Site icon Vistara News

Viral Video: ರಾಮನವಮಿ ಆಚರಣೆ ವೇಳೆ ಅವಘಡ; ದೇವಸ್ಥಾನದಲ್ಲಿ ನೆಲ ಕುಸಿದು ಬಾವಿಗೆ ಬಿದ್ದ 25 ಭಕ್ತರು

25 people fall in stepwell In Indore Temple

#image_title

ಇಂಧೋರ್​: ಶ್ರೀರಾಮನವಮಿ (Ram Navami) ಹಬ್ಬದ ಆಚರಣೆಯ ಸಮಯದಲ್ಲಿ ಮಧ್ಯಪ್ರದೇಶದ ಇಂಧೋರ್​​ನ ಸ್ನೇಹ ನಗರದಲ್ಲಿರುವ ಶ್ರೀ ಬಾಳೇಶ್ವರ ದೇವಸ್ಥಾನದಲ್ಲಿ ಅವಘಡ ಉಂಟಾಗಿದೆ. ಈ ದೇಗುಲದ ಬಾವಿಯನ್ನು ಮುಚ್ಚಲ್ಪಟ್ಟಿದ್ದ ಸಿಮೆಂಟ್ ಸ್ಲ್ಯಾಬ್​ ​ ಒಡೆದು ಬಿದ್ದ ಪರಿಣಾಮ ಸುಮಾರು 25 ಭಕ್ತರು ಆ ಬಾವಿ ಅಥವಾ ಕಲ್ಯಾಣಿಯಲ್ಲಿ ಬಿದ್ದಿದ್ದಾರೆ. ಅದರಲ್ಲೀಗ 10 ಜನರನ್ನು ರಕ್ಷಿಸಿದ್ದಾಗಿ ವರದಿಯಾಗಿದೆ.

ಸಾಮಾನ್ಯವಾಗಿ ಬಹುತೇಕ ದೇವಸ್ಥಾನಗಳಲ್ಲಿ ಕಲ್ಯಾಣಿ ಅಥವಾ ಮೆಟ್ಟಿಲುಗಳನ್ನು ಒಳಗೊಂಡ ಬಾವಿ ಇರುತ್ತದೆ. ಅದರಂತೆ ಶ್ರೀ ಬಾಳೇಶ್ವರ ಮಹಾದೇವ ಜುಲೇಲಾಲ್​​ ದೇಗುಲದಲ್ಲಿರುವ ಕಲ್ಯಾಣಿಯನ್ನು ಮೇಲಿನಿಂದ ಸಿಮೆಂಟ್​ ಹಾಕಿ, ನೆಲದಂತೆ ಮಾಡಿ ಮುಚ್ಚಿಡಲಾಗಿತ್ತು. ಇಂದು ರಾಮನವಮಿ ಹಬ್ಬದ ಪ್ರಯುಕ್ತ ಅಪಾರ ಭಕ್ತರು ಸೇರಿ, ಅಲ್ಲೆಲ್ಲ ನಿಂತಿದ್ದರು. ಅದೇ ಸಮಯದಲ್ಲಿ ನೆಲ ಕುಸಿತವಾಗಿದೆ. ನಿಂತಿದ್ದವರೆಲ್ಲ ಬಾವಿಗೆ ಬಿದ್ದಿದ್ದಾರೆ.

ಮಾಹಿತಿ ಪಡೆಯುತ್ತಿದ್ದಂತೆ ಪೊಲೀಸರು ಅಲ್ಲಿಗೆ ಹೋಗಿ ಭಕ್ತರನ್ನು ರಕ್ಷಿಸಿದ್ದಾರೆ. ಅಗ್ನಿಶಾಮಕ ದಳದ ತಂಡವೂ ಕೂಡ ಅಲ್ಲಿ ಇದೆ. ಬಾವಿಯಿಂದ ಎತ್ತಿ, ಅವರನ್ನೆಲ್ಲ ಆಂಬ್ಯುಲೆನ್ಸ್​ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನು ಘಟನೆ ನಡೆಯುತ್ತಿದ್ದಂತೆ ಅಲ್ಲಿ ನೆರೆದಿದ್ದವರೆಲ್ಲ ಆತಂಕದಿಂದ ಆ ಕಡೆ-ಈ ಕಡೆ ಓಡಾಡಲು ಶುರು ಮಾಡಿದರು. ಅನೇಕರು ಭಯದಿಂದ ಅಳಲು ಪ್ರಾರಂಭಿಸಿದ್ದಾರೆ. ಹೀಗೆ ಭಕ್ತರ ಓಡಾಟ ಜಾಸ್ತಿ ಆಗಿದ್ದರಿಂದ ನೂಕುನುಗ್ಗಲು ಉಂಟಾಯಿತು. ಭಕ್ತರಿಗೆ ಧೈರ್ಯ ತುಂಬಿ, ಅವರನ್ನು ನಿಯಂತ್ರಿಸಲೂ ಪೊಲೀಸರು ಪರದಾಡಬೇಕಾಯಿತು.

ಇದನ್ನೂ ಓದಿ: Dharma Dangal:‌ ಬೇಲೂರು ದೇವಸ್ಥಾನದಲ್ಲಿ ಕುರಾನ್‌ ಪಠಣ: ಆಗಮ ಪಂಡಿತರ ಮೊರೆ ಹೋದ ಜಿಲ್ಲಾಡಳಿತ

ಇನ್ನು ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​ ಹೇಳಿದ್ದಾರೆ. ದೇವಸ್ಥಾನದಲ್ಲಿ ಬಾವಿಗೆ ಬಿದ್ದವರ ರಕ್ಷಣೆಗೆ ಎಲ್ಲ ರೀತಿಯ ಕ್ರಮವನ್ನೂ ವಹಿಸಲು ಸೂಚಿಸಿದ್ದಾರೆ. ಇಂಧೋರ್ ಜಿಲ್ಲಾಡಳಿತದ ಜತೆ ನಿರಂತರ ಸಂಪರ್ಕದಲ್ಲಿದ್ದು, ಕ್ಷಣಕ್ಷಣಕ್ಕೂ ಮಾಹಿತಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಇಲ್ಲಿಯವರೆಗೆ ಯಾರೂ ಮೃತಪಟ್ಟಿದ್ದಾಗಿ ವರದಿಯಾಗಿಲ್ಲ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಇದ್ದು, ರಕ್ಷಣಾ ಕಾರ್ಯಾಚರಣೆ ಉಸ್ತುವಾರಿ ಹೊತ್ತಿದ್ದಾರೆ.

Exit mobile version