ಕರ್ನೂಲ್: 2021ರಲ್ಲಿ ಇದೇ ತಿಂಗಳಲ್ಲಿ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ತೆಲುಗು ದೇಸಂ ಪಾರ್ಟಿ (ಟಿಡಿಪಿ) ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶ ವಿಧಾನಸಭೆಯಿಂದ ಕಣ್ಣೀರಿಡುತ್ತ ಹೊರನಡೆದಿದ್ದರು. ಅಂದು ಸದನದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕರು ಚಂದ್ರಬಾಬು ನಾಯ್ಡು ಮತ್ತು ಅವರ ಪತ್ನಿ ಸೇರಿ ಇಡೀ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಇದರಿಂದ ನೊಂದಿದ್ದ ಚಂದ್ರಬಾಬು ನಾಯ್ಡು, ‘ನನ್ನ ಪತ್ನಿಯನ್ನು ವೃಥಾ ರಾಜಕೀಯಕ್ಕೆ ಎಳೆದು ತರಲಾಗಿದೆ. ಆಕೆಯದು ಏನೂ ತಪ್ಪು ಇಲ್ಲದೆ ಇದ್ದರೂ, ಅವಳನ್ನೂ ನಿಂದಿಸಲಾಗಿದೆ. ಇನ್ನು ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದು, ನಾನು ಮುಖ್ಯಮಂತ್ರಿಯಾಗುವವರೆಗೂ ಈ ವಿಧಾನಸಭೆ ಮೆಟ್ಟಿಲು ಏರುವುದಿಲ್ಲ’ ಎಂದು ಶಪಥ ಮಾಡಿ ಅಲ್ಲಿಂದ ಹೋಗಿದ್ದರು.
ಅದನ್ನೀಗ ಮತ್ತೆ ಆಂಧ್ರದ ಜನರಿಗೆ ಚಂದ್ರಬಾಬು ನಾಯ್ಡು ಮತ್ತೆ ನೆನಪಿಸಿದ್ದಾರೆ. ಕರ್ನೂಲ್ ಜಿಲ್ಲೆಯಲ್ಲಿ ಬುಧವಾರ ಸಂಜೆ ರೋಡ್ ಶೋ ನಡೆಸಿದ ಚಂದ್ರಬಾಬು ನಾಯ್ಡು, ‘2024ರಲ್ಲಿ ಆಂಧ್ರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ದೇಸಂ ಪಾರ್ಟಿಯನ್ನೇನಾದರೂ ನೀವು ತಿರಸ್ಕಾರ ಮಾಡಿದರೆ, ಅದೇ ನನ್ನ ಕೊನೇ ಚುನಾವಣೆಯಾಗಲಿದೆ.’ ಎಂದು ಜನರ ಎದುರು ಮತ್ತೆ ತುಂಬ ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ.
‘ನಾನು ಮತ್ತೆ ಆಂಧ್ರಪ್ರದೇಶ ವಿಧಾನಸಭೆಗೆ ಕಾಲಿಡಬೇಕು, ನಾನು ರಾಜಕೀಯದಲ್ಲಿಯೇ ಉಳಿಯಬೇಕು, ಆಂಧ್ರಪ್ರದೇಶಕ್ಕೆ ನ್ಯಾಯ ಸಿಗಬೇಕು ಎಂದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ನೀವು ಗೆಲ್ಲಿಸಬೇಕು. ಹಾಗೊಮ್ಮೆ ನಾನು ಗೆಲ್ಲದೇ ಇದ್ದರೆ, ಅದೇ ನನ್ನ ಕೊನೇ ಚುನಾವಣೆ ಆಗಲಿದೆ. ನೀವು ನನ್ನನ್ನು ಆಶೀರ್ವಾದ ಮಾಡುತ್ತೀರಲ್ಲ?, ನೀವು ನನ್ನ ಮೇಲೆ ನಂಬಿಕೆ ಇಡುತ್ತೀರಲ್ಲ?’ ಎಂದು ಚಂದ್ರಬಾಬು ನಾಯ್ಡು ನೆರೆದಿದ್ದ ಜನರ ಎದುರು ಕೇಳಿದ್ದಾರೆ. ಆಗ ಅಲ್ಲಿ ಇದ್ದ ಜನರು ಅತ್ಯುತ್ಸಾಹದಿಂದ ‘ಖಂಡಿತ ನಿಮ್ಮನ್ನು ಗೆಲ್ಲಿಸುತ್ತೇವೆ’ ಎಂದು ಹೇಳಿದ್ದಾರೆ.
‘ರಾಜ್ಯದ ಭವಿಷ್ಯಕ್ಕಾಗಿ, ಮಕ್ಕಳ ಏಳ್ಗೆಗಾಗಿ ನಾನು ಹೋರಾಡುತ್ತೇನೆ. ನಾನು ಈ ಹಿಂದೆಯೂ ಆಂಧ್ರಪ್ರದೇಶದಲ್ಲಿ ಅತ್ಯುತ್ತಮ ಆಡಳಿತ ಕೊಟ್ಟಿದ್ದೆ. ಈಗ ಅನೇಕರು ನನ್ನ ವಯಸ್ಸಿನ ಬಗ್ಗೆ ಲೇವಡಿ ಮಾಡುತ್ತಿದ್ದಾರೆ. ಈ ವಯಸ್ಸಿನಲ್ಲಿ ಸಿಎಂ ಹುದ್ದೆ ಬೇಕಾ? ಕೇಳುತ್ತಿದ್ದಾರೆ. ಆದರೆ ನಾನು ಮತ್ತು ಪ್ರಧಾನಿ ಮೋದಿ ಒಂದೇ ವಯಸ್ಸಿನವರು. ಬೈಡೆನ್ ಅವರು ಅಮೆರಿಕ ಅಧ್ಯಕ್ಷರಾಗಿದ್ದು, ಅವರ 79ನೇ ವಯಸ್ಸಿನಲ್ಲಿ’ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಇದನ್ನೂ ಓದಿ: Shraddha Murder Case | ವಿಕೃತ ಹಂತಕ ಅಫ್ತಾಬ್ ಮತ್ತೆ 5 ದಿನ ಪೊಲೀಸ್ ಕಸ್ಟಡಿಗೆ, ಗಲ್ಲಿಗೇರಿಸುವಂತೆ ವಕೀಲರ ಆಗ್ರಹ