2008ರ ನವೆಂಬರ್ 26ರಂದು ಮುಂಬಯಿಯಲ್ಲಿ ನಡೆದ ಉಗ್ರದಾಳಿ (26/11 Mumbai Attack)ಯಲ್ಲಿ ಕೈವಾಡ ಇದೆ ಎಂದು ಆರೋಪ ಹೊತ್ತು, ಸದ್ಯ ಯುಎಸ್ ಜೈಲಿನಲ್ಲಿರುವ ತಹವ್ವುರ್ ರಾಣಾ (Tahawwur Rana)ನನ್ನು ಭಾರತಕ್ಕೆ ಗಡಿಪಾರು ಮಾಡಲು ಯುಎಸ್ನ ಫೆಡರಲ್ ಕೋರ್ಟ್ ಒಪ್ಪಿಗೆ ನೀಡಿದೆ. ಮುಂಬಯಿ ದಾಳಿಯಲ್ಲಿ ಭಾರತಕ್ಕೆ ಬೇಕಾಗಿರುವ ರಾಣಾ ಮೂಲತಃ ಪಾಕಿಸ್ತಾನದವನು ಆಗಿದ್ದು, ಕೆನಡಾದಲ್ಲಿ ಉದ್ಯಮ ಮಾಡಿಕೊಂಡಿದ್ದವ. 2008ರಲ್ಲಿ ಲಷ್ಕರೆ ತೊಯ್ಬಾ ಉಗ್ರರು ಮುಂಬಯಿ ಮೇಲೆ ಮಾಡಿದ ದಾಳಿಗೆ ಸಂಚು ರೂಪಿಸುವಲ್ಲಿ ತಹವ್ವುರ್ ರಾಣಾ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಸ್ಪಷ್ಟವಾಗಿತ್ತು. ಭಾರತದ ಮನವಿ ಮೇರೆಗೆ ಯುಎಸ್ ಸರ್ಕಾರ ಈತನನ್ನು ಬಂಧಿಸಲು ಕ್ರಮ ಕೈಗೊಂಡಿತ್ತು. 2011ರಲ್ಲಿ ಚಿಕಾಗೋದಲ್ಲಿ ಅರೆಸ್ಟ್ ಮಾಡಲಾಗಿತ್ತು.
ಅಂದಿನಿಂದಲೂ ಭಾರತಕ್ಕೆ ಆತನನ್ನು ಕರೆತರುವ ಪ್ರಯತ್ನವನ್ನು ಇಲ್ಲಿನ ಸರ್ಕಾರ ಜಾರಿಯಲ್ಲಿ ಇಟ್ಟಿತ್ತು. ಜೂನ್ 22ರಿಂದ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಇದೇ ಹೊತ್ತಲ್ಲಿ ತಹವ್ವುರ್ ರಾಣಾ ಗಡೀಪಾರು ನಿರ್ಧಾರವನ್ನು ಯುಎಸ್ ಪ್ರಕಟಿಸಿದೆ. ಆತನ ಕೇಸ್ ವಿಚಾರಣೆ ನಡೆಸಿರುವ ಯುಎಸ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ಜಾಕ್ವೆಲಿನ್ ಚೂಲ್ಜಿಯಾನ್ ಎಂಬುವರು ಈ ತೀರ್ಮಾನ ಪ್ರಕಟಿಸಿದ್ದಾರೆ. ರಾಜತಾಂತ್ರಿಕ ಕ್ರಮಗಳ ಮೂಲಕವೇ ಮುಂದುವರಿದು, ಆತನನ್ನು ವಾಪಸ್ ಕರೆತರಲು ರಾಷ್ಟ್ರೀಯ ತನಿಖಾ ದಳ (NIA) ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದೆ.
ಮುಂಬಯಿ ದಾಳಿ ಸಂದರ್ಭದಲ್ಲಿ ತಹವ್ವುರ್ ರಾಣಾ ತನ್ನ ಬಾಲ್ಯ ಸ್ನೇಹಿತ ಡೇವಿಡ್ ಕೋಲ್ಮನ್ ಹೆಡ್ಲಿ ಜತೆ ಸೇರಿಕೊಂಡು, ಲಷ್ಕರೆ ತೊಯ್ಬಾ ಉಗ್ರರ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಹಕರಿಸಿದ್ದಾನೆ. ದಾವೂದ್ ಗಿಲಾನಿ ಎಂದೇ ಕರೆಯಲ್ಪಡುವ ಡೇವಿಡ್ ಕೋಲ್ಮನ್ ಹೆಡ್ಲಿ ಒಬ್ಬ ಅಂತಾರಾಷ್ಟ್ರೀಯ ಉಗ್ರನಾಗಿದ್ದು, ಲಷ್ಕರೆ ತೊಯ್ಬಾ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ. ಈತ ಯುಎಸ್ನಿಂದ ಪದೇಪದೆ ಲಾಹೋರ್ಗೆ ಹೋಗಿ ಲಷ್ಕರೆ ಮುಖ್ಯಸ್ಥರ ಭೇಟಿಯಾಗುತ್ತಿದ್ದ. ಮುಂಬಯಿ ದಾಳಿಯಲ್ಲಿ ಇವನ ಕೈವಾಡ ಇದೆ. ಲಷ್ಕರೆ ತೊಯ್ಬಾದೊಂದಿಗೆ ಸೇರಿ ಪಿನ್ ಟು ಪಿನ್ ಸಂಚು ಮಾಡಿದ್ದ. ಸದ್ಯ ದಾವೂದ್ ಗಿಲಾನಿ ಯುಎಸ್ ಜೈಲಿನಲ್ಲಿಯೇ ಇದ್ದಾನೆ.
ಹಾಗೇ ಇವನ ಬಾಲ್ಯ ಸ್ನೇಹಿತ ತಹವ್ವುರ್ ರಾಣಾ ಪ್ರತಿಯೊಂದರಲ್ಲೂ ಜತೆಗಿದ್ದ. ಮುಂಬಯಿ ದಾಳಿಗೆ ಅಗತ್ಯವಿದ್ದ ಒಂದಷ್ಟು ಮಾಹಿತಿಗಳನ್ನು, ಸರಕನ್ನು ಆತ ಉಗ್ರರಿಗೆ ಒದಗಿಸಿದ್ದ. ಇದೇ ಕಾರಣಕ್ಕೆ ಭಾರತ ಅವನನ್ನು ವಿಚಾರಣೆಗೆ ಒಳಪಡಿಸಲು ನಿರ್ಧಾರ ಮಾಡಿತ್ತು. ತಹವ್ವುರ್ ರಾಣಾಗೆ ಭಾರತಕ್ಕೆ ಗಡಿಪಾರಾಗಲು ಸುತಾರಾಂ ಇಷ್ಟವಿರಲಿಲ್ಲ. ಆತನ ಪರ ವಕೀಲರು ಕೋರ್ಟ್ನಲ್ಲಿ ಇದನ್ನೇ ಪಟ್ಟು ಹಿಡಿದಿದ್ದರು. ಆದರೆ ಅದು ವ್ಯರ್ಥವಾಗಿದೆ.
ಇದನ್ನೂ ಓದಿ: 26/11ರ ಮುಂಬಯಿ ದಾಳಿಯನ್ನು ನೆನಪಿಸುವಂತೆ ಗುಜರಾತ್ ಕರಾವಳಿ ತೀರಕ್ಕೆ ಬಂದ ಪಾಕಿಸ್ತಾನಿ ಬೋಟ್; 10 ಮಂದಿ ಅರೆಸ್ಟ್
ಮುಂಬಯಿಯ ತಾಜ್ ಹೋಟೆಲ್ಗಳ ಮೇಲೆ 2008ರಲ್ಲಿ ನಡೆದ ಉಗ್ರ ದಾಳಿ ಇಂದಿಗೂ ನಮ್ಮ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದಿದೆ. ಅದನ್ನೊಂದು ಕರಾಳ ದಿನವೆಂದೇ ಪರಿಗಣಿಸಲಾಗುತ್ತದೆ. ಅಂದು ಲಷ್ಕರೆ ತೊಯ್ಬಾ ಸಂಘಟನೆಯ 10 ಉಗ್ರರು ಸಮುದ್ರ ಮಾರ್ಗದ ಮೂಲಕ ಮುಂಬಯಿಗೆ ಬಂದು ಗುಂಡಿನ ದಾಳಿ ನಡೆಸಿದ್ದರು. ನವೆಂಬರ್ 26ರಿಂದ 29ರವರೆಗೆ ಭದ್ರತಾ ಪಡೆಗಳು-ಉಗ್ರರ ನಡುವಿನ ಹೋರಾಟ ನಡೆದಿತ್ತು. ಇದರಲ್ಲಿ ಆರು ಮಂದಿ ಅಮೇರಿಕದವರು ಸೇರಿ 166 ಮಂದಿ ಮೃತಪಟ್ಟಿದ್ದರು. ಹಲವು ಯೋಧರು ಪ್ರಾಣತೆತ್ತಿದ್ದಾರೆ.