Site icon Vistara News

Narendra Modi: ರಾಜಕೀಯದಾಚೆ ಕವಿ, ಗಾಳಿಪಟ ಪ್ರೇಮಿ; ಮೋದಿ ಬಗ್ಗೆ ನಿಮಗೆ ಗೊತ್ತಿರದ 20 ಸಂಗತಿ ಇಲ್ಲಿವೆ

Narendra Modi

20 Interesting Facts About PM Narendra Modi; Here All You Need To Know

ನವದೆಹಲಿ: ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಗುಜರಾತ್‌ನಲ್ಲಿ (Gujarat) ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಆರ್‌ಎಸ್‌ಎಸ್‌ ಸೇರ್ಪಡೆಯಾಗಿ, ಒಂದೊಂದೇ ಹೆಜ್ಜೆಗಳನ್ನು ಮೇಲೇರುತ್ತ ಬಂದ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಗಾದಿಗೆ ಏರಿದ್ದಾರೆ. ರಾಜಕೀಯದಲ್ಲಿ ಏಳಿಗೆ ಹೊಂದುವ ಜತೆಗೆ ವೈಯಕ್ತಿಯವಾಗಿ, ಆಸಕ್ತಿಗಳ ವಿಚಾರವಾಗಿಯೂ ನರೇಂದ್ರ ಮೋದಿ ಅವರು ವಿಭಿನ್ನ ವ್ಯಕ್ತಿತ್ವ ಹೊಂದಿದ್ದಾರೆ. ನರೇಂದ್ರ ಮೋದಿ ಅವರ ಕುರಿತು ನಿಮಗೆ ಗೊತ್ತಿರದ 20 ಆಸಕ್ತಿದಾಯಕ ವಿಚಾರಗಳು ಇಲ್ಲಿವೆ.

1. ಆರೋಗ್ಯ ಕಾಳಜಿ ಹೆಚ್ಚಿನ ಮುತುವರ್ಜಿ

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅವರು ಒಂದು ದಿನವೂ ಅನಾರೋಗ್ಯಕ್ಕೀಡಾಗಿದ್ದು, ಸುಸ್ತಾಗಿದ್ದು, ಕನಿಷ್ಠ ನೆಗಡಿ-ಜ್ವರ ಬಂದ ಸುದ್ದಿಯನ್ನು ಯಾರೂ ಕೇಳಿಲ್ಲ. ಇದಕ್ಕೆ ನರೇಂದ್ರ ಮೋದಿ ಅವರು ಆರೋಗ್ಯಕ್ಕೆ ನೀಡುವ ಮಹತ್ವವೇ ಕಾರಣ. ನಿತ್ಯ ನಾಲ್ಕೈದು ಗಂಟೆ ಮಲಗಿದರೂ, 18ಕ್ಕೂ ಹೆಚ್ಚು ತಾಸು ಕೆಲಸ ಮಾಡಿದರೂ, ವಿದೇಶ ಸುತ್ತಿ ಬಂದರೂ ಯೋಗ, ವ್ಯಾಯಾಮ, ಆಹಾರ ಪದ್ಧತಿಯಿಂದಾಗಿ ಮೋದಿ ಈಗಲೂ ಫಿಟ್‌ ಇದ್ದಾರೆ. ಬೆಳಗ್ಗೆ ಎದ್ದು, ಯೋಗ, ವ್ಯಾಯಾಮ, ವಾಕಿಂಗ್‌ ಹಾಗೂ ಧ್ಯಾನ ಮಾಡುತ್ತಾರೆ. ಗುಜರಾತಿ ಆಹಾರ, ಸ್ವಲ್ಪ ಕಿಚಡಿ ಸೇವಿಸುವ ಮೂಲಕ ಅವರು ಡಯಟ್‌ ಮೇಂಟೇನ್‌ ಮಾಡುತ್ತಾರೆ. ಅಷ್ಟರಮಟ್ಟಿಗೆ ಮೋದಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ.

2. 42 ವರ್ಷದಿಂದ ನವರಾತ್ರಿ ವೇಳೆ ಉಪವಾಸ

ದೇಶಭಕ್ತಿಯ ಜತೆಗೆ ದೈವಭಕ್ತರೂ ಆಗಿರುವ ಮೋದಿ ಅವರು ನವರಾತ್ರಿ ವೇಳೆ ಪ್ರತಿ ವರ್ಷ ಉಪವಾಸ ಮಾಡುತ್ತಾರೆ. ಕಳೆದ 44 ವರ್ಷಗಳಿಂದ ನವರಾತ್ರಿ ವೇಳೆ ಮೋದಿ ಅವರು ಒಂಬತ್ತು ದಿನ ಉಪವಾಸ ಆಚರಿಸುತ್ತಾರೆ. ಮೋದಿ ವಿದೇಶದಲ್ಲಿಯೇ ಇರಲಿ, ಬಿಡುವಿಲ್ಲದ ಕಾರ್ಯಕ್ರಮಗಳು, ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಲೇ ಉಪವಾಸ ಆಚರಿಸುತ್ತಾರೆ.

3. ಮೋದಿ ಸಂವಹನದ ಹಿಂದಿದೆ ಕೋರ್ಸ್‌ ರಹಸ್ಯ

ನರೇಂದ್ರ ಮೋದಿ ಅವರು ಅರಳು ಹುರಿದಂತೆ ಮಾತನಾಡುತ್ತಾರೆ. ಅವರು ಜಾಗತಿಕ ಉದ್ಯಮಿಗಳೇ ಇರಲಿ, ರಾಜಕಾರಣಿಯೇ ಇರಲಿ, ಎಂತಹವರ ಜತೆಗೂ ಉತ್ತಮ ಸಂವಹನ ಸಾಧಿಸುತ್ತಾರೆ. ಅವರ ಜತೆ ಆತ್ಮೀಯವಾಗಿ ಬೆರೆಯುತ್ತಾರೆ. ಅಷ್ಟೇ ಏಕೆ, ವೇದಿಕೆ ಮೇಲೆ ನಿಂತು ವಾಗ್ಝರಿ ಹರಿಸಿದರೆ, ಗ್ರಾಮೀಣ ಭಾಗದ ಜನರೂ ತಲೆದೂಗುವಂತೆ ಮಾಡುತ್ತಾರೆ. ಇದರ ಹಿಂದೆ ಅವರು ಬಾಲ್ಯದಿಂದಲೂ ಜನರ ಜತೆ ಒಡನಾಡಿದ್ದು, ಆರೆಸ್ಸೆಸ್‌ನ ಬೈಠಕ್‌ಗಳಲ್ಲಿ ಭಾಗಿಯಾಗಿದ್ದರ ಜತೆಗೆ ಅವರು ಅಮೆರಿಕದಲ್ಲಿ ಇದಕ್ಕಾಗಿಯೇ ಕೋರ್ಸ್‌ ಸಹ ಮಾಡಿದ್ದಾರೆ. ಅಮೆರಿಕದಲ್ಲಿ “ಇಮೇಜ್‌ ಮ್ಯಾನೇಜ್‌ಮೆಂಟ್‌” ಹಾಗೂ ಸಾರ್ವಜನಿಕ ಸಂಪರ್ಕದಲ್ಲಿ ಮೋದಿ ಮೂರು ತಿಂಗಳ ಕೋರ್ಸ್‌ ಮುಗಿಸಿದ್ದಾರೆ.

4. ಅವಿರತ ಪರಿಶ್ರಮಿ, ಅಪ್ರತಿಮ ದೇಶಪ್ರೇಮಿ

ನರೇಂದ್ರ ಮೋದಿ ಕುರಿತ ಟೀಕೆ ಟಿಪ್ಪಣಿಗಳು ಏನೇ ಇರಲಿ. ಆದರೆ, ಅವರೊಬ್ಬ ಅವಿರತ ಪರಿಶ್ರಮಿ ಹಾಗೂ ಅಪ್ರತಿಮ ದೇಶಪ್ರೇಮಿ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಇಳಿಕೆಯಾದ ಉಗ್ರರ ದಾಳಿಗಳೇ ಸಾಕ್ಷಿಯಾಗಿದೆ. ಇಂದಿಗೂ ಉಗ್ರರ ಉಪಟಳ ಗಡಿಗೆ ಸೀಮಿತವಾಗಿದ್ದರೆ ಅದಕ್ಕೆ ಮೋದಿ ಅವರು ದೇಶದ ಭದ್ರತೆಗೆ ನೀಡಿದ ಆದ್ಯತೆಯೇ ಕಾರಣ. ಉರಿ ಮೇಲಿನ ದಾಳಿಗೆ ಪ್ರತೀಕಾರವಾಗಿ ಸರ್ಜಿಕಲ್‌ ಸ್ಟ್ರೈಕ್‌ ಮಾಡಿಸಿದ್ದು, ಸರ್ಜಿಕಲ್‌ ಸ್ಟ್ರೈಕ್‌ ಯಶಸ್ವಿಯಾಗಿದೆ ಎಂದು ಕರೆ ಬರುವತನಕ ರಾತ್ರಿ ಎದ್ದು ಕುಳಿತಿದ್ದು, ಅಮೆರಿಕದ ಬೆದರಿಕೆಗೆ ಬಗ್ಗದೆ ರಷ್ಯಾ ಜತೆ ಎಸ್‌-400 ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದ ಮಾಡಿಕೊಂಡಿದ್ದು, ಚೀನಾದ ಒಆರ್‌ಒಪಿ, ಸಿಪಿಐಸಿ ಬಲೆಗೆ ಬೀಳದ್ದು, ಪುಲ್ವಾಮ ದಾಳಿಗೆ ತಿರುಗೇಟಾಗಿ ಬಾಲಾಕೋಟ್‌ ವಾಯುದಾಳಿ ನಡೆಸಿದ್ದು, ಉಕ್ರೇನ್‌ ಮೇಲೆ ಆಕ್ರಮಣ ಮಾಡಿದ ಬಳಿಕ ವಿಶ್ವವೇ ರಷ್ಯಾ ವಿರುದ್ಧ ನಿಂತರೂ ಭಾರತವು ರಷ್ಯಾದಿಂದ ಕಚ್ಚಾತೈಲ ಖರೀದಿಸಿದ್ದು ಇದಕ್ಕೆ ಸಾಕ್ಷಿಯಾಗಿದೆ. ಮೋದಿ ಅವರು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ 2014ರಲ್ಲಿ ಎಂಟು ತಿಂಗಳಲ್ಲಿ ದೇಶಾದ್ಯಂತ 3 ಲಕ್ಷ ಕಿ.ಮೀ ಸಂಚರಿಸಿ, 25 ರಾಜ್ಯಗಳಲ್ಲಿ ಪ್ರಚಾರ ಮಾಡಿ ಜನರ ಮನಸ್ಸು ಗೆದ್ದಿದ್ದರು. ಈಗಲೂ ಮೋದಿ ನಾಲ್ಕಾರು ದೇಶಗಳನ್ನು ಸುತ್ತಿ, ಬೆಳಗ್ಗೆ ಎದ್ದೇಳುತ್ತಲೇ ಯಾವುದೋ ಯೋಜನೆಗೆ ಚಾಲನೆ ನೀಡುತ್ತಿರುತ್ತಾರೆ. ರಾಜಕೀಯ ವೈರಿಗಳೂ ಮೋದಿ ಅವರನ್ನು ಕಾಯಕಯೋಗಿ ಎಂಬುದನ್ನು ಒಪ್ಪುತ್ತಾರೆ.

5. ರಾಜಕೀಯದ ಹೊರತಾಗಿ ಸಂಬಂಧಕ್ಕೆ ಆದ್ಯತೆ

ಕೆಲವೊಮ್ಮೆ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ, ಆರೋಪ, ಟೀಕೆ, ಖಂಡನೆ, ವಿಡಂಬನೆ, ವ್ಯಂಗ್ಯವು ಗಂಭೀರ ಸ್ವರೂಪದ್ದಾಗಿರುತ್ತದೆ. ಆಡಳಿತ ಪಕ್ಷದವರೇ ಹೀಗೆ ಪ್ರತಿಪಕ್ಷಗಳನ್ನು ಹೀಗಳಿಯಬಹುದೇ ಎನ್ನುವಷ್ಟರಮಟ್ಟಿಗೆ ದಾಳಿ ನಡೆಸುತ್ತಾರೆ. ಹೀಗಿದ್ದರೂ ಮೋದಿ ಅವರು ರಾಜಕೀಯದ ಹೊರತಾಗಿ ಉತ್ತಮ ಸಂಬಂಧ ಹೊಂದಿದ್ದಾರೆ. ರಾಜಕೀಯದಲ್ಲಿ ಬದ್ಧವೈರಿಯಾಗಿರುವ ಮಮತಾ ಬ್ಯಾನರ್ಜಿಯವರು ಪ್ರತಿ ವರ್ಷ ಮೋದಿ ಅವರಿಗೆ ಕುರ್ತಾ, ಸಿಹಿ ತಿಂಡಿಗಳನ್ನು ಕಳುಹಿಸುತ್ತಾರೆ. ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರೂ ಮೋದಿಗೆ ಸಿಹಿ ಕಳುಹಿಸುತ್ತಾರೆ. ದೆಹಲಿಗೆ ಹೋದಾಗ ಮಾಜಿ ಪ್ರಧಾನಿ ದೇವೇಗೌಡರನ್ನು ಮೋದಿ ಆದರಿಸಿದ ರೀತಿಗೆ ಗೌಡರೇ ವಿಸ್ಮಿತರಾಗಿದ್ದರು. ಇನ್ನು ರಾಜ್ಯಸಭೆಯಲ್ಲಿ ಗುಲಾಂ ನಬಿ ಆಜಾದ್‌ ಅವರಿಗೆ ಮೋದಿ ಗೌರವ ಸೂಚಿಸಿದ್ದು, ಅವರನ್ನು ಹೊಗಳಿದ್ದು, ಪಕ್ಷದ ಹಂಗಿಲ್ಲದೆ ಪ್ರಣಬ್‌ ಮುಖರ್ಜಿ ಅವರಿಗೆ ಭಾರತ ರತ್ನ ನೀಡಿದ್ದು ಮೋದಿ ಅವರು ರಾಜಕೀಯದ ಹೊರತಾಗಿ ಹೊಂದಿರುವ ವಿಶಾಲ ಮನೋಭಾವ, ಸಂಬಂಧಕ್ಕೆ ನೀಡುವ ಆದ್ಯತೆಗೆ ನಿದರ್ಶನವಾಗಿದೆ.

ಮೋದಿ ಜತೆ ದೀದಿ.

6. ಯೋಜನೆಗಳಿಗೆ ವಿಶಿಷ್ಟ ಹೆಸರು ನೀಡುವ ಕಲೆ

ಮೋದಿ ಅವರ ಆಡಳಿತದಲ್ಲಿ ಯಾವುದೇ ಯೋಜನೆ ಜಾರಿಗೊಳಿಸಲಿ, ಅದಕ್ಕೊಂದು ವಿಶಿಷ್ಟ ಹೆಸರು ನೀಡಲಾಗುತ್ತದೆ. ಯೋಜನೆಗಳಿಗೆ ಕುಟುಂಬಸ್ಥರ ಹೆಸರಿಡುವುದಕ್ಕೆ ವಿದಾಯ ಹಾಕಿದ ಮೋದಿ ವಿಶಿಷ್ಟ ಹೆಸರುಗಳ ಮೂಲಕ ಗಮನ ಸೆಳೆಯುತ್ತಾರೆ. ಸಿಎಂ ಎಂದರೆ ಕಾಮನ್‌ ಮ್ಯಾನ್‌, ಐಟಿ ಎಂದರೆ ಇಂಡಿಯನ್‌ ಟೆಕ್ನಾಲಜಿ, ಬಿಟಿ ಎಂದರೆ ಭಾರತ್‌ ಟುಮಾರೊ ಎಂಬ ಪದಗಳನ್ನು ಪರಿಚಯಿಸಿದ್ದೇ ಮೋದಿ. ಅದೂ ಗುಜರಾತ್‌ ಸಿಎಂ ಆಗಿದ್ದಾಗಲೇ ಮೋದಿ ಯೋಜನೆಗಳಿಗೆ ಹೆಸರಿಡುವ ಕಲೆ ಹೊಂದಿದ್ದರು. ಗುಜರಾತ್‌ ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ನರ್ಮದಾ ನೀರಾವರಿ ಯೋಜನೆಗೆ “ಸುಜಲಾಂ ಸುಫಲಾಂ”, ಹೆಣ್ಣುಮಕ್ಕಳನ್ನು ಶಾಲೆಗೆ ಕರೆತರುವ ಯೋಜನೆಗೆ “ವಿದ್ಯಾಲಕ್ಷ್ಮೀ”, ಗುಜರಾತ್‌ ಅಭಿವೃದ್ಧಿಗೆ ರಚಿಸಿದ ಪರಿಣತರ ಸಮಿತಿಗೆ “ಬುದ್ಧಿಸಾಗರ್‌ ಪರಿಷದ್‌” ಎಂದು ಹೆಸರಿಟ್ಟಿದ್ದರು. ಇನ್ನು ಕಳೆದ ಎಂಟು ವರ್ಷಗಳಲ್ಲಿ ಮೋದಿ ಅವರು ಪ್ರಧಾನಿಯಾಗಿ, ಆತ್ಮನಿರ್ಭರ ಭಾರತ್‌, ಮೇಕ್‌ ಇನ್‌ ಇಂಡಿಯಾ, ಆಯುಷ್ಮಾನ್‌ ಭಾರತ್‌, ಜನಧನ್‌, ಕಿಸಾನ್‌ ಸಮ್ಮಾನ್‌, ಅಗ್ನಿಪಥ, ಉಜ್ವಲ ಸೇರಿ ಹಲವು ವಿಶಿಷ್ಟ ಹೆಸರುಗಳಲ್ಲಿ ಯೋಜನೆಗಳು ಜಾರಿಯಾಗಿವೆ.

7. ಸುರಂಗ ಮಾರ್ಗ ಬಳಸಿದ ಮೊದಲ ಪ್ರಧಾನಿ

ನರೇಂದ್ರ ಮೋದಿ ಅವರ ನಿವಾಸವಿರುವ ಲೋಕಕಲ್ಯಾಣ ಮಾರ್ಗದಿಂದ ಸಫ್ದರ್‌ಜಂಗ್‌ ಏರ್‌ಪೋರ್ಟ್‌ಗೆ ಎರಡು ಕಿ.ಮೀ. ದೂರದ ಸುರಂಗ ಕೊರೆಯಲಾಗಿದೆ. ಗಾಲ್ಫ್‌ ಕೋ ಮಾರ್ಗವಾಗಿ ಸುರಂಗ ಕೊರೆಯಲಾಗಿದ್ದು, ಸಂಚಾರ ದಟ್ಟಣೆ ತಡೆಯಲು 2010ರಲ್ಲಿ ಆರಂಭಿಸಿ, 2014ರಲ್ಲಿ ಸುರಂಗ ಕಾಮಗಾರಿ ಮುಗಿದಿದೆ. ಈ ಸುರಂಗವನ್ನು ಬಳಸಿದ ಮೊದಲ ಪ್ರಧಾನಿ ನರೇಂದ್ರ ಮೋದಿ ಎನಿಸಿದ್ದಾರೆ. ಸುರಂಗದಲ್ಲಿ ಹೋದರೆ ವಿಮಾನ ನಿಲ್ದಾಣ, ವಿಐಪಿ ಹೆಲಿಕಾಪ್ಟರ್‌ಗಳು ಲ್ಯಾಂಡ್‌ ಆಗುವ ಹೆಲಿಪ್ಯಾಡ್‌ ತಲುಪಬಹುದಾಗಿದೆ.

8. ಮೋದಿಗೆ ಸ್ಕೂಟರ್‌ ಓಡಿಸಲು ಬರುತ್ತಿರಲಿಲ್ಲ

ನರೇಂದ್ರ ಮೋದಿ ಅವರು ಚಿಕ್ಕ ವಯಸ್ಸಿನಲ್ಲಿಯೇ ಆರ್‌ಎಸ್‌ಎಸ್‌ ಸೇರಿ, ಸಂಘದ ಪ್ರಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಭೆ-ಸಮಾರಂಭಗಳನ್ನು ಆಚರಿಸುವುದು, ಕಚೇರಿಯ ಸ್ವಚ್ಛತೆ ಸೇರಿ ಎಲ್ಲ ಉಸ್ತುವಾರಿಯನ್ನು ಅವರೇ ನೋಡಿಕೊಳ್ಳುತ್ತಿದ್ದರು. ಸಂಘದಲ್ಲಿ ಅವರು ಪ್ರಚಾರಕರಾಗಿ ಆಯ್ಕೆಯಾಗುವರೆಗೂ ಸ್ಕೂಟರ್‌ ಓಡಿಸಲು ಬರುತ್ತಿರಲಿಲ್ಲ. ಶಂಕರಸಿಂಗ್‌ ವಘೇಲಾ (ಗುಜರಾತ್‌ ಮಾಜಿ ಮುಖ್ಯಮಂತ್ರಿ) ಅವರೇ ಮೋದಿ ಅವರನ್ನು ಸ್ಕೂಟರ್‌ನಲ್ಲಿ ಕರೆದುಕೊಂಡು ತಿರುಗಾಡುತ್ತಿದ್ದರು.

9. ಕಟ್ಟಾ ವಿರೋಧಿಯೊಬ್ಬ ಖಾಸಾ ಸ್ನೇಹಿತನಾದ ಕತೆ

ಗುಜರಾತ್‌ನಲ್ಲಿ ಗೋಧ್ರಾ ಹತ್ಯಾಕಾಂಡ ನಡೆದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ನರೇಂದ್ರ ಮೋದಿ ಅವರ ಕಟ್ಟಾ ವಿರೋಧಿಗಳಾದರು. ಇದೇ ರೀತಿ ಹತ್ಯಾಕಾಂಡದ ವೇಳೆ ಕೋಟ್ಯಂತರ ರೂ. ನಷ್ಟ ಅನುಭವಿಸಿದ ಜಾಫರ್‌ ಸರೇಶ್‌ವಾಲಾ ಎಂಬ ಉದ್ಯಮಿಯೂ ಮೋದಿ ವಿರೋಧಿಯಾಗಿದ್ದರು. ಮೋದಿ ವಿರುದ್ಧ ಲಂಡನ್‌ನಲ್ಲಿಯೂ ಸರೇಶ್‌ವಾಲಾ ಅಪಪ್ರಚಾರ ಮಾಡಿದ್ದರು. ಆದರೆ, ಸರೇಶ್‌ವಾಲಾ 2015ರಲ್ಲಿ ಲಂಡನ್‌ನಲ್ಲಿ ವಾಸಿಸಲು ತೀರ್ಮಾನಿಸಿದಾಗ ಕರೆ ಮಾಡಿದ ಮೋದಿ, “ಎಷ್ಟು ದಿನ ಬ್ರಿಟಿಷರ ಸೇವೆ ಮಾಡುತ್ತೀರಿ? ನಿಮ್ಮ ಅಗತ್ಯ ದೇಶಕ್ಕಿದೆ” ಎಂದರು. ಇದಾದ ಬಳಿಕ ಸರೇಶ್‌ವಾಲಾ ಮೋದಿ ಅವರಿಗೆ ಆಪ್ತರಾದರು. ಯಾರು ಮೋದಿ ವಿರುದ್ಧ ಮಾತನಾಡಿದರೋ, ಅದೇ ಸರೇಶ್‌ವಾಲಾ ಮೋದಿ ಪರ ಮಾತನಾಡಿದರು.

10. ಮೋದಿ ಕುರಿತು 2 ತಿಂಗಳಲ್ಲಿ 40 ಪುಸ್ತಕ

ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿ ದೇಶಾದ್ಯಂತ ಖ್ಯಾತಿ ಗಳಿಸಿದರೂ ಅವರ ಜೀವನ ಚಿತ್ರಣ ಹರವುವ ಪುಸ್ತಕಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದವು. ಆದರೆ, 2014ರಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ, ಪ್ರಧಾನಿಯಾದರೋ, ಆಗ ಸಾಲು ಸಾಲು ಪುಸ್ತಕಗಳು ಬಿಡುಗಡೆಯಾದವು. ಒಂದು ವರದಿ ಪ್ರಕಾರ, ಮೋದಿ ಪ್ರಧಾನಿಯಾಗಿ ಎರಡು ತಿಂಗಳು ಆಗುವಷ್ಟರಲ್ಲಿಯೇ ಅವರ ಜೀವನ ಚರಿತ್ರೆ ಕುರಿತು ೪೦ ಪುಸ್ತಕಗಳು ಪ್ರಕಟವಾದವು ಎಂದು ತಿಳಿದುಬಂದಿದೆ. ಎಂಟು ವರ್ಷದಲ್ಲಂತೂ ಮೋದಿ ಕುರಿತು ನೂರಾರು ಪುಸ್ತಕಗಳು ಪ್ರಕಟವಾಗಿವೆ.

11. ಕುಗ್ಗದ ಚುಂಬಕಶಕ್ತಿ, ಹಿಗ್ಗಿದ ಜನಪ್ರಿಯತೆ

ಜನಾಕ್ರೋಶವನ್ನು ಎದುರಿಸದೆ ಯಾವ ಸರ್ಕಾರವೂ ಆಡಳಿತ ನಡೆಸುವುದಿಲ್ಲ. ಅದರಂತೆ, ಮೋದಿ ಅವಧಿಯಲ್ಲಿ ಬೆಲೆಯೇರಿಕೆ, ಕೊರೊನಾ ಬಿಕ್ಕಟ್ಟು, ಆರ್ಥಿಕ ಹಿಂಜರಿತ, ಆಪರೇಷನ್‌ ಕಮಲ, ಕೃಷಿ ಕಾಯಿದೆಗೆ ವಿರೋಧ, ಸಿಎಎ ವಿರುದ್ಧ ಪ್ರತಿಭಟನೆ ಸೇರಿ ಹಲವು ರೀತಿಯಲ್ಲಿ ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಈಗಲೂ ಬೆಲೆಯೇರಿಕೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ. ಹೀಗಿದ್ದರೂ, ಮೋದಿ ಅವರ ಜನಪ್ರಿಯತೆ, ಚುಂಬಕ ಶಕ್ತಿ ಕುಗ್ಗಿಲ್ಲ. ಇತ್ತೀಚೆಗೆ ಮಾರ್ನಿಂಗ್‌ ಕನ್ಸಲ್ಟ್‌ ಎಂಬ ಜಾಗತಿಕ ಸಂಸ್ಥೆ ನಡೆಸಿದ ಸಮೀಕ್ಷೆಯು ಮೋದಿಯೇ ಜಗತ್ತಿನ ಜನಪ್ರಿಯ ನಾಯಕ ಎಂದು ತಿಳಿಸಿದೆ.

12. ಬಾಲ್ಯದಲ್ಲಿ ಮೋದಿಗಿದ್ದ ಪೆಟ್‌ನೇಮ್‌ ಏನು?

ತುಂಬು ಕುಟುಂಬ, ಬಡತನದಲ್ಲಿ ಜನಿಸಿದ ಮೋದಿಗೆ ಬಾಲ್ಯದಲ್ಲಿ ಗೆಳೆಯರ ದೊಡ್ಡ ಬಳಗವೇ ಇತ್ತು. ಶಾಲೆಯಲ್ಲಂತೂ ಮೋದಿ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಹಾಗಾಗಿ, ಸಹಪಾಠಿಗಳು ಅವರನ್ನು “ಎನ್‌ಡಿ” (ನರೇಂದ್ರ ದಾಮೋದರ ದಾಸ್) ಎಂದು ಕರೆಯುತ್ತಿದ್ದರು. ಇನ್ನೂ ಕೆಲವರು ಪ್ರೀತಿಯಿಂದ “ನರಿಯಾ” ಎಂದೂ ಕರೆಯುತ್ತಿದ್ದರು.

13. ಸನ್ಯಾಸಿ ನುಡಿದ ಭವಿಷ್ಯ ನಿಜವಾಯಿತು

ನರೇಂದ್ರ ಮೋದಿ ಅವರು ಚಿಕ್ಕವರಾಗಿದ್ದಾಗ ಅವರ ಮನೆಗೆ ಸನ್ಯಾಸಿಯೊಬ್ಬರು ಬಂದಿದ್ದರು. ಆಗ, ಮೋದಿ ಸಹೋದರ ಸೋಮ್‌ಭಾಯ್‌ ಅವರ ಜಾತಕ ನೋಡಿದ ಸಾಧು, “ಈತ ಎಲ್ಲರಂತೆ ಸಾಮಾನ್ಯ ಜೀವನ ಸಾಗಿಸುತ್ತಾನೆ” ಎಂದು ಹೇಳುತ್ತಾರೆ. ನಂತರ ಮೋದಿ ಜಾತಕ ನೋಡಿದ ಸನ್ಯಾಸಿ, “ಒಂದೋ ಈತ ಸನ್ಯಾಸಿಯಾಗುತ್ತಾನೆ, ಇಲ್ಲವೇ ದೊಡ್ಡ ರಾಜಕಾರಣಿಯಾಗುತ್ತಾನೆ” ಎಂದಿದ್ದರು. ಸನ್ಯಾಸಿಯಾಗುವ ದಿಸೆಯಲ್ಲಿ ಮೋದಿ ಬಂಗಾಳದ ಒಂದು ಆಶ್ರಮಕ್ಕೆ ಹೋಗಿದ್ದರು. ಹಿಮಾಲಯದಲ್ಲೂ ಒಂದಷ್ಟು ದಿನ ಕಳೆದರು. ಆದರೆ, ಕೊನೆಗೆ ಅವರು ರಾಜಕಾರಣಿಯಾದರು. ಜಗತ್ತೇ ಮೆಚ್ಚುವ ನಾಯಕನಾಗಿಯೂ ಹೊರಹೊಮ್ಮಿದರು.

14. ಕವಿ, ಛಾಯಾಗ್ರಾಹಕ, ಗಾಳಿಪಟ ಪ್ರೇಮಿ

ರಾಜಕೀಯ, ಭಾಷಣ, ಯೋಜನೆ, ವಿದೇಶ ಪ್ರವಾಸ ಎಂದು ಬ್ಯುಸಿಯಾಗಿರುವ ನರೇಂದ್ರ ಮೋದಿ ಅವರು ಕವಿ ಎಂಬುದು ತುಂಬ ಜನರಿಗೆ ಗೊತ್ತಿರಲಿಕ್ಕಿಲ್ಲ. ಗುಜರಾತಿ ಭಾಷೆಯಲ್ಲಿ ಮೋದಿ ಅವರು ಬರೆದ ಕವನ ಸಂಕಲನಗಳು, ಲೇಖನಗಳು ಪ್ರಕಟವಾಗಿವೆ. ಬಿಡುವಿದ್ದಾಗ ಅವರು ಫೋಟೊಗ್ರಫಿಯನ್ನೂ ಮಾಡುತ್ತಾರೆ. ಹಾಗೆಯೇ, ಬಾಲ್ಯದಲ್ಲಿ ಗಾಳಿಪಟ ಹಾರಿಸುವುದು ನರೇಂದ್ರ ಮೋದಿ ಅವರಿಗೆ ಅಚ್ಚುಮೆಚ್ಚಿನ ಹವ್ಯಾಸವಾಗಿತ್ತು. ಶಾಲಾ ಮಟ್ಟದ ನಾಟಕಗಳಲ್ಲೂ ಮೋದಿ ಅಭಿನಯಿಸಿದ್ದಾರೆ.

15. ಮೋದಿ ಜಾಕೆಟ್‌ಗೂ ಜಾಗತಿಕ ಮನ್ನಣೆ

ನರೇಂದ್ರ ಮೋದಿ ಅವರು ಸೂಟು-ಬೂಟು ಹಾಕಿಕೊಂಡು ವಿದೇಶಕ್ಕೆ ತೆರಳಿದ್ದು ಟೀಕೆಗೊಳಗಾಯಿತು. ಪ್ರತಿಪಕ್ಷಗಳು ಇದು ಸೂಟು ಬೂಟಿನ ಸರ್ಕಾರ ಎಂದು ಟೀಕಿಸಿದವು. ಆದರೆ, ಮೋದಿ ಅವರು ಜಾಕೆಟ್‌ ಧರಿಸುವ ಮೂಲಕ, ಆ ಜಾಕೆಟ್‌ಗಳು “ಮೋದಿ ಜಾಕೆಟ್”‌ ಎಂದೇ ಖ್ಯಾತಿಯಾಗುವಂತೆ ಮಾಡಿದರು. 1960ರ ದಶಕದಲ್ಲಿ “ನೆಹರು ಜಾಕೆಟ್”‌ ಎಷ್ಟು ಖ್ಯಾತಿ ಗಳಿಸಿದ್ದವೋ, ಮೋದಿ ಅವಧಿಯಲ್ಲಿ ದೇಶಾದ್ಯಂತ “ಮೋದಿ ಜಾಕೆಟ್‌”ಗಳು ಖ್ಯಾತಿ ಗಳಿಸಿದವು. ಈ ಕ್ರೇಜ್‌ ಎಷ್ಟರಮಟ್ಟಿಗೆ ಹೆಚ್ಚಾಯಿತೆಂದರೆ, ದಕ್ಷಿಣ ಕೊರಿಯಾದ ಆಗಿನ ಅಧ್ಯಕ್ಷ ಮೂನ್‌ ಜೇ ಇನ್‌ ಅವರು ಭಾರತಕ್ಕೆ ಆಗಮಿಸಿದ್ದಾಗ ಮೋದಿ ಜಾಕೆಟ್‌ ಧರಿಸಿದ್ದರು.

ಮೋದಿ ಜಾಕೆಟ್‌ನಲ್ಲಿ ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷ ಮೂನ್‌ ಜೇ ಇನ್.

16. ಯುದ್ಧದ ವೇಳೆ ಸೈನಿಕರಿಗೆ “ಚಹಾ” ನೆರವು

ನರೇಂದ್ರ ಮೋದಿ ಅವರ ತಂದೆ ದಾಮೋದಾರ ದಾಸ್‌ ಅವರು ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದರು. 1965ರಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ನಡೆದಾಗ ಮೋದಿ ಅವರೂ ರೈಲು ನಿಲ್ದಾಣದಲ್ಲಿ ಯೋಧರಿಗೆ ಚಹಾ ನೀಡುತ್ತಿದ್ದರು. ರಣರಂಗದಿಂದ ಬರುವ ಹಾಗೂ ರಣರಂಗಕ್ಕೆ ಹೊರಡುವ ಯೋಧರಿಗೆ ಮಸಾಲ ಚಹಾ ನೀಡುವ ಮೂಲಕ ಮೋದಿ ದೇಶಪ್ರೇಮೆ ಮೆರೆದಿದ್ದರು.

17. ವೀಸಾ ನಿರಾಕರಿಸಿದವರೇ ಆಮಂತ್ರಿಸಿದರು

ಹೀಗಳೆದವರು, ತುಚ್ಚವಾಗಿ ನೋಡಿದವರು, ಟೀಕಿಸಿದವರೇ ತಿರುಗಿ ನೋಡುವಂತೆ, ಬಂದು ಕೈಕುಲುಕುವಂತೆ ಮಾಡುವುದು ನರೇಂದ್ರ ಮೋದಿ ಅವರ ವ್ಯಕ್ತಿತ್ವದ ಭಾಗವೇ ಆಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಮೋದಿ ಗುಜರಾತ್‌ ಪ್ರಧಾನಿಯಾಗಿದ್ದಾಗ ಗೋಧ್ರಾ ಹತ್ಯಾಕಾಂಡದ ಹೆಸರಿನಲ್ಲಿ ಅವರಿಗೆ ವೀಸಾ ನೀಡದಿರುವುದು ಹಾಗೂ ಪ್ರಧಾನಿಯಾಗುತ್ತಲೇ ಅವರನ್ನು ಅಪ್ಪಿ ಸ್ವಾಗತಿಸಿರುವುದು. ಅಷ್ಟೇ ಅಲ್ಲ, 2015ರಲ್ಲಿ ಆಗ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮ ಅವರು ಮೋದಿ ಕರೆಗೆ ಓಗೊಟ್ಟು ಭಾರತಕ್ಕೂ ಬರುತ್ತಾರೆ. ಆ ಮೂಲಕ ಅಧಿಕಾರದಲ್ಲಿದ್ದಾಗಲೇ ಭಾರತಕ್ಕೆ ಭೇಟಿ ನೀಡಿದ ಅಮೆರಿಕದ ಮೊದಲ ಅಧ್ಯಕ್ಷ ಎಂಬ ಖ್ಯಾತಿಗೆ ಭಾಜನರಾಗುತ್ತಾರೆ.

18. ಸಣ್ಣ ವಿಷಯಗಳಿಗೂ ಆದ್ಯತೆ

ನರೇಂದ್ರ ಮೋದಿ ಧೀಮಂತ ನಾಯಕರಾದರೂ ಸಣ್ಣ ಸಣ್ಣ ವಿಷಯಗಳಿಗೂ ಆದ್ಯತೆ ನೀಡುವುದು, ಚಿಕ್ಕ ಚಿಕ್ಕ ಸಂಗತಿಗಳನ್ನು ಗಮನಿಸುವುದು, ಪ್ರತಿಯೊಬ್ಬರ ಹೆಸರನ್ನೂ ನೆನಪಿಟ್ಟುಕೊಳ್ಳುವುದು ಮೋದಿ ಅವರಿಗೆ ಕರಗತವಾಗಿದೆ. ಅವರು ಮಕ್ಕಳ ಜತೆ ಮಾತನಾಡುವಾಗ ಪಬ್ಜಿ ಉದಾಹರಣೆ ನೀಡುತ್ತಾರೆ, ವೇದಿಕೆಗಳ ಭಾಷಣದ ವೇಳೆ ಗಣ್ಯರ ಹೇಳಿಕೆ ಕೋಟ್‌ ಮಾಡುತ್ತಾರೆ, ವಿಶೇಷ ಸಂದರ್ಭಗಳನ್ನು ನೆನಪಿಸುತ್ತಾರೆ, ದೇವೇಗೌಡರ ಮಂಡಿನೋವು ಅವರಿಗೆ ನೆನಪಿರುತ್ತದೆ. ಇನ್ನು ಅವರು ಹೋಗುವ ಯಾವುದೇ ಕಾರ್ಯಕ್ರಮದ ಫೋಟೊ, ವಿಡಿಯೊ ಮಿಸ್‌ ಆಗುವುದಿಲ್ಲ. ವಿರೋಧಿಗಳು ಟೀಕಿಸಿದರೂ ಅವರು ಫೋಟೊಗೆ ಪೋಸ್‌ ನೀಡುವುದು ಬಿಡುವುದಿಲ್ಲ.

19. ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನಿ

ಭಾರತ ಸ್ವಾತಂತ್ರ್ಯ ಗಳಿಸಿದ ಬಳಿಕ ಜನಿಸಿದವರಲ್ಲಿ ಪ್ರಧಾನಿಯಾದ ಮೊದಲ ವ್ಯಕ್ತಿ ಎಂಬ ಖ್ಯಾತಿಗೆ ಮೋದಿ ಭಾಜನರಾಗಿದ್ದಾರೆ. ಇದುವರೆಗೆ ದೇಶದ ಪ್ರಧಾನಿಯಾದವರೆಲ್ಲ ಸ್ವಾತಂತ್ರ್ಯ ಸಿಗುವುದಕ್ಕಿಂತ ಮೊದಲು ಜನಿಸಿದ್ದರು. ಆದರೆ, ಮೋದಿ ಅವರು 1950ರ ಸೆಪ್ಟೆಂಬರ್‌ 17ರಂದು ಜನಿಸಿದರು. ಹೀಗೆ ಸ್ವಾತಂತ್ರ್ಯೋತ್ತರದಲ್ಲಿ ಜನಿಸಿ, ಪ್ರಧಾನಿ ಹುದ್ದೆಗೇರಿದ ಮೊದಲ ವ್ಯಕ್ತಿ ಎಂಬ ಖ್ಯಾತಿ ಮೋದಿ ಅವರದ್ದಾಗಿದೆ.

20. ಊಟದ ವೆಚ್ಚ ಅವರೇ ಭರಿಸುತ್ತಾರೆ

ನರೇಂದ್ರ ಮೋದಿ ಅವರು ಅಣಬೆ (ಮಶ್ರೂಮ್)‌ ತಿನ್ನುತ್ತಾರೆ, ಅದಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತದೆ ಎಂಬ ಆರೋಪವಿದೆ. ಆದರೆ, ನರೇಂದ್ರ ಮೋದಿ ಅವರು ತಮ್ಮ ಊಟದ ವೆಚ್ಚವನ್ನು ತಾವೇ ಭರಿಸುತ್ತಾರೆ. ಇದಕ್ಕಾಗಿ ಸರ್ಕಾರದ ಒಂದು ರೂಪಾಯಿಯನ್ನೂ ಪಡೆಯುವುದಿಲ್ಲ ಎಂದು ಆರ್‌ಟಿಇ ಅಡಿಯಲ್ಲಿ ಇತ್ತೀಚೆಗೆ ಕೇಳಿದ ಪ್ರಶ್ನೆಗೆ ಪಿಎಂಒ ಉತ್ತರಿಸಿದೆ. “ನರೇಂದ್ರ ಮೋದಿ ಅವರು ತಮ್ಮ ಆಹಾರದ ವೆಚ್ಚವನ್ನು ತಾವೇ ಭರಿಸುತ್ತಾರೆ. ಇದಕ್ಕೆ ಸರ್ಕಾರದ ಬಜೆಟ್‌ನಿಂದ ಒಂದು ರೂಪಾಯಿಯೂ ಖರ್ಚಾಗುವುದಿಲ್ಲ” ಎಂದು ಪಿಎಂಒ ಪ್ರತಿಕ್ರಿಯಿಸಿದೆ.

ಇದನ್ನೂ ಓದಿ: Modi 3.0 Cabinet: ಪ್ರಧಾನಿಯಾಗಿ ಮೋದಿ ಐದು ವರ್ಷ ಪೂರೈಸುತ್ತಾರಾ? ಜ್ಯೋತಿಷಿಗಳು ಹೇಳುವುದು ಹೀಗೆ

Exit mobile version