ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಕೈಗೊಳ್ಳುತ್ತಿರುವ ಭಾರತ್ ಜೋಡೋ ಯಾತ್ರೆಯು ದೆಹಲಿ ತಲುಪಿದೆ. ಕೊರೊನಾ ಭೀತಿ ಮಧ್ಯೆಯೂ ರಾಹುಲ್ ಜತೆ ಸಾವಿರಾರು ಜನ ಹೆಜ್ಜೆ ಹಾಕಿದ್ದಾರೆ. ಇನ್ನು ಕೆಂಪುಕೋಟೆ ಮೇಲೆ ನಿಂತು ಭಾಷಣ ಮಾಡಿದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಹಿಂದು-ಮುಸ್ಲಿಂ ದ್ವೇಷ, ಮೋದಿ ಆಡಳಿತ ವೈಖರಿ ಸೇರಿ ಹಲವು ವಿಷಯ ಪ್ರಸ್ತಾಪಿಸಿ ಟೀಕಿಸಿದ್ದಾರೆ.
“ದೇಶದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ದ್ವೇಷ ಹರಡಿಸುತ್ತಿರುವುದನ್ನು ನನ್ನ ಜೀವಮಾನದಲ್ಲಿಯೇ ನೋಡಿಲ್ಲ. ಅಷ್ಟರಮಟ್ಟಿಗೆ ಹಿಂದು-ಮುಸ್ಲಿಂ ದ್ವೇಷ ಹೆಚ್ಚಿಸಲಾಗುತ್ತಿದೆ. ಕೇಂದ್ರ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು, ಜನರ ಗಮನವನ್ನು ಬೇರೆಡೆ ಸೆಳೆಯಲು ದ್ವೇಷದ ಕಿಚ್ಚು ಹಚ್ಚಲಾಗುತ್ತಿದೆ” ಎಂದು ಟೀಕಿಸಿದರು.
ಇದು ಅಂಬಾನಿ-ಅದಾನಿ ಸರ್ಕಾರ
“ದೇಶದಲ್ಲಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಲ್ಲ. ಇದು ಉದ್ಯಮಿಗಳ ಸರ್ಕಾರ. ಮುಕೇಶ್ ಅಂಬಾನಿ, ಗೌತಮ್ ಅದಾನಿ ಅವರ ಸರ್ಕಾರ. ನರೇಂದ್ರ ಮೋದಿ ಅವರು ದೇಶವನ್ನು ನಿಯಂತ್ರಿಸಲು ಆಗುತ್ತಿಲ್ಲ. ಅವರೇ ನಿಯಂತ್ರಣದಲ್ಲಿದ್ದಾರೆ. ಇದರ ಪರಿಣಾಮವನ್ನು ದೇಶ ಅನುಭವಿಸುತ್ತಿದೆ. ಪದವಿ ಪಡೆದಿರುವ ಯುವಕರು ಪಕೋಡಾ ಮಾರಿ ಜೀವನ ಸಾಗಿಸುವಂತಾಗಿದೆ” ಎಂದು ಟೀಕೆ ಮಾಡಿದರು.
ನನ್ನ ಘನತೆಗೆ ಕುತ್ತು ತರಲು ಕೋಟ್ಯಂತರ ರೂ. ಖರ್ಚು
“ನನ್ನ ವಿರುದ್ಧ ಬಿಜೆಪಿ ಷಡ್ಯಂತ್ರ ಮಾಡಿತು. ನನ್ನ ಘನತೆಗೆ ಧಕ್ಕೆ ತರಲು ಬಿಜೆಪಿ ಕೋಟ್ಯಂತರ ರೂ. ಖರ್ಚು ಮಾಡಿದೆ. ಆದರೆ, ಕೊನೆಗೆ ಸತ್ಯವೇ ಗೆಲ್ಲುತ್ತದೆ. ನಾನು ಒಂದೇ ತಿಂಗಳಲ್ಲಿ ದೇಶದ ಜನರಿಗೆ ಸತ್ಯದ ದರ್ಶನ ಮಾಡಿದ್ದೇನೆ. ಸತ್ಯಕ್ಕೆ ಜಯ ಖಂಡಿತ. ದ್ವೇಷ ಅಲ್ಲ, ಪ್ರೀತಿಯನ್ನು ಹರಡಬೇಕು” ಎಂದರು.
ಮಾಧ್ಯಮಗಳ ತುಂಬ ದ್ವೇಷವೇ
ಮಾಧ್ಯಮಗಳ ವಿರುದ್ಧ ಕೂಡ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು. “ನಾನು ಇದುವರೆಗೆ 2,800 ಕಿಲೋಮೀಟರ್ ನಡೆದಿದ್ದೇನೆ. ದೇಶದ ಒಂದು ಮೂಲೆಯಲ್ಲಿಯೂ ದ್ವೇಷದ ಲವಲೇಷವೂ ಇಲ್ಲ. ಆದರೆ, ಟಿವಿ ನೋಡಿದರೆ ಸಾಕು, ದ್ವೇಷವು ಕಣ್ಣಿಗೆ ರಾಚುತ್ತದೆ. ಮಾಧ್ಯಮದವರು ಕೂಡ ನನ್ನ ಗೆಳೆಯರೇ. ಆದರೆ, ನೀವು ಸತ್ಯವನ್ನು ಜನತೆಗೆ ತೋರಿಸುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಮಲ್ ಹಾಸನ್ ಹೇಳಿದ್ದೇನು?
ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಕಮಲ್ ಹಾಸನ್, ಕೆಂಪುಕೋಟೆಯಲ್ಲಿ ಮಾತನಾಡಿದರು. “ನನ್ನ ತಂದೆ ಕೂಡ ಕಾಂಗ್ರೆಸ್‌ನಲ್ಲಿದ್ದರು. ನಾನೂ ಒಂದು ಪಕ್ಷವನ್ನು ಸ್ಥಾಪಿಸಿದ್ದೇನೆ. ಆದರೆ, ದೇಶದ ವಿಚಾರ ಬಂದಾಗ, ನನ್ನ ಆತ್ಮಸಾಕ್ಷಿಯು ಯಾತ್ರೆಗೆ ಬೆಂಬಲಿಸು ಎಂದು ಹೇಳಿತು. ಭಾರತವನ್ನು ಒಡೆಯುವುದಕ್ಕಾಗಿ ಅಲ್ಲ, ಜೋಡಿಸುವುದಕ್ಕಾಗಿ ಯಾತ್ರೆಗೆ ಬೆಂಬಲ ಸೂಚಿಸಿ, ಇಲ್ಲಿಯವರೆಗೆ ಬಂದಿದ್ದೇನೆ” ಎಂದರು. ಕಮಲ್ ಹಾಸನ್ ರಾಜಕೀಯ ಮಾತನಾಡಲಿಲ್ಲ.
ಒಂಬತ್ತು ದಿನ ವಿಶ್ರಾಂತಿ
ರಾಹುಲ್ ಗಾಂಧಿ ಕೈಗೊಳ್ಳುತ್ತಿರುವ ಭಾರತ್ ಜೋಡೋ ಯಾತ್ರೆಯ ಈ ಹಂತವು ಶನಿವಾರವೇ ಮುಕ್ತಾಯಗೊಂಡಿದೆ. ರಾಹುಲ್ ಗಾಂಧಿಯವರು ಒಂಬತ್ತು ದಿನ ಯಾತ್ರೆಗೆ ಬಿಡುವು ನೀಡಿದ್ದಾರೆ. ಇದಾದ ಬಳಿಕ ಮುಂದಿನ ಹಂತದ ಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ ಪತಿ ರಾಬರ್ಟ್ ವಾದ್ರಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ನಾಯಕರು ಇದ್ದರು.
ಇದನ್ನೂ ಓದಿ | Jagdish Tytler | ಟೀಕೆ ಹಿನ್ನೆಲೆ ಭಾರತ್ ಜೋಡೋ ಯಾತ್ರೆಯಿಂದ ಹಿಂದೆ ಸರಿದ ಸಿಖ್ ವಿರೋಧಿ ದಂಗೆ ಆರೋಪಿ ಟೈಟ್ಲರ್