ನವದೆಹಲಿ: ದೇಶದಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು (2000 Notes Withdrawn) ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಿಂತೆಗೆದುಕೊಂಡಿದೆ. ಎಟಿಎಂಗಳಿಗೆ 2 ಸಾವಿರ ರೂ. ನೋಟುಗಳನ್ನು ಬಿಡುಗಡೆ ಮಾಡದಂತೆಯೂ ಸೂಚಿಸಿದೆ. ಆದರೂ, ಸೆಪ್ಟೆಂಬರ್ 30ರವರೆಗೆ 2 ಸಾವಿರ ರೂ. ನೋಟುಗಳು ಚಲಾವಣೆಯಲ್ಲಿ ಇರಲಿವೆ. ಸದ್ಯ ಆರ್‌ಬಿಐ ಹೊರಡಿಸಿರುವ ಆದೇಶದ ಕುರಿತು ನಿಮ್ಮ ತಲೆಯಲ್ಲಿ ಇರುವ ಪ್ರಶ್ನೆಗಳಿಗೆ ಉತ್ತರ ಇಲ್ಲಿವೆ.
ಆರ್‌ಬಿಐ 2 ಸಾವಿರ ರೂ. ನೋಟು ಹಿಂತೆಗೆದುಕೊಂಡಿದ್ದು ಏಕೆ?
ಆರ್‌ಬಿಐ ಕಾಯ್ದೆಯ ಸೆಕ್ಷನ್ 24 (1)ರ ಪ್ರಕಾರ ದೇಶದಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳಲಾಗಿದೆ. 2018-19ನೇ ಸಾಲಿನಲ್ಲಿಯೇ 2 ಸಾವಿರ ರೂ. ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆ. ಇದುವರೆಗೆ ಬ್ಯಾಂಕುಗಳಿಗೆ ಗ್ರಾಹಕರು ನೀಡಿದ ನೋಟುಗಳನ್ನು ಸಂಗ್ರಹಿಸಲಾಗುತ್ತಿತ್ತು. ಇನ್ನು ಮುಂದೆ ಚಲಾವಣೆಯೂ ರದ್ದಾಗಲಿದೆ. ಕ್ಲೀನ್ ನೋಟ್ ಪಾಲಿಸಿ (Clean Note Policy) ಅನ್ವಯ, ಅಂದರೆ, ಜನರಿಗೆ ಗುಣಮಟ್ಟದ ನೋಟುಗಳನ್ನು ನೀಡುವ ದೃಷ್ಟಿಯಿಂದ 2 ಸಾವಿರ ರೂ. ನೋಟುಗಳನ್ನು ಹಿಂತೆಗೆಯಲು ತೀರ್ಮಾನಿಸಲಾಗಿದೆ.
ನೋಟು ಹಿಂತೆಗೆತ ಎಂದರೆ ಸಂಪೂರ್ಣ ನಿಷೇಧವೇ?
ಖಂಡಿತ ಇಲ್ಲ. ನೋಟುಗಳನ್ನು ಹಿಂತೆಗೆದುಕೊಂಡರೂ ಕೂಡ ನೋಟುಗಳ ಮಾನ್ಯತೆ ಇರಲಿದೆ.
ನಾವೀಗ 2 ಸಾವಿರ ರೂ. ನೋಟುಗಳನ್ನು ವಹಿವಾಟಿಗೆ ಬಳಸಬಹುದೇ?
ಖಂಡಿತವಾಗಿ ಬಳಸಬಹುದು. 2023ರ ಸೆಪ್ಟೆಂಬರ್ 30ರವರೆಗೆ 2 ಸಾವಿರ ರೂ. ನೋಟುಗಳನ್ನು ಚಲಾವಣೆ ಮಾಡಬಹುದು. ಇವುಗಳನ್ನು ನೀಡಿ ವಹಿವಾಟು ಕೈಗೊಳ್ಳಬಹುದು. ಆದರೆ, 2 ಸಾವಿರ ರೂ. ನೋಟು ಇರುವವರು ಸೆಪ್ಟೆಂಬರ್ 30ರೊಳಗೆ ಬ್ಯಾಂಕ್‌ಗಳಿಗೆ ನೀಡಿ, ಖಾತೆಗೆ ಹಣ ಹಾಕಿಸಿಕೊಳ್ಳಬಹುದು.
2 ಸಾವಿರ ರೂ. ನೋಟು ಇರುವವರು ಈಗ ಏನು ಮಾಡಬೇಕು?
2 ಸಾವಿರ ರೂ. ನೋಟುಗಳು ಇರುವವರು ತಮ್ಮ ಹತ್ತಿರದ ಬ್ಯಾಂಕ್‌ಗಳು ಹಾಗೂ ಆರ್‌ಬಿಐ ಪ್ರಾದೇಶಿಕ ಕಚೇರಿಗಳಿಗೆ ತೆರಳಿ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು. ಹಾಗೆಯೇ, ರೆಗ್ಯುಲೇಟರಿ ನಿಯಮಗಳು ಹಾಗೂ ಕೆವೈಸಿ ಅನುಸಾರ ನಿಮ್ಮ ಬ್ಯಾಂಕ್ ಖಾತೆಗಳಿಗೂ ಠೇವಣಿ ಮಾಡಿಕೊಳ್ಳಬಹುದು.
ಎಕ್ಸ್‌ಚೇಂಜ್ ಮಾಡುವಾಗ ಲಿಮಿಟ್ ಇದೆಯೇ?
ಹೌದು, ಒಮ್ಮೆ ಒಬ್ಬ ವ್ಯಕ್ತಿಯು ಬ್ಯಾಂಕ್‌ಗೆ 2 ಸಾವಿರ ರೂ. ಮುಖಬೆಲೆಯ 10 ನೋಟುಗಳು ಅಂದರೆ, 20 ಸಾವಿರ ರೂ. ನೀಡಿ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಮಿತಿ ಇದೆ.
20 ಸಾವಿರ ರೂ.ಗಿಂತ ಹೆಚ್ಚು ಹಣ ಬೇಕಾದರೆ ಏನು ಮಾಡಬೇಕು?
20 ಸಾವಿರ ರೂಪಾಯಿವರೆಗೆ ನೋಟುಗಳನ್ನು ಎಕ್ಸ್‌ಚೇಂಜ್ ಮಾಡಿಕೊಂಡು, ಉಳಿದ ಹಣವನ್ನು ಬ್ಯಾಂಕ್ ಖಾತೆಗೆ ಠೇವಣಿ ಮಾಡಿಕೊಳ್ಳಬೇಕು. ನಂತರ ಬೇಕಾದ ಹಣವನ್ನು ವಿತ್‌ಡ್ರಾ ಮಾಡಬೇಕು.
ನೋಟುಗಳ ಎಕ್ಸ್‌ಚೇಂಜ್‌ಗೆ ಶುಲ್ಕವಿದೆಯೇ?
ಇಲ್ಲ. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 2 ಸಾವಿರ ರೂ. ನೋಟುಗಳನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು.
ಬ್ಯಾಂಕ್‌ಗಳು ಹಣ ಸ್ವೀಕರಿಸದಿದ್ದರೆ?
ಬ್ಯಾಂಕ್‌ಗಳು ಹಣ ಸ್ವೀಕರಿಸದಿದ್ದರೆ ನಾಗರಿಕರು ದೂರು ಸಲ್ಲಿಸಬಹುದು. ಯಾವುದೇ ಕಾರಣಕ್ಕೂ ಬ್ಯಾಂಕ್‌ಗಳು ಹಣ ನಿರಾಕರಿಸುವಂತಿಲ್ಲ.
ಇದನ್ನೂ ಓದಿ: 2000 notes withdrawal : 2,000 ರೂ. ನೋಟು ಚಲಾವಣೆಯಿಂದ ಹಿಂತೆಗೆತ: ಆರ್‌ಬಿಐ ಘೋಷಣೆ