Site icon Vistara News

ಉಕ್ರೇನ್​​ನಿಂದ ಮರಳಿದ್ದ ಭಾರತದ 2000 ವೈದ್ಯಕೀಯ ವಿದ್ಯಾರ್ಥಿಗಳಿಗೆ ಓದು ಮುಂದುವರಿಸಲು ಅವಕಾಶ ಕೊಟ್ಟ ಉಜ್ಬೇಕಿಸ್ತಾನ

Medical

ಉಕ್ರೇನ್​ ಮೇಲೆ ರಷ್ಯಾ ಯುದ್ಧ ಮಾಡಿದಾಗ ಅಲ್ಲಿಂದ 10 ಸಾವಿರಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್​ ಬಂದಿದ್ದಾರೆ. ಭಾರತದಲ್ಲಿ ಅವರ ಮುಂದಿನ ಓದು, ಭವಿಷ್ಯದ ಬಗ್ಗೆ ಇನ್ನೂ ಯಾವುದೇ ಒಂದು ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ. ಹೀಗಿರುವಾಗ ಉಜ್ಬೇಕಿಸ್ತಾನ ಸರ್ಕಾರ ಒಂದು ಮಹತ್ವದ ನಿರ್ಧಾರ ಪ್ರಕಟಿಸಿದೆ. ಉಕ್ರೇನ್​​ನಿಂದ ಭಾರತಕ್ಕೆ ವಾಪಸ್​ ಬಂದ ವಿದ್ಯಾರ್ಥಿಗಳಲ್ಲಿ ಸುಮಾರು 2000 ಜನರಿಗೆ ತಮ್ಮ ದೇಶದ ವೈದ್ಯಕೀಯ ಕಾಲೇಜುಗಳಲ್ಲಿ ಸೀಟ್​ ಕೊಡುವುದಾಗಿ ಹೇಳಿದೆ.

ಈ ಬಗ್ಗೆ ಉಜ್ಬೇಕಿಸ್ತಾನ​ ವೈದ್ಯಕೀಯ ಉನ್ನತ ಶಿಕ್ಷಣ ಸಂಸ್ಥೆ (ಎಂಎಚ್​ಇಐ) ಪ್ರಕ್ರಿಯೆಯನ್ನು ಶುರುಮಾಡಿದೆ. 2000 ವಿದ್ಯಾರ್ಥಿಗಳಲ್ಲಿ ಕೆಲವರಿಗೆ ಸಾಂಕೇತಿಕವಾಗಿ ಪ್ರವೇಶ ಪತ್ರಗಳನ್ನೂ ವಿತರಣೆ ಮಾಡಿದೆ. ಹೈದರಾಬಾದ್​ನ ನಿಯೋ ಇನ್​ಸ್ಟಿಟ್ಯೂಟ್ ಆಫ್​ ಮೆಡಿಕಲ್​ ಸೈನ್ಸ್​ ಆ್ಯಂಡ್​ ಟೆಕ್ನಾಲಜಿಯಲ್ಲಿ ಈ ಪ್ರವೇಶ ಪತ್ರ ವಿತರಣೆ ಕಾರ್ಯಕ್ರಮ ನಡೆದಿತ್ತು. ಭಾರತದಲ್ಲಿರುವ ಉಜ್ಬೇಕಿಸ್ತಾನ್​ ರಾಯಭಾರಿ ದಿಲ್ಶೋದ್ ಅಖಾಟೋವ್ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತೀಯ ರಾಷ್ಟ್ರೀಯ ವೈದ್ಯಕೀಯ ಮಂಡಳಿಯ ಹೊಸ ಸ್ಕ್ರೀನಿಂಗ್​ ಟೆಸ್ಟ್ ನಿಯಮಗಳು ಮತ್ತು ವಿದೇಶಿ ವೈದ್ಯಕೀಯ ಪದವೀಧರ ಪರವಾನಗಿ ಸ್ವೀಕಾರಾರ್ಹ ಎಂದು ಉಜ್ಬೇಕಿಸ್ತಾನ್ ವೈದ್ಯಕೀಯ ಉನ್ನತ ಶಿಕ್ಷಣ ಸಂಸ್ಥೆ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.

ಉಜ್ಬೇಕಿಸ್ತಾನದ ವಿವಿಧ ಯೂನಿವರ್ಸಿಟಿಗಳಲ್ಲಿ ಈಗಾಗಲೇ ಭಾರತದ 500 ವಿದ್ಯಾರ್ಥಿಗಳು ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದೀಗ ಮತ್ತೆ ಹೆಚ್ಚುವರಿಯಾಗಿ 2000 ವಿದ್ಯಾರ್ಥಿಗಳು ಸೇರಲಿದ್ದಾರೆ. ಭಾರತದ ಇನ್ನಷ್ಟು ವಿದ್ಯಾರ್ಥಿಗಳಿಗೆ ಸೀಟ್​ ವ್ಯವಸ್ಥೆ ಮಾಡಲು ಪ್ರಯತ್ನ ಪಡುವುದಾಗಿಯೂ ದಿಲ್ಶೋದ್ ತಿಳಿಸಿದ್ದಾರೆ. ಇದಕ್ಕೂ ಮೊದಲು ಕಳೆದ ತಿಂಗಳು ಉಜ್ಬೇಕಿಸ್ತಾನ್​ ಆರೋಗ್ಯ ಇಲಾಖೆ ಮತ್ತು ಭಾರತದ ಆರೋಗ್ಯ ಇಲಾಖೆ ನಡುವೆ ಇದೇ ವಿಚಾರವಾಗಿ ಸುದೀರ್ಘ ಮಾತುಕತೆ ನಡೆದಿತ್ತು. ಉಜ್ಬೇಕಿಸ್ತಾನದ ಸರ್ಜನ್​​ಗಳು ಮತ್ತು ವೈದ್ಯರು ಹೈದರಾಬಾದ್​ನ ಎಐಜಿ, ಯಶೋದಾ ಮತ್ತು ಮೇದಾಂತಾ ಆಸ್ಪತ್ರೆಗಳಿಗೆ ಭೇಟಿಕೊಟ್ಟಿದ್ದರು.

ಉಕ್ರೇನ್​​ ಶಿಕ್ಷಣ ವ್ಯವಸ್ಥೆಗೂ ಭಾರತದ ಶಿಕ್ಷಣ ವ್ಯವಸ್ಥೆಗೂ ವಿಭಿನ್ನತೆ ಇರುವುದರಿಂದ ಅಲ್ಲಿಂದ ಬಂದ ವಿದ್ಯಾರ್ಥಿಗಳಿಗೆ ಒಮ್ಮೆಲೇ ಇಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ಶಿಕ್ಷಣ ಕಲ್ಪಿಸುವುದು ಸುಲಭವೂ ಆಗಿರಲಿಲ್ಲ. ಆದರೆ ಉಕ್ರೇನ್​ ಮತ್ತು ಉಜ್ಬೇಕಿಸ್ತಾನ್​​ ಶಿಕ್ಷಣ ವ್ಯವಸ್ಥೆಯಲ್ಲಿ ಸಾಮ್ಯತೆ ಇರುವುದರಿಂದ, ಉಕ್ರೇನ್​ನಿಂದ ಬಂದು ಉಜ್ಬೇಕಿಸ್ತಾನಕ್ಕೆ ಓದಲು ತೆರಳುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ವಿಚಾರದಲ್ಲಿ ಯಾವುದೇ ತೊಂದರೆಯೂ ಆಗುವುದಿಲ್ಲ ಎಂದು ಹೈದರಾಬಾದ್​ನ ನಿಯೋ ಇನ್​ಸ್ಟಿಟ್ಯೂಟ್ ಆಫ್​ ಮೆಡಿಕಲ್​ ಸೈನ್ಸ್​ ಆ್ಯಂಡ್​ ಟೆಕ್ನಾಲಜಿ ನಿರ್ದೇಶಕಿ ಡಾ. ಬಿ. ದಿವ್ಯಾ ಆರ್​ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ವಿದ್ಯಾರ್ಥಿಗಳಿಗೆ ಉಜ್ಬೇಕಿಸ್ತಾನ ಇದೀಗ ಎರಡು ಪದವಿ ಪೂರ್ವ ವೈದ್ಯಕೀಯ ಕೋರ್ಸ್​​ಗಳನ್ನು ನೀಡುವುದಾಗಿ ತಿಳಿಸಿದೆ. ಅದರಲ್ಲಿ ಒಂದು ಆ ಮೂರು ಯೂನಿವರ್ಸಿಟಿಗಳಲ್ಲಿ ಸೀಟ್ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ಒಂದು ಆರು ವರ್ಷದ ಎಂಡಿ ಡಿಪ್ಲೋಮಾ ಮತ್ತು ಇನ್ನೊಂದು ಎಂಬಿಬಿಎಸ್​ ಪದವಿ + ಒಂದು ವರ್ಷದ ಇಂಟರ್ನ್​ಶಿಪ್​. ಉಜ್ಬೇಕಿಸ್ತಾನ್​​ದ ಈ ನಡೆಯಿಂದ ಭಾರತೀಯ ವಿದ್ಯಾರ್ಥಿಗಳಲ್ಲಿ ತುಸು ಭರವಸೆ ಬಂದಂತಾಗಿದೆ.

ಇದನ್ನೂ ಓದಿ: ರಷ್ಯಾ-ಉಕ್ರೇನ್​ ಯುದ್ಧ; ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ್ದು ಮತ್ತೆ ತಟಸ್ಥ ನಿಲುವು, ಮತದಾನದಿಂದ ದೂರ

Exit mobile version