ಜೈಪುರ: ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ಮೇ 26ರಂದು ಸಾಮೂಹಿಕ ವಿವಾಹ (Mass Wedding) ಕಾರ್ಯಕ್ರಮ ನಡೆಸಲಾಗಿದೆ. ಅದರಲ್ಲಿ ಬರೋಬ್ಬರಿ 2,143 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ವಿಶ್ವ ದಾಖಲೆಯೇ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿವ ಪ್ರಮೋದ್ ಜೈನ್ ಭಾಯಾ ಅವರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನಡೆಸಲಾಯಿತು. ಹಸೆ ಮಣೆ ಏರಿದ ದಂಪತಿಗಳಿಗೆ ಗಣ್ಯರು ಆಶೀರ್ವದಿಸಿದರು.
ಅಂದ ಹಾಗೆ ಈ ಸಾಮೂಹಿಕ ಮದುವೆ ಸಮಾರಂಭವು ಎರಡು ದಾಖಲೆಗಳನ್ನು ನಿರ್ಮಿಸಿದೆ. 12 ಗಂಟೆಗಳಲ್ಲಿ ನಡೆದ ಅತೀ ಹೆಚ್ಚು ಮದುವೆ ಹಾಗೂ 24 ಗಂಟೆಗಳಲ್ಲಿ ನಡೆದ ಅತಿ ಹೆಚ್ಚು ಮದುವೆ ಎನ್ನುವ ದಾಖಲೆ ಈ ಸಾಮೂಹಿಕ ಮದುವೆ ಸಮಾರಂಭಕ್ಕೆ ದೊರಕಿದೆ. ಈ ಹಿಂದೆ 2013ರಲ್ಲಿ 963 ಜೋಡಿ ಮದುವೆಯಾಗಿದ್ದು, ಅದು ದಾಖಲೆಯನ್ನು ಹೊಂದಿತ್ತು. ಅದರ ದಾಖಲೆಯನ್ನು ಈಗಿನ ಸಮಾರಂಭ ಮುರಿದಿದೆ.
ಇದನ್ನೂ ಓದಿ: Viral Photo: ಬಸ್ ಮೆಟ್ಟಿಲಿಗೆ ನಮಸ್ಕರಿಸಿದ ಅಜ್ಜಿ ಫೋಟೋ ವೈರಲ್
ಶ್ರೀ ಮಹಾವೀರ ಗೋಶಾಲಾ ಕಲ್ಯಾಣ ಸಂಸ್ಥಾನವು ಈ ಸಾಮೂಹಿಕ ವಿವಾಹವನ್ನು ಏರ್ಪಡಿಸಿತ್ತು. ಅದರಲ್ಲಿ ಹಿಂದೂಗಳ ಜತೆ ಮುಸ್ಲಿಂ ಜೋಡಿಗಳೂ ಮದುವೆ ಮಾಡಿಕೊಂಡಿರುವುದು ವಿಶೇಷ. ಪ್ರತಿ ದಂಪತಿಗೆ ಆಯಾ ಸಮುದಾಯದ ಪುರೋಹಿತರು, ಕ್ವಾಜಿಗಳ ಕೈಯಿಂದಲೇ ಮದುವೆ ಮಾಡಿಸಲಾಯಿತು. ಮದುವೆ ಮುಗಿದ ನಂತರ ರಾಜಸ್ಥಾನ ಸರ್ಕಾರದ ಅಧಿಕಾರಿಗಳು ದಂಪತಿಗಳಿಗೆ ಮದುವೆ ಪ್ರಮಾಣಪತ್ರಗಳನ್ನು ನೀಡಿದರು.
ಮದುವೆ ನಂತರ ಪ್ರತಿ ದಂಪತಿಗೆ ಆಭರಣ, ಹಾಸಿಗೆ, ಅಗತ್ಯ ಅಡುಗೆ ಪಾತ್ರೆಗಳು, ದೂರದರ್ಶನ, ರೆಫ್ರಿಜರೇಟರ್ಮ ಕೂಲರ್‌ನಂತಹ ಗೃಹೋಪಯೋಗಿ ಉಪಕರಣಗಳನ್ನು ಉಡುಗೊರೆಯಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಒಟ್ಟು ಹತ್ತು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು, ನೂತನ ವಧು ವರರಿಗೆ ಆಶೀರ್ವದಿಸಿದ್ದಾರೆ.