ನವ ದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೊಸ ಮೈತ್ರಿಕೂಟದ ಮೂಲಕ 500 ಲೋಕಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ ವಿರುದ್ಧ ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪ್ರತಿಪಕ್ಷಗಳು ಕಾರ್ಯತಂತ್ರ ಹೂಡುವ ನಿರೀಕ್ಷೆ ಇದೆ. ಬಿಹಾರ ಸಿಎಂ ನಿತೀಶ್ ಕುಮಾರ್ ಇತ್ತೀಚೆಗೆ ಕಾಂಗ್ರೆಸ್ ನಾಯಕರು ( 2024 General election) ಹಾಗೂ ಪ್ರಾದೇಶಿಕ ಪಕ್ಷಗಳ ಮುಖಂಡರುಗಳ ಜತೆಗೆ ನಡೆಸಿರುವ ಮಾತುಕತೆಯ ವೇಳೆ ಈ ಪ್ರಸ್ತಾಪ ಮುಂದಿಟ್ಟಿದ್ದಾರೆ. ಬಿಜೆಪಿ ವಿರೋಧಿ ಪಕ್ಷಗಳನ್ನು ಒಗ್ಗೂಡಿಸಲು ಅವರು ಯತ್ನಿಸುತ್ತಿದ್ದಾರೆ. ಅಂದರೆ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಪ್ರತ್ಯೇಕವಾಗಿ ಸ್ಪರ್ಧಿಸುವುದರ ಬದಲಿಗೆ ಎಲ್ಲರೂ ಸೇರಿ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕಾರ್ಯತಂತ್ರ.
ಬಿಜೆಪಿ ವಿರೋಧಿ ಪಕ್ಷಗಳ ಹೊಸ ಮೈತ್ರಿಕೂಟಕ್ಕೆ ಪ್ರಸ್ತಾಪ:
ನಿತೀಶ್ ಕುಮಾರ್ ಅವರು ಪ್ರಾದೇಶಿಕ ಪಕ್ಷಗಳ ಜತೆಗೆ ಹಲವಾರು ಸುತ್ತುಗಳ ಮಾತುಕತೆ ನಡೆಸಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಮಣಿಸಲು ಬಿಜೆಪಿ ವಿರೋಧಿ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟವನ್ನು ರಚಿಸುವ ಪ್ರಸ್ತಾಪವನ್ನು ನಿತೀಶ್ ಕುಮಾರ್ ಮಾಡಿದ್ದಾರೆ. ಹೊಸ ಮೈತಿಕೂಟದಲ್ಲಿ ಒಬ್ಬ ಸಂಚಾಲಕ ಮತ್ತು ಅಧ್ಯಕ್ಷ ಇರುತ್ತಾರೆ. ಸಂಚಾಲಕರು ಹೊಸ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಆಗಲಿದ್ದಾರೆ. ಜೂನ್ ವೇಳೆಗೆ ಈ ಎಲ್ಲ ಬೆಳವಣಿಗೆಯ ಚಿತ್ರಣ ಸ್ಪಷ್ಟವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಅಧ್ಯಕ್ಷರು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರಗಳೊಂದಿಗೆ ಸಾಂಕೇತಿಕವಾಗಿ ಮೈತ್ರಿಕೂಟದ ನೇತೃತ್ವ ವಹಿಸುವ ನಿರೀಕ್ಷೆ ಇದೆ. 2004ರಲ್ಲಿ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (UPA) ಹಾಗೂ 1977ರಲ್ಲಿ ಜನತಾ ಪಕ್ಷದ ಸರ್ಕಾರ ರಚನೆಯಾದಾಗ ಇದೇ ರೀತಿಯ ಪ್ರಯೋಗ ನಡೆದಿತ್ತು. ಮೇ ಮಧ್ಯಭಾಗದಲ್ಲಿ ಪ್ರಾದೇಶಿಕ ಪಕ್ಷಗಳ ಜತೆಗೆ ಮತ್ತೊಂದು ಸುತ್ತಿನ ಮಾತುಕತೆಯ ಬಳಿಕ ಜೂನ್‌ನಲ್ಲಿ ಹೊಸ ರಂಗ ಅಸ್ತಿತ್ವಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಡಿಸಿಎಂ ತೇಜಸ್ವಿ ಪ್ರಸಾದ್ ಯಾದವ್ ಜತೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರನ್ನು ಏಪ್ರಿಲ್ 12ರಂದು ನವ ದೆಹಲಿಯಲ್ಲಿ ಭೇಟಿಯಾಗಿ ಚರ್ಚಿಸಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಇದು ಪ್ರತಿಪಕ್ಷಗಳ ಒಗ್ಗಟ್ಟಿನ ದೃಷ್ಟಿಯಿಂದ ನಡೆದಿರುವ ಚಾರಿತ್ರಿಕ ಸಭೆಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ಸಂಸದ ಸ್ಥಾನದಿಂದ ಅನರ್ಹಗೊಂಡ ಕೆಲ ವಾರಗಳ ಬಳಿಕ ಈ ಬೆಳವಣಿಗೆ ನಡೆದಿರುವುದು ಗಮನಾರ್ಹ.
ಹೀಗಿದ್ದರೂ, ಪಶ್ಚಿಮ ಬಂಗಾಳ, ಕೇರಳ, ತೆಲಂಗಾಣ ಅಥವಾ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳೇ ಪರಸ್ಪರ ಸ್ಪರ್ಧಿಗಳಾಗಿರುವುದರಿಂದ ಜಂಟಿ ಅಭ್ಯರ್ಥಿಯನ್ನು ಹೇಗೆ ಕಣಕ್ಕಿಳಿಸಲಿವೆ ಎಂಬುದು ಕುತೂಹಲಕರ. ಹೀಗಾಗಿ ಆಯಾ ರಾಜ್ಯಗಳಲ್ಲಿ ಪಕ್ಷಗಳ ಬಲಾಬಲ ಪರಿಗಣಿಸಿ ಸೀಟು ಹಂಚಿಕೆಗೆ ಪ್ರತಿಪಕ್ಷಗಳು ನಿರ್ಧರಿಸುವ ಸಾಧ್ಯತೆ ಇದೆ. ಉದಾಹರಣೆಗೆ ಬಿಹಾರದಲ್ಲಿ ಆರ್‌ಜೆಡಿ ಮತ್ತು ಜೆಡಿಯು ಹೆಚ್ಚಿನ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಪ್ರಾಧಾನ್ಯತೆ ಸಿಗಲಿದೆ.
ರಾಜಕೀಯ ವಿಶ್ಲೇಷಕ ಡಿಎಂ ದಿವಾಕರ್ ಪ್ರಕಾರ, ಈಗಾಗಲೇ ಪ್ರಾದೇಶಿಕ ಪಕ್ಷಗಳಿಗೆ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಒಗ್ಗೂಡದಿದ್ದರೆ 2024ರ ಚುನಾವಣೆಯಲ್ಲಿ ಗೆಲ್ಲಲಾಗದು ಎಂಬುದು ಮನವರಿಕೆಯಾಗಿದೆ. ಹೀಗಾಗಿ ಅವುಗಳಿಗೆ ಈ ಕಾರ್ಯತಂತ್ರ ಹಿಡಿಸುವ ಸಾಧ್ಯತೆ ಇದೆ.
ಹಲವಾರು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ಗೆ ಪ್ರತಿಸ್ಪರ್ಧಿಗಳಾಗಿವೆ. ಆದರೆ ಲೋಕಸಭೆ ಚುನಾವಣೆ ವಿಚಾರಕ್ಕೆ ಬಂದರೆ ಪ್ರಾದೇಶಿಕ ಪಕ್ಷಗಳು ಕಳೆದುಕೊಳ್ಳುವುದೇನೂ ಇಲ್ಲ. ಏಕೆಂದರೆ ಅದು ರಾಜ್ಯ ರಾಜಕಾರಣದ ಮೇಲೆ ಪ್ರಭಾವ ಬೀರುವುದಿಲ್ಲ. ಆದ್ದರಿಂದ ಸಮಾನ ಶತ್ರುವನ್ನು ಮಣಿಸಲು ಅವುಗಳು ಒಗ್ಗೂಡುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯು ಎಡಪಕ್ಷ ಮತ್ತು ಕಾಂಗ್ರೆಸ್ ಜತೆಗೂಡಿ ಮೈತ್ರಿಕೂಟ ಅಡಿಯಲ್ಲಿ ಲೋಕಸಭೆ ಚುನಾವಣೆಯನ್ನು ಎದುರಿಸಬಹುದು. ಬಿಹಾರದಲ್ಲಿ ಈಗಾಗಲೇ ಎಲ್ಲ ಏಳು ಪ್ರತಿಪಕ್ಷಗಳು ಜಂಟಿ ವೇದಿಕೆಯನ್ನು ಹೊಂದಿವೆ. ಹೀಗಾಗಿ ಒಬ್ಬರ ವಿರುದ್ಧ ಒಬ್ಬರು (One against one) ಪರಿಣಾಮಕಾರಿ ಎನ್ನುತ್ತಾರೆ ವಿಶ್ಲೇಷಕರು.