Site icon Vistara News

Congress Party: ಗುಲಾಮ್ ನಬಿ ಆಜಾದ್‌ಗೆ ‘ಕೈ’ಕೊಟ್ಟರು! ಮರಳಿ ಕಾಂಗ್ರೆಸ್ ಕೈ ಹಿಡಿದ ಜಮ್ಮು-ಕಾಶ್ಮೀರ ನಾಯಕರು

J and k Congress Leader

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu and Kashmir) 20ಕ್ಕೂ ಹೆಚ್ಚು ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ (Congress Party) ಸೇರ್ಪಡೆಯಾದರು. ಈ ಪೈಕಿ ಹೆಚ್ಚಿನವರು ಕಾಂಗ್ರೆಸ್‌ನ ಮಾಜಿ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಅವರ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಆಜಾದ್ ಪಾರ್ಟಿಯ (Democratic Progressive Azad Party) ನಾಯಕರಾಗಿದ್ದಾರೆ. ಗುಲಾಮ್ ನಬಿ ಆಜಾದ್ ಅವರು ಆರ್ಟಿಕಲ್ 370 (Article 370) ಕುರಿತು ನೀಡಿದ ಹೇಳಿಕೆಯಿಂದಾಗಿ ಅಸಮಾಧನಗೊಂಡ ನಾಯಕರು ಮತ್ತೆ ಮರಳಿ ಕಾಂಗ್ರೆಸ್‌ಗೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಆರ್ಟಿಕಲ್ 370 ರದ್ಧತಿಯನ್ನು ವಿರೋಧಿಸುವವರು ಈ ನೆಲದ ಬಗ್ಗೆ ಸರಿಯಾಗಿ ತಿಳಿದುಕೊಂಡಿಲ್ಲ ಎಂದು ಗುಲಾಮ್ ನಬಿ ಆಜಾದ್ ಹೇಳಿದ್ದಾರೆ. 2019 ಆಗಸ್ಟ್ 5ರಂದು 370 ರದ್ಧತಿ ವಿರುದ್ಧವಾಗಿ ಮಾತನಾಡಿದ ಅದೇ ವ್ಯಕ್ತಿ ಇವರೇನಾ? ಸಂಸತ್ತಿನಿಂದ ಹೊರ ಬಿದ್ದು ಸುಮಾರು ದಿನಗಳಾದರೂ ದಿಲ್ಲಿಯ ವಿಶಾಲ ಬಂಗಲೆಯನ್ನು ಅವರಿಗೆ ನೀಡಲಾಗಿದೆ. ಹಾಗಾಗಿ, ಅವರು 370 ರದ್ಧತಿಯನ್ನು ಸಮರ್ಥಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಟೀಕಿಸಿದ್ದಾರೆ.

ಸೋಮವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಡಿಎಪಿ(ಡಿಸ್‌ಅಪಿಯೀರಿಂಗ್ ಆಜಾದ್ ಪಾರ್ಟಿ!) ಪಕ್ಷದ 21 ನಾಯಕರು ಕಾಂಗ್ರೆಸ್ ಪಕ್ಷವನ್ನು ಮರುಸೇರ್ಪಡೆಯಾಗಿದ್ದಾರೆ. ಈ ಪೈಕಿ ಅವರು ಗುಲಾಮ್ ನಬಿ ಆಜಾದ್ ಆದೇಶದ ಮೇರೆಗೆ ನನ್ನ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ ನಾಯಕರೂ ಇದ್ದಾರೆ ಎಂದು ಜೈರಾಮ್ ರಮೇಶ್ ಅವರು ಹೇಳಿದ್ದಾರೆ.

21 ನಾಯಕರ ಮರು ಸೇರ್ಪಡೆ ಕಾರ್ಯಕ್ರಮದ ವೇಳೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆ ಸಿ ವೇಣುಗೋಪಾಲ್, ಎಐಸಿಸಿ ರಾಜ್ಯ ಉಸ್ತುವಾರಿ ರಜನಿ ಪಾಟೀಲ್ ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿಕಾರ್ ರಸೂಲ್ ವಾನಿ ಸೇರಿದಂತೆ ಅನೇಕರು ಹಾಜರಿದ್ದರು.

ಕಾಂಗ್ರೆಸ್ ಪಕ್ಷವನ್ನು ಸೇರಿದವರು ಪೈಕಿ, ಮಾಜಿ ಸಚಿವ-ಎರಡು ಬಾರಿ ಪ್ಯಾಂಥರ್ ಪಾರ್ಟಿಯಿಂದ ಶಾಸಕರಾಗಿದ್ದ ಮತ್ತು ಜಮ್ಮು-ಕಾಶ್ಮೀರದಲ್ಲಿ ಆಮ್ ಆದ್ಮಿ ಪಾರ್ಟಿಯ ಒಬಿಸಿ, ಎಸ್‌ಸಿ/ಎಸ್‌ಟಿ ವಿಭಾಗದ ಮುಖ್ಯಸ್ಥ ಯಶಪಾಲ್ ಕುಂದಲ್ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಜೆಕೆಪಿಸಿಸಿ ಉಪಾಧ್ಯಕ್ಷರಾಗಿದ್ದು ಆಜಾದ್ ಪಾರ್ಟಿ ಸೇರಿದ್ದ ಹಾಜಿ ಅಬ್ದುಲ್ ರಶೀದ್ ದಾರ್ ಅವರು ಮತ್ತೆ ಕಾಂಗ್ರೆಸ್ ಮನೆಗೆ ಮರಳಿದ್ದಾರೆ.

ಈ ಸುದ್ದಿಯನ್ನೂ ಓದಿ: Azad Party | ಡೆಮಾಕ್ರಟಿಕ್ ಆಜಾದ್ ಪಾರ್ಟಿ- ಇದು ಗುಲಾಮ್ ನಬಿ ಆಜಾದರ ಹೊಸ ಪಕ್ಷ

ಯಾವೆಲ್ಲ ನಾಯಕರು ಕಾಂಗ್ರೆಸ್ ಸೇರಿದರು?

ನರೇಶ್ ಕೆ ಗುಪ್ತಾ (ಡಿಪಿಎಪಿ), ಶಾಮ್ ಲಾಲ್ ಭಗತ್ (ಡಿಪಿಎಪಿ), ನಮ್ರತಾ ಶರ್ಮಾ (ಅಪ್ನಿ ಪಾರ್ಟಿ), ಸೈಮಾ ಜಾನ್ (ಡಿಪಿಎಪಿ), ಶಹಜೆಹಾನ್ ದಾರ್ (ಡಿಪಿಎಪಿ), ಫಾರೂಕ್ ಅಹ್ಮದ್ (ಎಎಪಿ), ತರಂಜಿತ್ ಸಿಂಗ್ ಟೋನಿ, ಗಜಾನ್‌ಫರ್ ಅಲಿ, ಸಂತೋಷ್ ಮಜೋತ್ರಾ (ಡಿಪಿಎಪಿ ), ರಜನಿ ಶರ್ಮಾ (ಡಿಪಿಎಪಿ), ನಿರ್ಮಲ್ ಸಿಂಗ್ ಮೆಹ್ತಾ (ಡಿಪಿಎಪಿ), ಮದನ್ ಲಾಲ್ ಚಲೋತ್ರಾ (ಅಪ್ನಿ ಪಾರ್ಟಿ), ಹಮಿತ್ ಸಿಂಗ್ ಬತ್ತಿ (ಆಪ್), ರಮೇಶ್ ಪಂಡೋತ್ರ (ಆಪ್), ವೈದ್ ರಾಜ್ ಶರ್ಮಾ (ಆಪ್), ಮನ್ದೀಪ್ ಚೌಧರಿ (ಆಪ್), ನಜೀರ್ ಅಹ್ಮದ್ ಔಕಾಬ್, ಮಹೇಶ್ವರ ವಿಶ್ವಕರ್ಮ ಮತ್ತು ಜಂಗ್ ಬಹದ್ದೂರ್ ಶರ್ಮಾ (ಡಿಪಿಎಪಿ) ಅವರು ಕಾಂಗ್ರೆಸ್ ಸೇರಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version