ಪಟನಾ: ಬಿಹಾರದ ಸರನ್ ಜಿಲ್ಲೆ ಛಾಪ್ರಾ ಪ್ರದೇಶದಲ್ಲಿ ಕಳ್ಳಬಟ್ಟಿ ದುರಂತ (Bihar Hooch Tragedy) ಸಂಭವಿಸಿದೆ. ಕಳ್ಳಬಟ್ಟಿ ಸೇವಿಸಿ 20 ಮಂದಿ ಮೃತಪಟ್ಟಿದ್ದು, ಸೇವಿಸಿ ಅಸ್ವಸ್ಥರಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಹಲವು ಅಸ್ವಸ್ಥರು ಛಾಪ್ರಾ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವು ಜನರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಇಸುವಾಪುರ ಪೊಲೀಸ್ ಠಾಣೆಯ ಡೊಯಿಲಾ ಗ್ರಾಮದಲ್ಲಿ ಜನ ಕಳ್ಳಬಟ್ಟಿ ಸೇವಿಸಿದ್ದಾರೆ. ಒಂದಷ್ಟು ಜನ ಗ್ರಾಮದಲ್ಲೇ ಮೃತಪಟ್ಟರೆ, ಇನ್ನೂ ಒಂದಷ್ಟು ಜನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮಧೌರಾ ಡಿಎಸ್‌ಪಿ ಗ್ರಾಮಕ್ಕೆ ಭೇಟಿ ನೀಡಿದ್ದು, ಅಸ್ವಸ್ಥರಿಗಾಗಿ ಶೋಧ ನಡೆಸಲು ಸೂಚಿಸಿದ್ದಾರೆ. ಹಾಗೆಯೇ, ಪ್ರಕರಣದ ತನಿಖೆಗೂ ಆದೇಶಿಸಿದ್ದಾರೆ. 2016ರಿಂದಲೂ ಸಾರಾಯಿ ನಿಷೇಧವಿದ್ದು, ಕಳ್ಳಬಟ್ಟಿ ದಂಧೆಗಳು ಮಾತ್ರ ನಡೆಯುತ್ತಿವೆ.
ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಆಕ್ರೋಶ
ಛಾಪ್ರಾ ಪ್ರದೇಶದಲ್ಲಿ ಕಳ್ಳಬಟ್ಟಿ ಸೇವಿಸಿ 20 ಮಂದಿ ಮೃತಪಟ್ಟಿರುವ ಕುರಿತು ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಶಾಸಕರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಸದನದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಗದ್ದಲ, ಗಲಾಟೆಯನ್ನು ಕಂಡ ನಿತೀಶ್ ಕುಮಾರ್, “ನೀವು ಮದ್ಯಪಾನ ಮಾಡಿ ಇಲ್ಲಿಗೆ ಬಂದಿದ್ದೀರಾ” ಎಂದು ಪ್ರಶ್ನಿಸಿದ್ದಾರೆ. ಹೀಗೆ ಹೇಳಿದ ಬಳಿಕ ಗಲಾಟೆ ಇನ್ನಷ್ಟು ಜೋರಾಗಿದೆ.
ಇದನ್ನೂ ಓದಿ | ಗುಜರಾತ್‌ನಲ್ಲಿ ವಿಷ ಮದ್ಯ ದುರಂತ: 21 ಮಂದಿ ಸಾವು, ಲಿಕ್ಕರ್ ಎಂದು ಕೆಮಿಕಲ್ ಕೊಟ್ಟರು!