area pic.twitter.com/JJTQYC1vQp
— ANI (@ANI) November 27, 2023
ಬಂಧಿತ ಇಬ್ಬರೂ ಶೂಟರ್‌ಗಳು ಪರೋಲ್ ಮೇಲೆ ಬಿಡುಗಡೆಯಾಗಿ, ಪಂಜಾಬ್‌ನಿಂದ ಪರಾರಿಯಾಗಿದ್ದರು. ಇವರು ಪಂಜಾಬಿ ಗಾಯಕರೊಬ್ಬರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ಇವರಿಬ್ಬರೂ ಖಲಿಸ್ತಾನಿ ಉಗ್ರ ಅರ್ಶ್ ದಲ್ಲಾ ಗ್ಯಾಂಗ್‌ನ ಶೂಟರ್‌ಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಪಂಜಾಬ್‌ನಲ್ಲಿ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಅರ್ಶ್ ದಲ್ಲಾ, 2020ರಲ್ಲಿ ಕೆನಡಾಗೆ ಪರಾರಿಯಾಗಿದ್ದಾನೆ. ಈತನ ವಿರುದ್ಧ ಹಲವು ಕೇಸ್‌ಗಳು ದಾಖಲಾಗಿದ್ದು, ಎನ್‌ಐಎ ಕೂಡ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ದೀಪಾವಳಿ ಆಚರಣೆ ವೇಳೆ ಹಿಂದುಗಳ ಮೇಲೆ ಖಲಿಸ್ತಾನಿಗಳ ದಾಳಿ; ಕಲ್ಲು ತೂರಿದ ಉಗ್ರರು!
ದೆಹಲಿ ಪೊಲೀಸರು ಖಲಿಸ್ತಾನಿ ಉಗ್ರರು ಹಾಗೂ ಅವರ ಆಪ್ತರ ವಿರುದ್ಧ ಸಮರ ಸಾರಿದ್ದಾರೆ. ಅಕ್ಟೋಬರ್ 12ರಂದು ಕೂಡ ದಲ್ಲಾ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಅಕ್ಟೋಬರ್ 7ರಂದು ಅರ್ಶ್ ದಲ್ಲಾನ ಆಪ್ತ ಹರ್ಜೀತ್ ಸಿಂಗ್ ಎಂಬಾತನನ್ನು ಬಂಧಿಸಿದ್ದರು. ಕೆನಡಾದಲ್ಲಿರುವ ಅರ್ಶ್ ದಲ್ಲಾ, ಹತ್ತಾರು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬ ಆರೋಪವಿದೆ. ಇನ್ನು ಖಲಿಸ್ತಾನಿ ಉಗ್ರರ ವಿಷಯಕ್ಕೆ ಸಂಬಂಧಿಸಿದಂತೆಯೇ ಕೆಲ ತಿಂಗಳಿಂದ ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ