ನವದೆಹಲಿ: 2019ರಿಂದ ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು 21 ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಇದಕ್ಕಾಗಿ 22.76 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಗುರುವಾರ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇದೇ ಅವಧಿಯಲ್ಲಿ ರಾಷ್ಟ್ರಪತಿಗಳು 8 ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದು, ಒಟ್ಟು 6.24 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ(PM Foreign Visit).
ಈ ಸಂಬಂಧ ಕೇಳಲಾದ ಪ್ರಶ್ನೆಗೆ, ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ವಿ ಮರುಳೀಧರನ್ ಅವರು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ. ರಾಷ್ಟ್ರಪತಿಗಳ ಪ್ರವಾಸಕ್ಕಾಗಿ 6,24,31,424 ರೂ. ಮತ್ತು ಪ್ರಧಾನಿ ಪ್ರವಾಸಕ್ಕಾಗಿ 22,76,76,934 ರೂ. ವೆಚ್ಚ ಮಾಡಲಾಗಿದೆ. ಇದೇ ವೇಳೆ, ವಿದೇಶಾಂಗ ಸಚಿವರ ವಿದೇಶ ಪ್ರವಾಸಕ್ಕಾಗಿ 20,87,01,475 ರೂಪಾಯಿ ವ್ಯಯಿಸಲಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Sheikh Hasina India Visit | ನಾವು ಭಾರತಕ್ಕೆ ಸದಾ ಋಣಿಯಾಗಿರುತ್ತೇವೆ ಎಂದ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ
2019ರಿಂದ ಈಚೆಗೆ ರಾಷ್ಟ್ರಪತಿಗಳು ಎಂಟು ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಇದೇ ವೇಳೆ, ಪ್ರಧಾನಿ 21 ಮತ್ತು ವಿದೇಶಾಂಗ ಸಚಿವರು 86 ವಿದೇಶ ಪ್ರವಾಸ ಮಾಡಿದ್ದಾರೆ. ಪ್ರಧಾನಿಗಳು ಜಪಾನ್‍ಗೆ ಮೂರು ಬಾರಿ, ಅಮೆರಿಕ ಮತ್ತು ಯುಇಎಗೆ ತಲಾ ಎರಡು ಬಾರಿ ಭೇಟಿ ನೀಡಿದ್ದಾರೆಂದು ಉತ್ತರದಲ್ಲಿ ತಿಳಿಸಲಾಗಿದೆ.