ಕಾಶ್ಮೀರದ ವಿವಿಧ ಠಾಣೆಗಳಲ್ಲಿ ಒಟ್ಟು 20 ಪುರುಷರು ತಮ್ಮ ಪತ್ನಿ ಕಾಣೆಯಾಗಿದ್ದಾಳೆ (Wife Missing) ಎಂದು ದೂರು ಕೊಟ್ಟಿದ್ದಾರೆ. ಲಿಖಿತ ದೂರಿನೊಂದಿಗೆ ತಮ್ಮ ಹೆಂಡತಿಯ ಫೋಟೋವನ್ನೂ ಕೊಟ್ಟಿದ್ದಾರೆ. ಆ ಫೋಟೊ ನೋಡಿದ ಪೊಲೀಸರೇ ಶಾಕ್ ಆಗಿದ್ದಾರೆ. ಆ 20 ಯುವಕರ ಪತ್ನಿಯೂ ‘ಒಬ್ಬಳೇ’. ದೂರು ಕೊಟ್ಟವರು ಬೇರೆಬೇರೆಯವರಾದರೂ ಅವರು ಕೊಟ್ಟಿರುವ ಫೋಟೊದಲ್ಲಿ ಇರುವ ಹುಡುಗಿ ಒಬ್ಬಳೇ. ಇವನ ಹೆಂಡತಿಯೇ ಅವನ ಹೆಂಡತಿ..ಅವನ ಪತ್ನಿಯೇ ಮತ್ತೊಬ್ಬಾತನಿಗೂ ಹೆಂಡ್ತಿ. ಆ ಒಬ್ಬಳು ಮಹಿಳೆ ಅಷ್ಟೂ 20 ಜನರಿಗೂ ವಂಚನೆ ಮಾಡಿ, ಮದುವೆಯಾಗಿ ಕೈಕೊಟ್ಟು-ಜತೆಗೆ ಅವರ ಹಣ-ಒಡವೆ ದೋಚಿಕೊಂಡು ಹೋಗಿದ್ದಾಳೆ.
ಈ ಸುದ್ದಿ, ಮಾಧ್ಯಮಗಳಲ್ಲಿ ಸದ್ಯ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಹೀಗೆ ಯುವತಿಯಿಂದ ಮೋಸಕ್ಕೆ ಒಳಗಾದ ಹುಡುಗನ ಅಪ್ಪ ಅಬ್ದುಲ್ ಅಹ್ಮದ್ ಮೀರ್ ಎಂಬುವರು ಘಟನೆ ಬಗ್ಗೆ ದಿ ಕಾಶ್ಮೀರಿಯತ್ ಮಾಧ್ಯಮಕ್ಕೆ ವಿವರಿಸಿದ್ದಾರೆ. ‘ನನ್ನ ಮಗನ ಮದುವೆ ಮಾಡಲು ಹುಡುಗಿ ಹುಡುಕುತ್ತಿದ್ದಾಗ ಬ್ರೋಕರ್ವೊಬ್ಬ ಒಬ್ಬಳು ಯುವತಿಯ ಫೋಟೊ ತೋರಿಸಿದ. ನಮಗೆ ಒಪ್ಪಿಗೆಯಾಯಿತು. ಆದರೂ ನನ್ನ ಮಗನ ದೇಹದಲ್ಲಿ ಸ್ವಲ್ಪ ಊನ ಇರುವುದರಿಂದ ಆ ಯುವತಿಯ ಕಡೆಯವರಿಗೆ ಹಣ ಕೊಡಬೇಕು ಎಂದು ಬ್ರೋಕರ್ ಹೇಳಿದ. ನಮಗೂ ಕೂಡ ಮಗನ ಮದುವೆಯಾಗುವುದು ಮುಖ್ಯವಾಗಿತ್ತು. ಹೀಗಾಗಿ ನಾವು 2 ಲಕ್ಷ ರೂಪಾಯಿ ಕೊಟ್ಟೆವು.
ಆ ಹುಡುಗಿ ಮತ್ತು ಅವಳ ಮನೆಯವರೊಂದಿಗೆ ಮದುವೆಯ ಮತುಕತೆ ಆಡಲು ರಾಜೌರಿಗೆ ಹೋಗಿ, ಒಂದು ಹೋಟೆಲ್ನಲ್ಲಿ ರೂಮ್ಗಳನ್ನು ಬುಕ್ ಮಾಡಿ ಉಳಿದುಕೊಂಡೆವು. ಆದರೆ ಬ್ರೋಕರ್ ಹುಡುಗಿಯರನ್ನು ಕರೆದುಕೊಂಡು ಬರಲು ವಿಳಂಬ ಮಾಡುತ್ತಿದ್ದ. ಯಾಕಿಷ್ಟು ತಡ ಎಂದು ಕೇಳಿದ್ದಕ್ಕೆ, ಹುಡುಗಿಗೆ ಸಣ್ಣ ಆ್ಯಕ್ಸಿಡೆಂಟ್ ಆಗಿದೆ. ಹೀಗಾಗಿ ಆಕೆ ಅರ್ಧ ಹಣವನ್ನು ವಾಪಸ್ ಕೊಟ್ಟಳು ಎಂದು ಹೇಳಿ 1ಲಕ್ಷ ರೂಪಾಯಿ ವಾಪಸ್ ಕೊಟ್ಟ. ಅದಾಗಿ ಕೆಲವೇ ಹೊತ್ತಲ್ಲಿ ಬಂದು, ಮತ್ತೆ ಹಣ ವಾಪಸ್ ಕೇಳಿದ. ಅಷ್ಟೇ ಅಲ್ಲ, ಇನ್ನೊಬ್ಬಳು ಹುಡುಗಿಯ ಫೋಟೊ ಕೊಟ್ಟು, ನಿಮ್ಮ ಮಗನನ್ನು ಈಕೆ ಮದುವೆಯಾಗಲು ಒಪ್ಪಿಕೊಂಡಿದ್ದಾಳೆ ಎಂದು ಹೇಳಿದ. ಸಂಜೆ ಪ್ರಾರ್ಥನೆ ಹೊತ್ತಿಗೆ ಆಕೆಯನ್ನು ಕರೆದುಕೊಂಡು ಬಂದ. ನೋಡಿ-ಮಾತುಕತೆಯೆಲ್ಲ ಆಗಿ ರಾಜೌರಿಯ ವಿವಾಹವೂ ಆಯ್ತು.’
ಸಂಜೆಯೇ ವಾಪಸ್ ಕಾಶ್ಮೀರಕ್ಕೆ ಬಂದೆವು. ಆ ಯುವತಿ ಸ್ವಲ್ಪ ದಿನ ನಮ್ಮ ಮನೆಯಲ್ಲೇ ಇದ್ದಳು. ಆದರೆ ಕೆಲವು ದಿನಗಳ ಬಳಿಕ ಹುಷಾರಿಲ್ಲ, ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಹೋದವಳು ವಾಪಸ್ ಬರಲಿಲ್ಲ. ಅಂದೂ ಕೂಡ ನನ್ನ ಮಗನೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಆಸ್ಪತ್ರೆ ಬಳಿ ಅವಳನ್ನ ನಿಲ್ಲಿಸಿ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಲು ಅವನು ಹೋದಾಗ ಇತ್ತ ಕಣ್ಮರೆಯಾಗಿದ್ದಾಳೆ. ಜತೆಗೆ ಮನೆಯಲ್ಲಿದ್ದ ಒಡವೆ-ಹಣವೂ ಹೋಗಿದೆ ಎಂದು ಅಬ್ದುಲ್ ಅಹ್ಮದ್ ಮೀರ್ ತಿಳಿಸಿದ್ದಾರೆ.
ಇದನ್ನೂ ಓದಿ: ಮದುವೆಯಾಗುವುದೇ ವೃತ್ತಿ, ಲಕ್ಷಲಕ್ಷ ಹಣ ಸಂಪಾದನೆ; 15ನೇ ಹೆಂಡತಿಯಿಂದ ಪೊಲೀಸರಿಗೆ ಸಿಕ್ಕಿಬಿದ್ದ!
ಹೀಗೆ ಈಗ 20 ಕುಟುಂಬಗಳೂ ಒಬ್ಬೊಬ್ಬರೂ ಒಂದೊಂದು ಕತೆ ಹೇಳುತ್ತಿದ್ದಾರೆ. ತಾವು ಮೋಸ ಹೋದ ಬಗೆಯನ್ನು ಸಮೀಪದ ಪೊಲೀಸ್ ಸ್ಟೇಶನ್ನಲ್ಲಿ ತಿಳಿಸಿದ್ದಾರೆ. ಯುವತಿ ತನ್ನ ಹೆಸರನ್ನು ಬದಲಿಸಿಕೊಳ್ಳುತ್ತಿದ್ದಳು. ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದಳು ಎಂದು ಹೇಳಲಾಗಿದೆ. ಹಾಗೇ, ಬ್ರೋಕರ್, ಯುವತಿ ಜತೆಗೆ ಇನ್ಯಾರೆಲ್ಲ ಈ ವಂಚನೆಯ ಜಾಲದ ಭಾಗವಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.