ಮುಂಬಯಿ: ಯುದ್ಧ ಪೀಡಿತ ಸುಡಾನ್ನಿಂದ (Sudan Crisis) ಸೌದಿ ಅರೇಬಿಯಾದ ಜೆಡ್ಡಾವನ್ನು ಐಎಎಫ್ ಸಿ-130 ಜೆ ವಿಮಾನದ ಮೂಲಕ ತಲುಪಿದ್ದ 246 ಭಾರತೀಯರು ಈಗ ಜೆಡ್ಡಾದಿಂದ ಭಾರತಕ್ಕೆ ಬಂದು ಇಳಿದಿದ್ದಾರೆ. ಇವರಲ್ಲಿ ಕರ್ನಾಟಕದ ಹಕ್ಕಿಪಿಕ್ಕಿ ಜನಾಂಗದವರೂ ಸೇರಿದ್ದಾರೆ. ಭಾರತೀಯ ವಾಯುಪಡೆಯ ಸಿ-17 ಗ್ಲೋಬ್ಮಾಸ್ಟರ್ ಏರ್ಕ್ರಾಫ್ಟ್ನಲ್ಲಿ ಬಂದ ಅವರೆಲ್ಲ ಮುಂಬಯಿಯಲ್ಲಿ ಲ್ಯಾಂಡ್ ಆಗಿದ್ದಾರೆ. ಯುದ್ಧ ಪೀಡಿತ ಸುಡಾನ್ ನೆಲದಿಂದ ಭಾರತೀಯರನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರ ಪ್ರಾರಂಭ ಮಾಡಿರುವ ಆಪರೇಶನ್ ಕಾವೇರಿ (Operation Kaveri) ಕಾರ್ಯಾಚರಣೆಯಡಿ ಸುಡಾನ್ನಿಂದ ಭಾರತಕ್ಕೆ ಬಂದ ಎರಡನೇ ಬ್ಯಾಚ್ ಇದು. ತಾಯ್ನೆಲಕ್ಕೆ ಕಾಲಿಟ್ಟ ಅವರೆಲ್ಲ ನಿರಾಳರಾಗಿದ್ದಾರೆ. ಹೀಗೆ ಸುಡಾನ್ನಿಂದ ಪಾರಾಗಿ, ಜೆಡ್ಡಾಕ್ಕೆ ಬಂದು, ಅಲ್ಲಿಂದ ಭಾರತಕ್ಕೆ ಬಂದವರ ಫೋಟೋವನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಶೇರ್ ಮಾಡಿದ್ದಾರೆ.
ಬುಧವಾರ ಒಂದು ವಿಮಾನ ಜೆಡ್ಡಾದಿಂದ ಹೊರಟು ರಾತ್ರಿ ಹೊತ್ತಿಗೆ ದೆಹಲಿಯನ್ನು ತಲುಪಿತ್ತು. ಅದರಲ್ಲಿ 360 ಭಾರತೀಯರು ಆಗಮಿಸಿದ್ದರು. ಅವರೂ ಕೂಡ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಅತ್ಯಂತ ಸಂತೋಷ ವ್ಯಕ್ತಪಡಿಸಿದ್ದರು. ಭಾರತ್ ಮಾತಾ ಕಿ ಜೈ, ಆರ್ಮಿ ಜಿಂದಾಬಾದ್, ಪ್ರಧಾನಿ ಮೋದಿ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದ್ದರು.
ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಕಾದಾಟದಿಂದ ತತ್ತರಿಸಿರುವ ಸುಡಾನ್ನಲ್ಲಿ ಸುಮಾರು 3000 ಭಾರತೀಯರು ಇದ್ದಾರೆ. ಅವರಲ್ಲಿ 1700ಜನರನ್ನು ಈಗಾಗಲೇ ಸುಡಾನ್ನಿಂದ ಜೆಡ್ಡಾಕ್ಕೆ ತಲುಪಿಸಲಾಗಿದೆ. ಭಾರತೀಯರ ಸ್ಥಳಾಂತರಕ್ಕಾಗಿ ಕೇಂದ್ರ ಸರ್ಕಾರವು ಪೋರ್ಟ್ ಸುಡಾನ್ನಿಂದ ನೌಕಾಪಡೆಯ ಹಡಗು ಮತ್ತು ವಾಯುಪಡೆಯ ವಿಮಾನದ ವ್ಯವಸ್ಥೆಯನ್ನು ಮಾಡಿದ್ದು, ಇದರ ಒಟ್ಟಾರೆ ಕಾರ್ಯಾಚರಣೆಗೆ ಆಪರೇಶನ್ ಕಾವೇರಿ ಎಂದು ನಾಮಕರಣ ಮಾಡಿದೆ. ಮೊದಲ ಬ್ಯಾಚ್ನಲ್ಲಿ ಐಎನ್ಎಸ್ ಸುಮೇಧಾ ಹಡಗಿನ ಮೂಲಕ 278 ಭಾರತೀಯರನ್ನು ಜೆಡ್ಡಾಕ್ಕೆ ಕರೆತರಲಾಗಿತ್ತು. ಅದಾದ ಬಳಿಕ ಐಎನ್ಎಸ್ ತೇಜ್ ಹಡಗಿನಲ್ಲಿ 297 ಭಾರತೀಯರು ಜೆಡ್ಡಾಕ್ಕೆ ಬಂದಿದ್ದಾರೆ. ಹೀಗೆ ನೌಕೆ ಮತ್ತು ಏರ್ಕ್ರಾಫ್ಟ್ಗಳಲ್ಲಿ ಜೆಡ್ಡಾ ತಲುಪಿರುವವರನ್ನು ಬ್ಯಾಚ್ ಮಾಡಿ, ಭಾರತಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.
ಇದನ್ನೂ ಓದಿ: ಯುದ್ಧ ಪೀಡಿತ ಸುಡಾನ್ನಿಂದ 1700 ಭಾರತೀಯರ ರಕ್ಷಣೆ; ಯಾರಿಗೂ ಅಪಾಯವಾಗಲು ಬಿಡೋದಿಲ್ಲವೆಂದ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಇಲಾಖೆ ಈ ಆಪರೇಶನ್ ಕಾವೇರಿಯನ್ನು ಅತ್ಯಂತ ಕಾಳಜಿಯಿಂದ ನಿರ್ವಹಿಸುತ್ತಿದೆ. ಕೇಂದ್ರ ಸಚಿವಾಲಯದ ರಾಜ್ಯ ಸಚಿವ ವಿ.ಮುರಳೀಧರನ್ ಅವರು ಸೌದಿ ಅರೇಬಿಯಾದ ಜೆಡ್ಡಾದಲ್ಲೇ ನೆಲೆನಿಂತಿದ್ದಾರೆ. ಸುಡಾನ್ನಿಂದ ಅಲ್ಲಿ ತಲುಪಿದ ಭಾರತೀಯರನ್ನೆಲ್ಲ ಅವರೇ ಬರಮಾಡಿಕೊಳ್ಳುತ್ತಿದ್ದಾರೆ.