ಈಗಿನ ಕಾಲದಲ್ಲಿ ಮನುಷ್ಯನಿಗೆ ಮೊಬೈಲ್ನಷ್ಟು ‘ಅಮೂಲ್ಯ’ ವಸ್ತು ಇನ್ನೊಂದು ಇರಲಿಕ್ಕೆ ಇಲ್ಲ ಬಿಡಿ !. ಏನಿರತ್ತದೆಯೋ ಬಿಡುತ್ತದೆಯೋ ಕೈಯಲ್ಲಿ ಮೊಬೈಲ್ ಅಂತೂ ಇರಲೇಬೇಕು. ಅದು ಕಳೆದು ಹೋದರೆ, ಕೆಟ್ಟು ಹೋದರೆ ಆಗುವ ಚಡಪಡಿಕೆ ಅಷ್ಟಿಷ್ಟಲ್ಲ. ಒಟ್ನಲ್ಲಿ ಮೊಬೈಲ್ ಅನ್ನೋದು ಜೀವನದ ಬೇಸಿಕ್ ಅವಶ್ಯಕತೆ ಎಂಬಂತಾಗಿದೆ. ಅಂಥ ಅಮೂಲ್ಯವಾದ ಮೊಬೈಲ್ನ್ನು ಕಳೆದುಕೊಂಡ ಛತ್ತೀಸ್ಗಢ ಸರ್ಕಾರಿ ಆಸ್ಪತ್ರೆ ಅಧಿಕಾರಿಯೊಬ್ಬ, ಜಲಾಶಯದಲ್ಲಿದ್ದ 21 ಲಕ್ಷ ಲೀಟರ್ ನೀರನ್ನು ಖಾಲಿ ಮಾಡಿಸಿ (Drains 21 Lakh Litres Water), ಈಗ ಅಮಾನತುಗೊಂಡಿದ್ದಾರೆ !
ಛತ್ತೀಸ್ಗಢ್ನ ಕೋಯಾಲಿಬೇಡಾ ಬ್ಲಾಕ್ನ ಆಹಾರ ಅಧಿಕಾರಿ (Food Inspector) ರಾಜೇಶ್ ವಿಶ್ವಾಸ್ ಈಗ ತಮ್ಮ ಮೂರ್ಖತನದ ನಿರ್ಧಾರದಿಂದಾಗಿ ಅಮಾನತುಗೊಂಡಿದ್ದಾರೆ. ಇವರು ಭಾನುವಾರ ರಜಾದಿನ ಕಳೆಯಲು ಖೇರ್ಕಟ್ಟಾ ಪರಕೋಟ್ ಎಂಬ ಜಲಾಶಯದ ಬಳಿ, ಸ್ನೇಹಿತರೊಟ್ಟಿಗೆ ಹೋಗಿದ್ದರು. ಆಗ ಅವರ ಕೈಯಲ್ಲಿದ್ದ 96 ಸಾವಿರ ರೂಪಾಯಿ ಮೌಲ್ಯದ ಸ್ಯಾಮ್ಸಂಗ್ ಎಸ್23 ಮೊಬೈಲು ಜಲಾಶಯದ ನೀರಲ್ಲಿ, 15 ಅಡಿ ಆಳಕ್ಕೆ ಬಿದ್ದು ಹೋಯಿತು.
ಮೊಬೈಲ್ ಬೀಳುತ್ತಿದ್ದಂತೆ ರಾಜೇಶ್ ವಿಶ್ವಾಸ್ ಗಾಬರಿಗೊಂಡರು. ಸ್ಥಳೀಯರು ಕೆಲವರು ಈಜು ಬರುವವರು ಜಲಾಶಯಕ್ಕೆ ಧುಮುಕಿ ಹುಡುಕಿದ್ದಾರೆ. ಆದರೆ ಎಷ್ಟೇ ಹುಡುಕಿದರೂ ಮೊಬೈಲ್ ಸಿಗಲಿಲ್ಲ. 96 ಸಾವಿರ ಮೊಬೈಲ್ ಅದು. ಹೀಗಾಗಿ ಅದನ್ನು ನೀರಿನಲ್ಲಿ ಬಿಟ್ಟು ಹೋಗಲೂ ರಾಜೇಶ್ಗೆ ಇಷ್ಟವಿರಲಿಲ್ಲ. ಕೂಡಲೇ ನೀರಾವರಿ ಇಲಾಖೆ ಕಚೇರಿಗೆ ಭೇಟಿ ಕೊಟ್ಟು, ಮೊಬೈಲ್ ಹೇಗೆ ಪಡೆಯಬಹುದು ಎಂಬ ಬಗ್ಗೆ ಚರ್ಚೆ ನಡೆಸಿದರು. ಜಲಾಶಯದ ನೀರು ಖಾಲಿ ಮಾಡಿಸಿಕೊಡುವಂತೆ ಮನವಿಯನ್ನೂ ಮಾಡಿದರು. ಆದರೆ ನೀರಾವರಿ ಇಲಾಖೆಯವರು ಈ ಸಮಸ್ಯೆ ಬಗ್ಗೆ ಏನೂ ಸ್ಪಂದಿಸಲಿಲ್ಲ. ಅದಾದ ಬಳಿಕ ರಾಜೇಶ್ ವಿಶ್ವಾಸ್ ಅವರೇ ಖುದ್ದಾಗಿ 30 ಎಚ್ಪಿ ಡೀಸೆಲ್ ಪಂಪ್ಗಳನ್ನು ಜಲಾಶಯಕ್ಕೆ ತರಿಸಿ, ಅದರಲ್ಲಿದ್ದ ಅಷ್ಟೂ ನೀರನ್ನೂ ಖಾಲಿ ಮಾಡಿಸಿದ್ದಾರೆ.
ಇದನ್ನೂ ಓದಿ: Honnavara News: ಸಣ್ಣ ನೀರಾವರಿ ಇಲಾಖೆಯ ಭ್ರಷ್ಟಾಚಾರದಿಂದ ರೈತರಿಗೆ ಸಂಕಟ: ಅನಂತ ನಾಯ್ಕ ಆರೋಪ
ಸೋಮವಾರದಿಂದ ಶುರುವಾದ ನೀರು ಖಾಲಿ ಮಾಡುವ ಕಾರ್ಯ ಗುರುವಾರದವರೆಗೆ ಅಂದರೆ ಮೂರು ದಿನಗಳ ಕಾಲ ನಡೆಯಿತು. ನೀರು ಸಂಪೂರ್ಣವಾಗಿ ಖಾಲಿಯಾಗುವ ಹಂತದಲ್ಲಿ ಇದ್ದಾಗ ಅಲ್ಲಿಗೆ ಧಾವಿಸಿದ ನೀರಾವರಿ ಇಲಾಖೆ ಅಧಿಕಾರಿಯೊಬ್ಬರು ಸ್ವಲ್ಪ ಕಠಿಣವಾಗಿ ಬೈದು ಪಂಪ್ಸೆಟ್ಗಳನ್ನೆಲ್ಲ ಆಫ್ ಮಾಡಿಸಿದ್ದಾರೆ. ಅಷ್ಟರಲ್ಲಿ 21 ಲಕ್ಷ ಅಂದರೆ 41,104 ಕ್ಯೂಬಿಕ್ ಮೀಟರ್ಗಳಷ್ಟು ನೀರು ಒಣ ಹೊಲಗಳಿಗೆ ಹರಿದುಹೋಗಿತ್ತು. ನೀರು ದುರ್ಬಳಕೆಯಾಗಿತ್ತು. ಇನ್ನು ಮೊಬೈಲ್ ಕೂಡ ಸಿಕ್ಕಿದೆ. ಆದರೆ ಪ್ರಯೋಜನವೇನು? ಮೂರು ದಿನ ನೀರಿನಲ್ಲಿಯೇ ಇದ್ದ 96ಸಾವಿರ ರೂ.ಮೌಲ್ಯದ ಮೊಬೈಲ್ ಸಂಪೂರ್ಣ ಹಾಳಾಗಿದೆ. ಆದರೆ ಈ ಜಲಾಶಯದಿಂದ ಸುತ್ತಮುತ್ತ 1500 ಎಕರೆ ಕೃಷಿ ಭೂಮಿಗೆ ನೀರು ಸರಬರಾಜು ಆಗುತ್ತದೆ. ಆದರೆ ಒಂದು ಮೊಬೈಲ್ಗಾಗಿ ಅಷ್ಟೂ ನೀರನ್ನು ವ್ಯರ್ಥ ಮಾಡಿದ್ದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಯಾವುದೇ ಮೊಬೈಲ್ ಆದರೂ ನೀರಿನಲ್ಲಿ ಮುಳುಗಿ ಬಹುಕಾಲ ಇದ್ದರೆ ಅದು ಹಾಳಾಗುತ್ತದೆ ಎಂಬ ಕಾಮನ್ ಸೆನ್ಸ್ ಕೂಡ ಆ ಅಧಿಕಾರಿಗೆ ಇಲ್ಲವಲ್ಲ. ಅದಕ್ಕಾಗಿ ಇಷ್ಟು ನೀರನ್ನು ಖಾಲಿ ಮಾಡಿಸಬೇಕಿತ್ತಾ? ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮರ್ಥನೆ ಮಾಡಿಕೊಂಡ ಅಧಿಕಾರಿ?!
ಇಷ್ಟೆಲ್ಲ ಆದ ಮೇಲೆ ರಾಜೇಶ್ ವಿಶ್ವಾಸ್ ಅವರು ತಮ್ಮ ಕೆಲಸವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಜಲಾಶಯದಲ್ಲಿ ಇದ್ದ ಆ ನೀರು ಕೃಷಿ ಭೂಮಿ ನೀರಾವರಿಗಾಗಿ ಇದ್ದಿದ್ದಲ್ಲ. ಅದು ತ್ಯಾಜ್ಯದ ನೀರಾಗಿತ್ತು. ಇನ್ನು ಮೊಬೈಲ್ನಲ್ಲಿ ಮಹತ್ವದ ದಾಖಲೆಗಳು, ಅನೇಕರ ಸಂಪರ್ಕ ನಂಬರ್ಗಳು ಇದ್ದವು. 3-4 ಅಡಿ ನೀರನ್ನು ಖಾಲಿ ಮಾಡಲು ಕಂಕೇರ್ ನೀರಾವರಿ ಡಿಪಾರ್ಟ್ಮೆಂಟ್ನ ಮುಖ್ಯಾಧಿಕಾರಿ ಅನುಮತಿ ಕೊಟ್ಟಿದ್ದರು. ಡೀಸೆಲ್ ಪಂಪ್ನಿಂದ ನೀರು ಖಾಲಿ ಮಾಡಿದ್ದೇವೆ. ಇದಕ್ಕೆ 7000 ರೂ.-8000 ರೂ.ವರೆಗೆ ಖರ್ಚು ಆಗಿದೆ. ಯಾವುದೇ ರೈತರಿಗೂ ತೊಂದರೆಯಾಗಿಲ್ಲ ಎಂದಿದ್ದಾರೆ. ಆದರೆ ಈ ವಿಷಯ ಮಾಧ್ಯಮಗಳಲ್ಲಿ ದೊಡ್ಡದಾಗುತ್ತಿದ್ದಂತೆ ರಾಜೇಶ್ ವಿಶ್ವಾಸ್ ಅಮಾನತುಗೊಂಡಿದ್ದಾರೆ.