ಮುಂಬಯಿ: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ 22 ಶಾಸಕರು ಬಿಜೆಪಿಗೆ ಶೀಘ್ರ ಸೇರ್ಪಡೆಯಾಗಲಿದ್ದಾರೆ. ಹಾಗೂ ಶಿಂಧೆಯ ಬದಲಿಗೆ ಬಿಜೆಪಿ ನಾಯಕ ನೂತನ ಸಿಎಂ ಆಗಲಿದ್ದಾರೆ ( Maha politics) ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾದ ಮುಖವಾಣಿ ಸಾಮ್ನಾ ಆರೋಪಿಸಿದೆ.
ಶಿವಸೇನಾದ ಭಾನುವಾರದ ಸಂಚಿಕೆಯಲ್ಲಿ, ಶಿಂಧೆ-ಬಿಜೆಪಿ ಸರ್ಕಾರ ತಾತ್ಕಾಲಿಕ ವ್ಯವಸ್ಥೆ. ಯಾವುದೇ ಸಂದರ್ಭದಲ್ಲಿ ಸಿಎಂ ಕುರ್ಚಿಯಿಂದ ಕೆಳಗೆ ಇಳಿಯುವಂತೆ ಏಕನಾಥ್ ಶಿಂಧೆಗೆ ಸೂಚಿಸುವ ಸಾಧ್ಯತೆ ಇದೆ. ಹಾಗೂ ಬಿಜೆಪಿಯ ಹೊಸ ಸಿಎಂ ಆಯ್ಕೆಯಾಗಲಿದ್ದಾರೆ ಎಂದು ಸಾಮ್ನಾದ ಲೇಖನ ತಿಳಿಸಿದೆ. ಏಕನಾಥ್ ಶಿಂಧೆ ಅವರು ಕೇಂದ್ರ ಸಚಿವ ಮತ್ತು ಆರ್‌ಪಿಐ ನಾಯಕ ರಾಮ್‌ದಾಸ್ ಅಟಾವಳೆ ಮಾದರಿಯಲ್ಲಿ ಕೇಂದ್ರ ಸಚಿವರಾಗಲಿದ್ದಾರೆ. ಮತ್ತೊಬ್ಬ ನಾರಾಯಣ ರಾಣೆ ರೀತಿ ಶಿಂಧೆ ಅನಿವಾರ್ಯವಾಗಿ ಉಳಿದುಕೊಳ್ಳಬೇಕಾಗುತ್ತದೆ ಎಂದು ಟೀಕಿಸಲಾಗಿದೆ.
ಶಿಂಧೆಯವರಿಗೆ ದಿಲ್ಲಿಯಲ್ಲಿ ಯಾವುದೇ ಪ್ರಭಾವ ಇಲ್ಲ. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಯಾವುದೇ ಕೆಲಸದ ಹೆಗ್ಗಳಿಕೆಯನ್ನು ಪಡೆಯುತ್ತಿದ್ದಾರೆ. ಸಿಎಂ ಮತ್ತು ಡಿಸಿಎಂ ನಡುವೆ ಭಿನ್ನಾಭಿಪ್ರಾಯ ಹೆಚ್ಚುತ್ತಿದೆ. ಗೃಹ ಸಚಿವರೂ ಆಗಿರುವ ಫಡ್ನವಿಸ್ ಅವರು ಸಿಎಂ ಶಿಂಧೆಯವರ ಸಲಹೆಗಳನ್ನು ಕೇಳುತ್ತಿಲ್ಲ. ಐಪಿಎಸ್ ಅಧಿಕಾರಿಯೊಬ್ಬರ ವರ್ಗಾವಣೆ ವಿಚಾರದಲ್ಲಿ ಇದು ಕಂಡು ಬಂದಿದೆ. ರಾಜ್ಯಪಾಲ ಭಗತ್ ಸಿಮಗ್ ಕೋಶ್ಯಾರಿ ಅವರು ಉದ್ಧವ್ ಠಾಕ್ರೆ ಸರ್ಕಾರ ಇದ್ದಾಗ ಪ್ರಾಮಾಣಿಕರಾಗಿದ್ದರು. ಆದರೆ ಈಗ ಅವರೆಲ್ಲಿದ್ದಾರೆ? ಎಂದು ಸಾಮ್ನಾ ಆರೋಪಿಸಿದೆ.