Site icon Vistara News

Rain News: ಅಕಾಲಿಕವಾಗಿ ಸುರಿದ ಭಾರಿ ಮಳೆ; ಸಿಡಿಲು ಬಡಿದು 20 ಜನ ಸಾವು

Gujarat Rains

20 Killed In Lightning Strikes Amid Rain Fury In Gujarat

ಗಾಂಧಿನಗರ: ಗುಜರಾತ್‌ನಲ್ಲಿ ಅಕಾಲಿಕವಾಗಿ ಸುರಿಯುತ್ತಿರುವ ಭಾರಿ ಮಳೆಗೆ (Gujarat Rain) ಜನ ತತ್ತರಿಸಿದ್ದಾರೆ. ಮಳೆ ಸಂಬಂಧಿತ ಅವಘಡಗಳು ಹಾಗೂ ರಾಜ್ಯದ ಹಲವೆಡೆ ಸಿಡಿಲು ಬಡಿದು 20 ಮಂದಿ ಮೃತಪಟ್ಟಿದ್ದಾರೆ. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಮನೆಗಳು ಕುಸಿದಿವೆ. ಸೇತುವೆಗಳು ಕೊಚ್ಚಿಕೊಂಡು ಹೋಗಿವೆ. ನೂರಾರು ಜನ ಗಾಯಗೊಂಡಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ ಎಂದು ತಿಳಿದುಬಂದಿದೆ.

ಸೌರಾಷ್ಟ್ರ ಹಾಗೂ ದಕ್ಷಿಣ ಗುಜರಾತ್‌ನ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ಸೋಮವಾರ (ನವೆಂಬರ್‌ 27) ಸಂಜೆವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಮಾಹಿತಿ ಪ್ರಕಾರ, ಗುಜರಾತ್‌ನ ಒಟ್ಟು 252 ತಾಲೂಕುಗಳ ಪೈಕಿ 234 ತಾಲೂಕುಗಳಲ್ಲಿ ಮಳೆಯಾಗಿದೆ. ಸೂರತ್‌, ಸುರೇಂದ್ರ ನಗರ, ಖೇಡಾ, ತಾಪಿ, ಭರೂಚ್‌ ಹಾಗೂ ಅಮ್ರೇಲಿಯಲ್ಲಿ 16 ಗಂಟೆಯಲ್ಲಿ 50-117 ಮಿಲಿಮೀಟರ್‌ ಮಳೆಯಾಗಿದೆ ಎಂದು ತಿಳಿಸಿದೆ.

ಸಂತಾಪ ಸೂಚಿಸಿದ ಅಮಿತ್‌ ಶಾ

ಮಳೆ ಸಂಬಂಧಿತ ಅವಘಡಗಳು ಹಾಗೂ ಸಿಡಿಲು ಬಡಿದು 20 ಮಂದಿ ಮೃತಪಟ್ಟಿರುವುದಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಂತಾಪ ಸೂಚಿಸಿದ್ದಾರೆ. “ಗುಜರಾತ್‌ನ ಹಲವೆಡೆ ಸಿಡಿಲು ಬಡಿದು ನಾಗರಿಕರು ಮೃತಪಟ್ಟಿರುವ ಸುದ್ದಿ ತಿಳಿದು ಅತೀವ ನೋವಾಗಿದೆ. ಮಳೆಯಿಂದಾಗಿ ಜೀವ ಕಳೆದುಕೊಂಡವರ ಕುಟುಂಬಸ್ಥರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಸ್ಥಳೀಯ ಆಡಳಿತವು ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ಗಾಯಗೊಂಡವರು ಕ್ಷಿಪ್ರವಾಗಿ ಗುಣಮುಖರಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Rain News: ಕಡೂರಿನಲ್ಲಿ ಸಿಡಿಲು ಬಡಿದು ಒಬ್ಬನ ಸಾವು, ನಾಲ್ವರಿಗೆ ಗಾಯ

ದಾಹೋದ್‌ ಜಿಲ್ಲೆಯಲ್ಲಿ ನಾಲ್ವರು, ಭರೂಚ್‌ ಜಿಲ್ಲೆಯಲ್ಲಿ ಮೂವರು, ತಾಪಿ ಜಿಲ್ಲೆಯಲ್ಲಿ ಇಬ್ಬರು, ಅಹಮದಾಬಾದ್‌, ಅಮ್ರೇಲಿ, ಬನಸ್ಕಾಂತ, ಬೋಟಾಡ್‌, ಖೇಡಾ, ಮೆಹ್ಸಾನ, ಪಂಚಹಲ್‌, ಸಬರ್‌ಕಾಂತ, ಸೂರತ್‌, ಸುರೇಂದ್ರನಗರ ಹಾಗೂ ದೇವಭೂಮಿ ದ್ವಾರಕಾದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ನಿರಾಶ್ರಿತರಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಅಕಾಲಿಕ ಮಳೆಗೆ ನೂರಾರು ಕೋಟಿ ರೂ. ಮೌಲ್ಯದ ಬೆಳೆ ನಾಶವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version