ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯ (NCR) ಬಹುತೇಕ ಪ್ರದೇಶಗಳಲ್ಲಿ ಉಷ್ಣಮಾರುತವು (Heatwave) ಮಾರಣಾಂತಿಕವಾಗಿ ಪರಿಣಮಿಸಿದೆ. ದೆಹಲಿಯಲ್ಲಿ (Delhi Heatwave) ಬಿಸಿ ಗಾಳಿಯ ಹೊಡೆತಕ್ಕೆ ಸಿಲುಕಿ 20 ಮಂದಿ ಮೃತಪಟ್ಟಿದ್ದಾರೆ. ಇದರಿಂದಾಗಿ ಜನರಲ್ಲಿ ಆತಂಕ ಮನೆಮಾಡಿದೆ. ಅಲ್ಲದೆ, ಉಷ್ಣ ಸಂಬಂಧಿ ಕಾಯಿಲೆಗೆ ಸಾವಿರಾರು ಜನ ತುತ್ತಾಗಿದ್ದು, ಆಸ್ಪತ್ರೆ (Hospitals) ಸೇರಿದ್ದಾರೆ ಎಂದು ತಿಳಿದುಬಂದಿದೆ. ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ದೆಹಲಿ ಜನತೆಗೆ ಈಗ ಉಷ್ಣಗಾಳಿಯು ನುಂಗಲಾರದ ತುತ್ತಾಗಿದೆ.
ಆಸ್ಪತ್ರೆಗಳಲ್ಲಿ ಹೆಚ್ಚಿದ ಸಾವಿನ ಸಂಖ್ಯೆ
ಹೀಟ್‌ಸ್ಟ್ರೋಕ್‌ನಿಂದಾಗಿ ಹೆಚ್ಚಿನ ಆಸ್ಪತ್ರೆ ಸೇರುತ್ತಿದ್ದು, ಎರಡೇ ದಿನಗಳಲ್ಲಿ 20 ಮಂದಿ ಮೃತಪಟ್ಟಿದ್ದಾರೆ. ಉಷ್ಣ ಸಂಬಂಧಿ ಕಾಯಿಲೆ, ಆಘಾತಗಳಿಂದ ಜನ ತತ್ತರಿಸಿ ಹೋಗಿದ್ದಾರೆ. ಎರಡು ದಿನಗಳಲ್ಲಿಯೇ ರಾಮ್ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ 9, ಲೋಕ ನಾಯಕ ಆಸ್ಪತ್ರೆಯಲ್ಲಿ ಒಂದು ವಾರದಲ್ಲಿ ಇಬ್ಬರು ಸೇರಿ ಒಟ್ಟು 20 ಮಂದಿ ಮೃತಪಟ್ಟಿದ್ದಾರೆ. ರಾಮ್ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿಯೇ ಉಷ್ಣ ಸಂಬಂಧಿ ಕಾಯಿಲೆಗೆ ತುತ್ತಾಗಿರುವ 45 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
#WATCH | Delhi continue to boil under severe hot weather as heatwave conditions persist
— ANI (@ANI) June 19, 2024
(Visuals from DDU Marg) pic.twitter.com/jYCpLVqCXh
ಖಡಕ್ ಆದೇಶ ಕೊಟ್ಟ ಕೇಂದ್ರ ಸರ್ಕಾರ
ದೆಹಲಿಯಲ್ಲಿ ಉಷ್ಣ ಗಾಳಿಯಿಂದಾಗಿ 20 ಜನ ಮೃತಪಟ್ಟಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆಸ್ಪತ್ರೆಗಳಿಗೆ ಹಲವು ಸೂಚನೆ ನೀಡಿದೆ. “ಉಷ್ಣ ಗಾಳಿ, ಸನ್‌ಸ್ಟ್ರೋಕ್, ಹೀಟ್‌ಸ್ಟ್ರೋಕ್‌ನಿಂದಾಗಿ ಆಸ್ಪತ್ರೆ ಸೇರಿದವರಿಗೆ ಆದ್ಯತೆಯ ಮೇರೆಗೆ ಚಿಕಿತ್ಸೆ ನೀಡಬೇಕು. ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹಾಸಿಗೆ ಸೇರಿ ಸಕಲ ವೈದ್ಯಕೀಯ ಸೌಕರ್ಯಗಳು ಸಿದ್ಧವಿರುವಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಕೂಡ ಈ ಕುರಿತು ಹೆಚ್ಚಿನ ಗಮನ ಹರಿಸಬೇಕು” ಎಂಬುದಾಗಿ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಕೂಡ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಲವು ಸೂಚನೆ ನೀಡಿದ್ದಾರೆ. ಬೇಸಗೆಯ ಬಿಸಿ ಹೆಚ್ಚಾಗುತ್ತಿರುವ ಕಾರಣ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವೂ ಜನರಿಗೆ ಹಲವು ಮಾರ್ಗಸೂಚಿ, ಸಲಹೆಗಳನ್ನು ನೀಡಿದೆ. ಅತಿಯಾದ ಬಿಸಿಲು, ಬಿಸಿ ಗಾಳಿಯಿಂದಾಗಿ ಜನ ಹೊರಗೆ ಕಾಲಿಡಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಸಮಸ್ಯೆಯೂ ತಲೆದೂರಿರುವ ಕಾರಣ ಜನ ಪರದಾಡುವಂತಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Weather Report : ನಾಗ್ಪುರದಲ್ಲಿ 56 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ; ಇದು ಸಾರ್ವಕಾಲಿಕ ದಾಖಲೆ!