Site icon Vistara News

Kashmir Encounter: ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಅಟ್ಟಹಾಸ; ಇಬ್ಬರು ಯೋಧರು ಹುತಾತ್ಮ

Kashmir Encounter

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಸೈನಿಕರನ್ನು ಗುರಿಯಾಗಿಸಿ ದಾಳಿ ಮಾಡುವುದನ್ನು ಉಗ್ರರು ಮುಂದುವರಿಸಿದ್ದು, ಅನಂತನಾಗ್‌ ಜಿಲ್ಲೆಯಲ್ಲಿ (Anantnag District) ನಡೆದ ಗುಂಡಿನ ಚಕಮಕಿಯಲ್ಲಿ (Kashmir Encounter) ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಗುಂಡಿನ ಚಕಮಕಿಯ ವೇಳೆ ಇಬ್ಬರು ನಾಗರಿಕರು ಕೂಡ ಗಾಯಗೊಂಡಿದ್ದಾರೆ. ಇದಾದ ಬಳಿಕವೂ ಭದ್ರತಾ ಸಿಬ್ಬಂದಿಯು ಎನ್‌ಕೌಂಟರ್‌ ನಡೆದ ಜಾಗವನ್ನು ಸುತ್ತುವರಿದಿದ್ದು, ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

ಅನಂತನಾಗ್‌ ಜಿಲ್ಲೆಯ ಅಲ್ಹಾನ್‌ ಗಡೋಲೆ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ನಿಖರ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ಆರಂಭಿಸಿದ್ದರು. ಇದೇ ವೇಳೆ ಉಗ್ರರು ಕೂಡ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆಗ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ಜಮ್ಮು ಕಾಶ್ಮೀರದ ಪೊಲೀಸರು ಮಾಹಿತಿ ನೀಡಿದ್ದಾರೆ. ಇದಾದ ಬಳಿಕವೇ ಹೆಚ್ಚಿನ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿ ಉಗ್ರರಿಗಾಗಿ ಶೋಧ ನಡೆಸುತ್ತಿದ್ದಾರೆ.

“ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ವೇಳೆ ಇಬ್ಬರು ಯೋಧರು ಹುತಾತ್ಮರಾಗಿರುವ ಜತೆಗೆ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದಾಗ್ಯೂ, ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ಮುಂದುವರಿಸಿದ್ದಾರೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು ಪಾಕಿಸ್ತಾನದ ಉಗ್ರರಾಗಿರಬಹುದು ಎಂದು ಶಂಕಿಸಲಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರ ಉಪಟಳ ಜಾಸ್ತಿಯಾಗಿರುವ ಕಾರಣ ಭಾರತೀಯ ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಲೇ ಇರುತ್ತಾರೆ. ಜುಲೈ 6 ಮತ್ತು 7 ರಂದು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಗುಂಡಿನ ಚಕಮಕಿಗಳಲ್ಲಿ ಭದ್ರತಾ ಪಡೆಗಳು ಆರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದವು. ಇದಾದ ನಂತರವೂ ಉಗ್ರರ ದಾಳಿಗಳು ಮುಂದುವರಿದಿವೆ. ಸೈನಿಕರು, ಸೇನಾ ನೆಲಗಳು, ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: Terrorist Attack: ಕುಪ್ವಾರ ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಹುತಾತ್ಮ: ಪಾಕ್‌ ಉಗ್ರನನ್ನು ಹೊಡೆದುರುಳಿಸಿದ ಸೇನೆ

Exit mobile version