Site icon Vistara News

2006ರ ಅಪಹರಣ ಪ್ರಕರಣ: ಗ್ಯಾಂಗ್‌ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್​​ಗೆ ಜೀವಾವಧಿ ಶಿಕ್ಷೆ, ಸಹೋದರನ ಖುಲಾಸೆ

2006 kidnapping case: Gangster Atiq Ahmad convicted; UP Court

ಲಖನೌ, ಉತ್ತರ ಪ್ರದೇಶ: 2006ರ ಉಮೇಶ್​ ಪಾಲ್ ಅಪಹರಣ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್-ರಾಜಕಾರಣಿ ಅತೀಕ್ ಅಹ್ಮದ್ (Atiq Ahmed) ಹಾಗೂ ವಕೀಲ ಸೌಲತ್ ಹನೀಫ್ ಮತ್ತು ದಿನೇಶ್ ಪಾಸಿಗೆ ಜೀವಾವಧಿ ಶಿಕ್ಷೆ ವಿಧಿಸಿ ಪ್ರಯಾಗ್​ ರಾಜ್ ಕೋರ್ಟ್ ತೀರ್ಪು ನೀಡಿದೆ. ಹಾಗೇ, ಅತೀಕ್ ಸಹೋದರ ಖಾಲಿದ್​ ಅಜೀಂ ಅಲಿಯಾಸ್​ ಅಶ್ರಫ್​ ಮತ್ತು ಇತರ ಆರು ಮಂದಿಯನ್ನು ಖುಲಾಸೆಗೊಳಿಸಿದೆ. ಅತೀಕ್ ಮತ್ತು ಇತರ ಇಬ್ಬರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 364-ಎ (ಅಪಹರಣ ಮತ್ತು ಹತ್ಯೆಗೆ ಆದೇಶ)ನಡಿ ಅಪರಾಧಿಗಳು ಎಂದು ಪರಗಣಿಸಲಾಗಿದೆ. ಈ ಕಾಯ್ದೆಯಡಿ ಗರಿಷ್ಠ ಶಿಕ್ಷೆಯಾಗಿ ಮರಣದಂಡನೆಯನ್ನೂ ವಿಧಿಸಬಹುದು ಎಂದು ಸರ್ಕಾರದ ಪರ ವಕೀಲ ಗುಲಾಬ್ ಚಂದ್ರ ಅಗ್ರಹಾರಿ ಹೇಳಿದ್ದಾರೆ. ಬಿಎಸ್‌ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಎಂಬುವವರನ್ನು ಅತೀಕ್ ಅಹ್ಮದ್ ಹಾಗೂ ಇತರರು 2006ರಲ್ಲಿ ಅಪಹರಣ ಮಾಡಿದ್ದರು. ಈ ಪ್ರಕರಣದ ವಿಚಾರಣೆಯನ್ನು ಪ್ರಯಾಗ್​ ರಾಜ್ ಕೋರ್ಟ್ ನಡೆಸಿತ್ತು.

ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರನ್ನೂ ಅತೀಕ್ ಅಹ್ಮದ್ ಕಡೆಯವರು ಕಳೆದ ತಿಂಗಳವಷ್ಟೇ ಹಾಡಹಗಲೇ ಶೂಟ್ ಮಾಡಿ ಕೊಲೆ ಮಾಡಿದ್ದರು. 2006ರ ಅಪಹರಣ ಪ್ರಕರಣದಲ್ಲಿ ಅತೀಕ್ ಅಹ್ಮದ್, ಅಶ್ರಫ್, ಹನೀಫ್, ದಿನೇಶ್ ಪಾಸಿ, ಫರ್ಹಾನ್, ಜಾವೇದ್, ಇಶಾರ್, ಅಸೀರ್ ಮಲ್ಲಿ ಮತ್ತು ಅನ್ಸಾರಿ ದೋಷಿ ಆರೋಪಿಗಳಾಗಿದ್ದಾರೆ. ಈ ಪೈಕಿ ಅನ್ಸರ್ ದೋಷಿ ನಿಧನರಾಗಿದ್ದಾರೆ.

ಇದನ್ನೂ ಓದಿ: ನಾನು ಕೊಲೆಯಾಗುವುದು ಪಕ್ಕಾ, ಜೈಲಿನಿಂದ ಹೊರ ಬರಲಾರೆ: ಗ್ಯಾಂಗಸ್ಟರ್ ರಾಜಕಾರಣಿ ಅತೀಕ್ ಅಹ್ಮದ್

ಏತನ್ಮಧ್ಯೆ, ಆರೋಪಿ ಅತೀಕ್ ಅಹ್ಮದ್‌ಗೆ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ತನ್ನನ್ನು ಫೇಕ್ ಎನ್‌ಕೌಂಟರ್‌ನಲ್ಲಿ ಪೊಲೀಸರು ಹತ್ಯೆ ಮಾಡುವ ಸಾಧ್ಯತೆ ಇದೆ. ಹಾಗಾಗಿ, ಉತ್ತರ ಪ್ರದೇಶ ಪೊಲೀಸರಿಂದ ರಕ್ಷಣೆ ಕೋರಿ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ. ಈತನ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.

Exit mobile version