ಜಮ್ಮು-ಕಾಶ್ಮಿರದ ರಾಜೌರಿ ಜಿಲ್ಲೆಯ ಡಾಂಗ್ರಿ ಎಂಬ ಹಳ್ಳಿಯಲ್ಲಿ ಜನವರಿ 1ರಂದು ನಡೆದ ಉಗ್ರದಾಳಿ (Rajouri Terror Attack)ಯಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಹಾಗೆ ಇನ್ನೊಂದೆಡೆ, ಅಂದು ಡಾಂಗ್ರಿಯಲ್ಲಿ ದಾಳಿ ನಡೆಸಿದ್ದ ಇಬ್ಬರು ಭಯೋತ್ಪಾದಕರನ್ನು ಶನಿವಾರ ಸಂಜೆ ಭಾರತೀಯ ರಕ್ಷಣಾ ಪಡೆ ಸಿಬ್ಬಂದಿ ಕೊಂದು ಹಾಕಿದ್ದಾರೆ. ಬಾಲಾಕೋಟ್ ವಲಯದ, ಗಡಿ ನಿಯಂತ್ರಣಾ ರೇಖೆ ಬಳಿಯೇ ಈ ಇಬ್ಬರೂ ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿದೆ.
ಹೊಸವರ್ಷದ ದಿನದಂದೇ ಡಾಂಗ್ರಿ ಗ್ರಾಮದಲ್ಲಿ ಉಗ್ರ ದಾಳಿಯಾಗಿತ್ತು. ಇಬ್ಬರು ಭಯೋತ್ಪಾದಕರು ಹಿಂದುಗಳ ಮನೆ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಹೆಸರು ಕೇಳಿಕೊಂಡು, ಐಡಿ ಕಾರ್ಡ್ ಚೆಕ್ ಮಾಡಿಕೊಂಡು, ಹಿಂದುಗಳು ಎಂಬುದನ್ನು ದೃಢಪಡಿಸಿಕೊಂಡೇ ಗುಂಡು ಹಾರಿಸಿದ್ದರು. ಅಂದು ಮೂವರು ನಾಗರಿಕರು ಹತ್ಯೆಗೀಡಾಗಿ, ಸುಮಾರು 10 ಮಂದಿ ಗಾಯಗೊಂಡಿದ್ದರು. ಗಾಯಗೊಂಡವರಲ್ಲೂ ಹಲವರ ಸ್ಥಿತಿ ಗಂಭೀರವಾಗಿಯೇ ಇತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಅಷ್ಟೇ ಅಲ್ಲ, ರಾಜೌರಿಯಲ್ಲಿ ಮರುದಿನವೂ ಅಂದರೆ ಜನವರಿ 2ರಂದು ಒಂದು ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟಗೊಂಡಿತ್ತು. ಭಯೋತ್ಪಾದಕರು ಮುನ್ನಾದಿನ ಯಾವ ಸ್ಥಳದಲ್ಲಿ ಗುಂಡಿನ ದಾಳಿ ನಡೆಸಿದ್ದರೋ, ಅಲ್ಲೇ ಸಮೀಪದಲ್ಲೇ ಈ ಸ್ಫೋಟವುಂಟಾಗಿ ಒಂದು 4 ವರ್ಷದ ಮಗು ಮತ್ತು 16ವರ್ಷದ ಯುವತಿ ಪ್ರಾಣ ಕಳೆದುಕೊಂಡಿದ್ದರು. ಜ.1ರಂದು ಉಗ್ರರು ಅಲ್ಲಿಂದ ತೆರಳುವಾಗ ಈ ಐಇಡಿಯನ್ನು ಅಳವಡಿಸಿ ಹೋಗಿದ್ದರು. ಒಟ್ಟಾರೆ ರಾಜೌರಿಯಲ್ಲಿ ಹೊಸವರ್ಷದ ಪ್ರಾರಂಭದಲ್ಲಿ ಹಿಂದುಗಳ ಮಾರಣ ಹೋಮವೇ ಆಗಿತ್ತು. ಎರಡು ದಿನಗಳಲ್ಲಿ ಒಟ್ಟು ಐವರು ಮೃತಪಟ್ಟಿದ್ದರು. ಆ ಸಂಖ್ಯೆಯೀಗ ಏಳಕ್ಕೆ ಏರಿಕೆಯಾಗಿದೆ. ಜನವರಿ 1ರಂದು ನಡೆದ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದವರಲ್ಲಿ ಇಬ್ಬರು ಮೃತಪಟ್ಟು ಒಟ್ಟು ಸಾವಿನ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ
ರಾಜೌರಿಯಲ್ಲಿ ಗುಂಡಿನ ದಾಳಿ ನಡೆಸಿದ್ದ ಜೈಷೆ ಮೊಹಮ್ಮದ್ ಸಂಘಟನೆ ಉಗ್ರರಿಗಾಗಿ ರಕ್ಷಣಾ ಪಡೆ ಸಿಬ್ಬಂದಿ ಅಂದಿನಿಂದಲೂ ಹುಡುಕಾಟ ನಡೆಸಿದ್ದರು. ಅಂತಿಮವಾಗಿ ಬಾಲಾಕೋಟ್ ಬಳಿ ಸಿಕ್ಕಿಬಿದ್ದಿದ್ದಾರೆ. ಅಲ್ಲಿ ಉಗ್ರವಿರೋಧಿ ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಸ್ಥಳದಲ್ಲಿ ಬಿಗಿ ಭದ್ರತೆಯಿದೆ.
ಇದನ್ನೂ ಓದಿ: Rajouri Terror Attack | ಉಗ್ರದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆ; ಇಂದು ರಾಜೌರಿ ಬಂದ್ಗೆ ಕರೆ