ನವ ದೆಹಲಿ: ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಒಟ್ಟು ೨೪ ಹೊಸ ವಿಧೇಯಕಗಳು ಮಂಡನೆಯಾಗುವ ನಿರೀಕ್ಷೆ ಇದೆ. ಪ್ರತಿಪಕ್ಷಗಳು ತಮ್ಮ ಕಾಯತಂತ್ರಗಳ ಬಗ್ಗೆ ಚರ್ಚಿಸಲು ಭಾನುವಾರ ಸಭೆ ಸೇರಲಿವೆ.
ಜುಲೈ ೧೮ರಿಂದ ಆರಂಭವಾಗಲಿರುವ ಅದಿವೇಶನ ಆಗಸ್ಟ್ ೧೨ರ ತನಕ ನಡೆಯಲಿದೆ. ಮಂಡನೆಯಾಗಲಿರುವ ಪ್ರಮುಖ ವಿಧೇಯಗಳು ಇಂತಿವೆ- ಮಾಧ್ಯಮ ಮತ್ತು ನಿಯತಕಾಲಿಕೆಗಳ ನೋಂದಣಿ ವಿಧೇಯಕ, ೨೦೨೨ ಮಂಡನೆಯಾಗಲಿದೆ. ಇದು ಪ್ರೆಸ್ ಮತ್ತು ಪುಸ್ತಕಗಳ ನೋಂದಣಿ ಕಾಯಿದೆ-೧೮೬೭ ಅನ್ನು ಬದಲಿಸಲಿದೆ.
ದೇಶಾದ್ಯಂತ ಮುನಿಸಿಪಾಲಿಟಿಗಳ ಹೆಚ್ಚಿನ ಅಭಿವೃದ್ಧಿಯ ಸಲುವಾಗಿ ಕಂಟೋನ್ಮೆಂಟ್ ವಿಧೇಯಕ ಮಂಡನೆಯಾಗಲಿದೆ. ಜನಜೀವನ ಗುಣಮಟ್ಟ ಸುಧಾರಣೆಯ ಅಂಶಗಳನ್ನು ಇದು ಒಳೊಂಡಿದೆ.
ಸಹಕಾರ ಸೊಸೈಟಿಗಳ ಬಲವರ್ಧನೆಗೆ ವಿಧೇಯಕ
ಬಹು ರಾಜ್ಯಗಳ ಸಹಕಾರ ಸೊಸೈಟಿ (ತಿದ್ದುಪಡಿ) ವಿಧೇಯಕ ಮಂಡನೆಯಾಗಲಿದೆ. ಇದು ಹಲವು ರಾಜ್ಯಗಳಲ್ಲಿ ಸಹಕಾರ ಸೊಸೈಟಿಗಳ ಕಾಯವೈಖರಿಗಳಲ್ಲಿ ಸರ್ಕಾರಗಳ ಪಾತ್ರವನ್ನು ಸುಧಾರಿಸುವ ಮತ್ತು ಸರಳಗೊಳಿಸುವ ಉದ್ದೇಶವನ್ನು ಒಳಗೊಂಡಿದೆ. ಹಲವು ರಾಜ್ಯಗಳಲ್ಲಿ ವಿಸ್ತರಿಸಿರುವ ಸಹಕಾರ ಸೊಸೈಟಿಗಳಲ್ಲಿ ಸದಸ್ಯರ ಚಟುವಟಿಕೆಗಳನ್ನು ಹೆಚ್ಚಿಸುವ, ಆ ಮೂಲಕ ಸೊಸೈಟಿಗಳು ಸಾರ್ವಜನಿಕರಿಗೆ ಮತ್ತಷ್ಟು ಹತ್ತಿರವಾಗುವ ಸಾಧ್ಯತೆ ಇದೆ. ಸೊಸೈಟಿಗಳ ಸ್ವಾಯತ್ತತೆಯನ್ನು ಹೆಚ್ಚಿಸುವ ಉದ್ದೇಶವನ್ನು ಇದು ಒಳಗೊಂಡಿದೆ. ಸ್ಥಾಪಿತ ಹಿತಾಸಕ್ತಿಗಳಿಂದ ಸದಸ್ಯರ ಠೇವಣಿಗಳನ್ನು ಸಂರಕ್ಷಿಸಲು ಕೂಡ ನಿಯಮಗಳನ್ನು ಒಳಗೊಳ್ಳಲಿದೆ.
ಐಬಿಸಿ ಕಾಯಿದೆಯ ಸುಧಾರಣೆ
ಬ್ಯಾಂಕ್‌ಗಳ ದಿವಾಳಿ ಪ್ರಕ್ರಿಯೆಗೆ ಸಂಬಂಧಿಸಿದ ಐಬಿಸಿ ಕಾಯಿದೆಯಲ್ಲಿ ಗಡಿಯಾಚೆಗಿನ ದಿವಾಳಿ ಕುರಿತ ತಿದ್ದುಪಡಿ ವಿಧೇಯಕ ಮಂಡನೆಯಾಗಲಿದೆ. ಇದು ವಿದೇಶಗಳಲ್ಲಿ ಕೂಡ ಆಸ್ತಿಗಳನ್ನು ಹೊಂದಿರುವ ಕಂಪನಿಗಳ ದಿವಾಳಿ ಪ್ರಕ್ರಿಯೆಗಳಲ್ಲಿನ ತೊಡಕುಗಳನ್ನು ಬಗೆಹರಿಸುವ ಉದ್ದೇಶವನ್ನು ಹೊಂದಿದೆ.
ಕಾಫಿ ಮಂಡಳಿ ಅಭಿವೃದ್ಧಿಗೆ ಬಿಲ್
ಕಾಫಿ (ಅಭಿವೃದ್ಧಿ ಮತ್ತು ಉತ್ತೇಜನ) ವಿಧೇಯಕ-೨೦೨೨ ಎಂಬ ಹೊಸ ವಿಧೇಯಕ ಮಂಡನೆಯಾಗಲಿದೆ. ಕಾಫಿ ಉದ್ದಿಮೆ, ಕಾಫಿ ಮಂಡಳಿಯ ಅಭಿವೃದ್ಧಿ, ಆಧುನಿಕತೆಯ ಉದ್ದೇಶವನ್ನು ಇದು ಹೊಂದಿದೆ.
ಗೋದಾಮುಗಳ ಅಭಿವೃದ್ಧಿಯ ಮೂಲಕ ರೈತರ ಕೃಷಿ ಉತ್ಪನ್ನಗಳ ವೈಜ್ಞಾನಿಕ ದಾಸ್ತಾನಿಗೆ ಅನುಕೂಲ ಮಾಡಿಕೊಡಲು ತಿದ್ದುಪಡಿ ವಿಧೇಯಕ ಮಂಡನೆಯಾಗಲಿದೆ.