Site icon Vistara News

Bharat Jodo Yatra | ಭಾರತ್‌ ಜೋಡೋ ಯಾತ್ರೆಯ ಸಮಾರೋಪಕ್ಕೆ 21 ಪಕ್ಷಗಳಿಗೆ ಆಹ್ವಾನ, ಜೆಡಿಎಸ್‌ಗಿಲ್ಲ ಆಮಂತ್ರಣ

Bharat Jodo Yatra Conclusion

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆಗೆ (Bharat Jodo Yatra) ದೇಶಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ. ಕಿರಿಯರಿಂದ ಹಿಡಿದು ಹಿರಿಯರವರೆಗೆ, ಹೆಣ್ಣುಮಕ್ಕಳಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ರಾಹುಲ್‌ ಗಾಂಧಿ ಯಾತ್ರೆಗೆ ಬೆಂಬಲ ಸೂಚಿಸಿದ್ದಾರೆ. ಕನ್ಯಾಕುಮಾರಿಯಿಂದ ಆರಂಭವಾದ ಭಾರತ್‌ ಜೋಡೋ ಯಾತ್ರೆ ಈಗ ಅಂತಿಮ ಹಂತಕ್ಕೆ ಬಂದಿದ್ದು, ಶ್ರೀನಗರದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ಕಾಂಗ್ರೆಸ್‌ 21 ಪಕ್ಷಗಳಿಗೆ ಆಹ್ವಾನ ನೀಡಿದೆ.

“ಜನವರಿ 30ರಂದು ಸಾಮರಸ್ಯ, ಒಗ್ಗಟ್ಟು ಸಾರುವ ದಿಸೆಯಲ್ಲಿ, ಸಾವಿರಾರು ಕಿ.ಮೀವರೆಗೆ ಸಾಗಿದ ಭಾರತ್‌ ಜೋಡೋ ಯಾತ್ರೆಯ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ಎಲ್ಲ ಸಮಾನ ಮನಸ್ಕ ಪಕ್ಷಗಳು ಸಮಾರಂಭಕ್ಕೆ ಆಗಮಿಸಬೇಕು” ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 21 ಪಕ್ಷಗಳಿಗೆ ಆಮಂತ್ರಣ ನೀಡಿದ್ದಾರೆ. ಆ ಮೂಲಕ ಭಾರತ್‌ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರತಿಪಕ್ಷಗಳ ಬಲ ಪ್ರದರ್ಶಿಸಲು ಕಾಂಗ್ರೆಸ್‌ ತೀರ್ಮಾನಿಸಿದೆ.

ಯಾವ ಪಕ್ಷಗಳಿಗೆ ಆಮಂತ್ರಣ?
ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ನಿತೀಶ್‌ ಕುಮಾರ್‌ ಅವರ ಜೆಡಿಯು, ಟಿಡಿಪಿ, ಶಿವಸೇನೆ (ಉದ್ಧವ್‌ ಠಾಕ್ರೆ ಬಣ), ನ್ಯಾಷನಲ್‌ ಕಾನ್ಫರೆನ್ಸ್‌, ಎಸ್‌ಪಿ, ಬಿಎಸ್‌ಪಿ, ಡಿಎಂಕೆ, ಸಿಪಿಐ, ಸಿಪಿಎಂ, ಜೆಎಂಎಂ, ಆರ್‌ಜೆಡಿ, ಆರ್‌ಎಲ್‌ಎಸ್‌ಪಿ, ಎಚ್‌ಎಎಂ, ಪಿಡಿಪಿ, ಎನ್‌ಸಿಪಿ, ಎಂಡಿಎಂಕೆ, ವಿಸಿಕೆ, ಐಯುಎಂಎಲ್‌, ಕೆಎಸ್‌ಎಂ ಹಾಗೂ ಆರ್‌ಸಿಪಿಗಳಿಗೆ ಕಾಂಗ್ರೆಸ್‌ ಆಹ್ವಾನ ನೀಡಿದೆ.

ಜೆಡಿಎಸ್‌ ಸೇರಿ ಇಷ್ಟು ಪಕ್ಷಗಳಿಗಿಲ್ಲ ಆಹ್ವಾನ
ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಪ್ರಬಲ ಎದುರಾಳಿಯಾಗಿರುವ ಜೆಡಿಎಸ್‌, ಆಪ್‌, ಬಿಜೆಡಿ, ಬಿಆರ್‌ಎಸ್‌, ವೈಎಸ್‌ಆರ್‌ಸಿಪಿ ಹಾಗೂ ಶಿರೋಮಣಿ ಅಕಾಲಿದಳ (SAD) ಪಕ್ಷಗಳಿಗೆ ಆಹ್ವಾನ ನೀಡಿಲ್ಲ.

ಇದನ್ನೂ ಓದಿ | Tapasvi vs Pujari | ಇದು ತಪಸ್ವಿಗಳ ದೇಶ, ಅರ್ಚಕರ ದೇಶವಲ್ಲ ಎಂದ ರಾಹುಲ್‌ ಗಾಂಧಿ, ಬಿಜೆಪಿ, ಅರ್ಚಕರಿಂದ ಭಾರಿ ಆಕ್ರೋಶ

Exit mobile version