ನವ ದೆಹಲಿ: ಭಾರತದಲ್ಲಿ ಬಲಪಂಥೀಯ ಹಿಂದೂ ನಾಯಕರ ಹತ್ಯೆಗೆ ಪಾಕಿಸ್ತಾನದಲ್ಲಿ ಸಂಚು ನಡೆಯುತ್ತಿದೆಯಾ? ಹಿಂದು ಪ್ರಮುಖ ನಾಯಕರನ್ನು ಕೊಲ್ಲಲೆಂದೇ ತರಬೇತಿ ಕೊಡಲಾಗುತ್ತಿದೆಯಾ?-ಇದೀಗ ನಡೆದಿರುವ ಘಟನೆಯೊಂದು ಈ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ದೆಹಲಿಯಲ್ಲಿ 21 ವರ್ಷದ ಯುವಕನೊಬ್ಬನನ್ನು ತಲೆ ಕತ್ತರಿಸಿ ಕೊಂದವರಿಬ್ಬರಿಗೆ ಪಾಕಿಸ್ತಾನದ ಐಎಸ್ಐ ಜತೆ ಸಂಪರ್ಕ ಇರುವುದು ಗೊತ್ತಾಗಿದೆ. ಹಾಗೇ, ಮುಂಬರುವ ದಿನಗಳಲ್ಲಿ ಇಂಥ ಹತ್ತು-ಹಲವು ಹತ್ಯೆ ಮಾಡಲು ತಮಗೆ ಸಾಮರ್ಥ್ಯವಿದೆ ಎಂಬುದನ್ನು ತಮ್ಮ ಹಿರಿಯ ಉಸ್ತುವಾರಿ ವ್ಯಕ್ತಿಗಳ ಎದುರು ಸಾಬೀತುಪಡಿಸಲೆಂದೇ ಈ ಇಬ್ಬರು ದೆಹಲಿಯಲ್ಲಿ ಹುಡುಗನ ಹತ್ಯೆ ಮಾಡಿದ್ದಾರೆ. ಮತ್ತು ತಾವು ಆತನನ್ನು ಕತ್ತರಿಸಿ-ಬರ್ಬರವಾಗಿ ಕೊಂದ ವಿಡಿಯೊವನ್ನು ಪಾಕಿಸ್ತಾನದಲ್ಲಿರುವ ತಮ್ಮ ಹಿರಿಯರಿಗೆ ಕಳಿಸಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
ಜಗ್ಜಿತ್ ಸಿಂಗ್ ಮತ್ತು ನೌಶಾದ್ ಎಂಬ ಶಂಕಿತ ಉಗ್ರರು ದೆಹಲಿಯಲ್ಲಿ 21 ವರ್ಷದ ಹುಡುಗನನ್ನು ತಲೆ ಕತ್ತರಿಸಿ ಕೊಂದಿದ್ದಾರೆ. ಇವರಿಬ್ಬರನ್ನೂ ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ. ಭಾಲ್ಸ್ವಾ ಏರಿಯಾದಲ್ಲಿರುವ ಒಂದು ಚರಂಡಿಯಲ್ಲಿ ಕೊಲೆಯಾದ ಹುಡುಗನ ದೇಹದ ಅಂಗಗಳು ಸಿಕ್ಕಿವೆ. ಅಷ್ಟೇ ಅಲ್ಲ, ಆತನನ್ನು ಹತ್ಯೆ ಮಾಡಿದ್ದಕ್ಕೆ ಪ್ರತಿಯಾಗಿ ಜಗ್ಜಿತ್ ಸಿಂಗ್ ಮತ್ತು ನೌಶಾದ್ ಇಬ್ಬರಿಗೂ ತಲಾ 5 ಲಕ್ಷ ರೂಪಾಯಿ ಕೊಡಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ‘ತಾವೂ ಉಗ್ರ ಸಂಘಟನೆಯಲ್ಲಿ ಉಳಿಯಲ್ಲಿ ಇರುವಷ್ಟು ಸಮರ್ಥರಾಗಿದ್ದೇವೆ. ಮುಂದಿನ ದಿನಗಳಲ್ಲಿ ಯಾರನ್ನೇ ಹೇಳಿದರೂ, ಅವರನ್ನು ಗುರುತು ಪತ್ತೆ ಹಚ್ಚಿ, ಕೊಲೆ ಮಾಡಲು ಸಶಕ್ತರಿದ್ದೇವೆ’ ಎಂಬುದನ್ನು ತಮ್ಮ ಉಗ್ರಸಂಘಟನೆಯಾದ ಲಷ್ಕರೆ ತೊಯ್ಬಾ ನಾಯಕರಿಗೆ ತೋರಿಸಲೆಂದೇ ಈ ಹುಡುಗನ ಹತ್ಯೆ ಮಾಡಲಾಗಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಮುಂದಿನ ದಿನಗಳಲ್ಲಿ ಪ್ರಮುಖ ಬಲಪಂಥೀಯ ರಾಜಕೀಯ ನಾಯಕರನ್ನು ಪತ್ತೆ ಹಚ್ಚಿ ಕೊಲ್ಲಲೆಂದೇ ಲಷ್ಕರೆ ತೊಯ್ಬಾದ ಈ ಇಬ್ಬರು ಹುಡುಗರನ್ನು ನಿಯೋಜಿಸಲಾಗಿತ್ತು. ಅದಕ್ಕೂ ಮುನ್ನ ಅವರು ಸಾಮರ್ಥ್ಯ ಸಾಬೀತು ಮಾಡಬೇಕಿತ್ತು. ಹೀಗಾಗಿ ಜಗಜಿತ್ ಸಿಂಗ್ ಮತ್ತು ನೌಶಾದ್ ಇಬ್ಬರೂ ಸೇರಿ ಹತ್ಯೆಯೊಂದನ್ನು ಮಾಡಲು ಸಿದ್ಧರಾದರು. ಕೈ ಮೇಲೆ ತ್ರಿಶೂಲ ಚಿತ್ರ ಇರುವ ಹುಡುಗನೊಬ್ಬನನ್ನು ನೋಡಿ, ಆತ ಪಕ್ಕಾ ಹಿಂದು ಎಂಬುದನ್ನು ಅರಿತ ಜಗಜಿತ್ ಮತ್ತು ನೌಶಾದ್ ಆತನ ಸ್ನೇಹ ಮಾಡಿದರು. ಆ ಹುಡುಗ ಒಬ್ಬ ಡ್ರಗ್ಸ್ ಅಡಿಕ್ಟ್ ಆಗಿದ್ದ. ಇದು ಉಗ್ರರ ಪಾಲಿಗೆ ಕೆಲಸ ಸುಲಭ ಮಾಡಿತು. ಹುಡುಗನಿಗೆ ಮದ್ಯ ಮತ್ತಿತರ ಮಾದಕ ವಸ್ತುಗಳ ಆಮಿಷ ತೋರಿಸಿ, ತಮ್ಮ ಬಲೆಗೆ ಬೀಳಿಸಿಕೊಂಡರು. ನಂತರ ಆತನನ್ನು ಕೊಂದು, ಇಡೀ ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿದ್ದಾರೆ. ಇವರಿಬ್ಬರ ಬಂಧನವಾಗಿದ್ದರಿಂದ ಮುಂದೆ ಆಗಬಹುದಾಗಿದ್ದ ದೊಡ್ಡ ಅನಾಹುತಗಳನ್ನು, ಪ್ರಮುಖರ ಹತ್ಯೆಯಾಗುವುದನ್ನು ತಡೆದಂತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರಮೋದ್ ಸಿಂಗ್ ಕುಶ್ವಾಹ್ ತಿಳಿಸಿದ್ದಾರೆ.
ಉಗ್ರರು-ಗ್ಯಾಂಗ್ಸ್ಟರ್ ಲಿಂಕ್
ಗಡಿಯಾಚೆಗಿನ ಭಯೋತ್ಪಾದಕರು ಮತ್ತು ಗ್ಯಾಂಗ್ಸ್ಟರ್ಗಳೆಲ್ಲ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಇಲ್ಲಿ ಜಗಜಿತ್ ಸಿಂಗ್ ಮೂಲತಃ ಸಿಖ್. ಈತನ ನಾಯಕ ಅರ್ಶ್ದೀಪ್ ಸಿಂಗ್ ಗಿಲ್. ಇವನು ಗ್ಯಾಂಗ್ಸ್ಟರ್ ಆಗಿದ್ದು, ಈಗ ಉಗ್ರನಾದವನು. ಹಾಗೇ, ನೌಶಾದ್ ಎಂಬಾತ ಲಷ್ಕರೆ ತೊಯ್ಬಾದ ಸದಸ್ಯ. ಇವರನ್ನೆಲ್ಲ ನಿಯಂತ್ರಿಸುತ್ತಿರುವುದು ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಎಂದು ಹೇಳಲಾಗಿದೆ.
ಇದನ್ನೂ ಓದಿ: Kashmiri Pandits | ಕಾಶ್ಮೀರದಲ್ಲಿ ಪಂಡಿತರ ಪಟ್ಟಿ ತಯಾರಿಸಿದ ಉಗ್ರರು, ಮತ್ತೆ ನರಮೇಧ ಶುರು?