ನವ ದೆಹಲಿ: ಮಹಾದೇವ್ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣದ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಯುತ್ತಿರುವ ಬೆನ್ನಲ್ಲೇ, ಐಟಿ ಸಚಿವಾಲಯ ಭಾನುವಾರ ಮಹಾದೇವ್ ಬುಕ್ ಆನ್ಲೈನ್ ಸೇರಿದಂತೆ ಒಟ್ಟು 21 ಬೆಟ್ಟಿಂಗ್ ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳ ವಿರುದ್ಧ ನಿರ್ಬಂಧ ಆದೇಶವನ್ನು ಹೊರಡಿಸಿದೆ. ಜಾರಿ ನಿರ್ದೇಶನಾಲಯದ ಶಿಫಾರಸಿನ ನಂತರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ.
ಐಟಿ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ವೆಬ್ಸೈಟ್ / ಅಪ್ಲಿಕೇಶನ್ ಅನ್ನು ಮುಚ್ಚಲು ಶಿಫಾರಸು ಮಾಡಲು ಛತ್ತೀಸ್ಗಡ ಸರ್ಕಾರಕ್ಕೆ ಎಲ್ಲಾ ಅಧಿಕಾರವಿದೆ ಎಂದು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದಾಗ್ಯೂ, ಅವರು ಹಾಗೆ ಮಾಡಲಿಲ್ಲ. ಕಳೆದ 1.5 ವರ್ಷಗಳಿಂದ ರಾಜ್ಯ ಸರ್ಕಾರವು ಅಂತಹ ಯಾವುದೇ ವಿನಂತಿಯನ್ನು ಮಾಡಿಲ್ಲ. ಜಾರಿ ನಿರ್ದೇಶನಾಲಯದಿಂದ ಮೊದಲ ಮತ್ತು ಏಕೈಕ ವಿನಂತಿಯನ್ನು ಸ್ವೀಕರಿಸಲಾಗಿದೆ ಮತ್ತು ಅದನ್ನು ಕಾರ್ಯಗತಗೊಳಿಸಲಾಗಿದೆ. ಛತ್ತೀಸ್ಗಡ ಸರ್ಕಾರವು ಇದೇ ರೀತಿಯ ವಿನಂತಿಗಳನ್ನು ಮಾಡುವುದನ್ನು ಯಾವುದೂ ತಡೆಯಲಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Narendra Modi: ‘ಮಹಾದೇವ’ ಹೆಸರನ್ನೂ ಕಾಂಗ್ರೆಸ್ ಬಿಡಲಿಲ್ಲ; ಭ್ರಷ್ಟಾಚಾರ ಉಲ್ಲೇಖಿಸಿ ಮೋದಿ ಗುಡುಗು
ವಿಶೇಷವೆಂದರೆ, ಮಹಾದೇವ್ ಬುಕ್ನ ಮಾಲೀಕರನ್ನು ಈ ವರ್ಷದ ಆಗಸ್ಟ್ನಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಸೆಕ್ಷನ್ 19 ರ ಅಡಿಯಲ್ಲಿ ಬಂಧಿಸಲಾಗಿತ್ತು.
ಏನಿದು ಮಹಾದೇವ್ ಬೆಟ್ಟಿಂಗ್ ಪ್ರಕರಣ?
ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆಗೆ (Chhattisgarh Polls) ಕೆಲವೇ ದಿನಗಳು ಬಾಕಿ ಇರುವ ಮಧ್ಯೆಯೇ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಭಾಗಿಯಾಗಿದ್ದಾರೆ ಎನ್ನಲಾದ ಬೆಟ್ಟಿಂಗ್ ಹಗರಣವೊಂದು ಹೊರಕ್ಕೆ ಬಂದಿದೆ. ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಮೋಟರ್‌ಗಳಿಂದ (Mahadev Betting App Promoters) ಇದುವರೆಗೆ ಭೂಪೇಶ್ ಬಘೇಲ್ (Bhupel Bhaghel) ಅವರಿಗೆ ಸುಮಾರು 508 ಕೋಟಿ ರೂ. ಲಂಚ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ಹೇಳಿದ್ದಾರೆ. ಚುನಾವಣೆ ಹೊತ್ತಿನಲ್ಲೇ ಇ.ಡಿ ಪ್ರಸ್ತಾಪಿಸಿದ ವಿಷಯವೀಗ ಚರ್ಚೆಗೆ ಗ್ರಾಸವಾಗಿದೆ.
ಅಕ್ರಮವಾಗಿ ಹಣದ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳು ಈಗಾಗಲೇ ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರವರ್ತಕರನ್ನು ವಿಚಾರಣೆ ನಡೆಸುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿ 5.39 ಕೋಟಿ ರೂಪಾಯಿಯನ್ನು ವಶಪಡಿಸಿಕೊಂಡಿದೆ. ಅಷ್ಟೇ ಅಲ್ಲ, 15 ಕೋಟಿ ರೂ. ಇರುವ ಬ್ಯಾಂಕ್ ಖಾತೆಯನ್ನೂ ಜಪ್ತಿ ಮಾಡಿದೆ. ಆಸಿಂ ದಾಸ್ ಎಂಬಾತನನ್ನು ಕೂಡ ಇ.ಡಿ ಬಂಧಿಸಿದೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರೇ ಲಂಚ ಸ್ವೀಕರಿಸಿದ್ದಾರೆ ಎಂದು ಇ.ಡಿ ತಿಳಿಸಿದೆ.
“ಆಸಿಂ ದಾಸ್‌ನನ್ನು ವಿಚಾರಣೆ ನಡೆಸಲಾಗಿದೆ. ಆತನ ಮೊಬೈಲ್‌ಅನ್ನೂ ಪರಿಶೀಲನೆ ನಡೆಸಲಾಗಿದೆ. ಮಹಾದೇವ್ ಆ್ಯಪ್ ಪ್ರಮೋಟರ್‌ಗಳಿಂದ ಇದುವರೆಗೆ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ ಸುಮಾರು 508 ಕೋಟಿ ರೂ. ಸಂದಾಯವಾಗಿದೆ ಎಂಬ ವಿಷಯವನ್ನು ಆಸಿಂ ದಾಸ್ ತಿಳಿಸಿದ್ದಾನೆ. ಪ್ರಕರಣದ ಕುರಿತು ಇನ್ನಷ್ಟು ತನಿಖೆ ನಡೆಸಲಾಗುತ್ತಿದೆ” ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ. ಛತ್ತೀಸ್‌ಗಢದಲ್ಲಿ ನವೆಂಬರ್ 7 ಹಾಗೂ ನವೆಂಬರ್ 17ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.