ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಬುಧವಾರ ಬೆಳಗ್ಗೆಯೇ ಸೇನೆಯು ಭರ್ಜರಿ ಕಾರ್ಯಾಚರಣೆ ನಡೆಸಿ, ಇಬ್ಬರು ಉಗ್ರರನ್ನು (Terrorists Killed) ಸದೆಬಡಿದೆ. ಕುಪ್ವಾರ ಜಿಲ್ಲೆ ಮಚ್ಚಲ್ ವಲಯದ ಗಡಿ ನಿಯಂತ್ರಣ ರೇಖೆ (LoC) ದಾಟಿ ಒಳನುಸುಳುತ್ತಿದ್ದ ಇಬ್ಬರು ಉಗ್ರರನ್ನು ಹತ್ಯೆಗೈದಿರುವ ಸೇನೆಯು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಭಾರತೀಯ ಸೇನೆ, ಗಡಿ ಭದ್ರತಾ ಪಡೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ್ದಾರೆ.
ಭದ್ರತಾ ಸಿಬ್ಬಂದಿಯು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ಕಣಿವೆಯಲ್ಲಿ ಭಾರಿ ಪ್ರಮಾಣದಲ್ಲಿ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ತಿಳಿದುಬಂದಿದೆ. “ಕಾರ್ಯಾಚರಣೆ ವೇಳೆ ಉಗ್ರರು ಯುದ್ಧಕ್ಕೆ ಸನ್ನದ್ಧರಾದ ರೀತಿ ಸಂಗ್ರಹಿಸಲಾಗದ್ದ ಶಶ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಲ್ಕು ಎಕೆ 47 ರೈಫಲ್‌ಗಳು, ಆರು ಹ್ಯಾಂಡ್ ಗ್ರೆನೇಡ್‌ಗಳು ಸೇರಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಮಾಹಿತಿ ನೀಡಿದೆ.
In a joint operation carried by Army, Kupwara Police & BSF, two terrorists have been killed in Machhal sector in an operation. Two dead bodies of terrorists along with arms & ammunition have been recovered. Operation in progress. Details shall follow: ADGP Kashmir@JmuKmrPolice
— Kashmir Zone Police (@KashmirPolice) July 19, 2023
ಕಾರ್ಯಾಚರಣೆ ಕುರಿತು ಕಾಶ್ಮೀರ ವಲಯ ಪೊಲೀಸ್ ಟ್ವಿಟರ್ ಖಾತೆಯಿಂದಲೂ ಮಾಹಿತಿ ದೃಢಪಡಿಸಲಾಗಿದೆ. “ಜಂಡಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಇಬ್ಬರು ಉಗ್ರರ ಶವಗಳು ಪತ್ತೆಯಾಗಿದ್ದು, ಇನ್ನೂ ಕಾರ್ಯಾಚರಣೆ ಮುಂದುವರಿದಿದೆ” ಎಂದು ತಿಳಿಸಿದೆ. ಆದಾಗ್ಯೂ, ಇಬ್ಬರೂ ಉಗ್ರರು ಯಾವ ಉಗ್ರ ಸಂಘಟನೆಗೆ ಸೇರಿದವರು ಎಂಬ ಕುರಿತು ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬೆಂಗಳೂರಲ್ಲಿ ಐವರು ಶಂಕಿತ ಉಗ್ರರ ಬಂಧನ; ಭಾರಿ ವಿಧ್ವಂಸಕ ಕೃತ್ಯಕ್ಕೆ ನಡೆದಿತ್ತು ಪ್ಲ್ಯಾನ್!
ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಕಾಶ್ಮೀರಿ ಪಂಡಿತರು, ಹಿಂದುಗಳು ಹಾಗೂ ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ಹೆಚ್ಚಿನ ಪ್ರಮಾಣದಲ್ಲಿ ದಾಳಿಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದಷ್ಟೇ ಮೂವರು ವಲಸೆ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಹೀಗೆ, ಸರಣಿಯಾಗಿ ದಾಳಿ ನಡೆಸಲು ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಲಾಗುತ್ತಿದೆ. ಇದರ ಭಾಗವಾಗಿಯೇ ಬುಧವಾರ ಒಳನುಸುಳಲು ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ.