ನವದೆಹಲಿ: 26/11 ಮುಂಬೈ ದಾಳಿ ವೇಳೆ ತಮ್ಮ ಸಾಹಸದಿಂದ 20 ಗರ್ಭಿಣಿಯರನ್ನು ಉಗ್ರ ದಾಳಿಯಿಂದ ರಕ್ಷಿಸಿದ್ದ ಕಾಮಾ ಮತ್ತು ಅಲ್ಬೆಸ್ ಸರ್ಕಾರಿ ಆಸ್ಪತ್ರೆಯ ನರ್ಸ್ ಅಂಜಲಿ ಕುಲಥೆ (Anjali Kulthe) ಅವರು, ಅಂದಿನ ಭಯಾನಕ ಘಟನೆಯನ್ನು ವಿಶ್ವ ಸಂಸ್ಥೆಯ ಮುಂದೆ ವಿವರಿಸಿದ್ದಾರೆ. ಮೂರು ಗಂಟೆಗಳಲ್ಲಿ ತುಂಬ ಗರ್ಭಣಿಯರು ಎದುರಿಸಿದ ಆತಂಕ, ಆಘಾತ ಹಾಗೂ ಉಗ್ರರ ದಾಳಿಯಿಂದ ಪಾರಾದದ್ದು ಎಲ್ಲವನ್ನು ತಿಳಿಸಿದ್ದಾರೆ. ಅಲ್ಲದೇ, ವಿಚಾರಣೆ ವೇಳೆ, ತಮ್ಮನ್ನು ಉಗ್ರ ಕಸಬ್ ಗುರುತಿಸಿ, ವ್ಯಂಗ್ಯವಾಗಿ ನೋಡಿದ್ದ ಕ್ಷಣವನ್ನು ಸ್ಮರಿಸಿಕೊಂಡಿದ್ದಾರೆ.
ವಿಶ್ವ ಸಂಸ್ಥೆಯಲ್ಲಿ ಅಜ್ಮಲ್ ಕಸಬ್ ಬಗ್ಗೆ ಮಾತನಾಡಿದ ಅಂಜಲಿ ಕುಲಥೆ ಅವರು, ”ವಿಚಾರಣೆ ವೇಳೆ ಕಸಬ್ ನನ್ನನ್ನು ನೋಡಿ ವ್ಯಂಗ್ಯವಾಗಿ ಮುಗುಳ್ನಕ್ಕು, ಮೇಡಂ ನೀವು ನನ್ನನ್ನು ಗುರುತಿಸಿದ್ದೀರಿ ಎಂದಿದ್ದ. ಆತನ ಮುಖದಲ್ಲಿ ಯಾವುದೇ ಪಶ್ಚಾತ್ತಾಪವಿಲ್ಲ, ಅವಮಾನ ಇರಲಿಲ್ಲ. ಆ ಕ್ಷಣಗಳು ನನಗೆ, ದಾಳಿಯ ಸಂತ್ರಸ್ತರು ನ್ಯಾಯಕ್ಕಾಗಿ ಈಗಲೂ ಕಾಯುವುದನ್ನು ನೆನಪಿಸುತ್ತಿದೆ,” ಎಂದು ಹೇಳಿದ್ದಾರೆ. ಅಂಜಲಿ ಕುಲಥೆ ಅವರು ದಾಳಿ ವೇಳೆಯ ಸಾಹಸವನ್ನು ಸಾಕಷ್ಟು ವಿದೇಶಿ ರಾಯಭಾರಿಗಳು ಮೆಚ್ಚಿ ಕೊಂಡಾಡಿದರು.
20 ಗರ್ಭಿಣಿಯರನ್ನು ರಕ್ಷಿಸಿದ್ದ ಅಂಜಲಿ
ಉಗ್ರ ಕಸಬ್ ಸೇರಿದಂತೆ ಇಬ್ಬರು ಕಾಮಾ ಆಸ್ಪತ್ರೆಯತ್ತ ನುಗ್ಗಿದ್ದರು. ಆಗ ನೈಟ್ ಡ್ಯೂಟಿಯಲ್ಲಿದ್ದ ಅಂಜಲಿ ಅವರು, ಉಗ್ರರ ದಾಳಿಯಿಂದ ಸುಮಾರು 20 ಗರ್ಭಿಣಿಯರನ್ನು ರಕ್ಷಿಸಿದ್ದರು. ಅಲ್ಲದೇ, ಸ್ವಲ್ಪದರಲ್ಲೇ ಗುಂಡು ತಾಗುವುದರಿಂದ ತಪ್ಪಿಸಿಕೊಂಡಿದ್ದರು.
26/11 ಮುಂಬೈ ಉಗ್ರ ದಾಳಿಯಲ್ಲಿ ಬದುಕುಳಿದ ಅದೃಷ್ಟಶಾಲಿ ನಾನು. ಸಂತ್ರಸ್ತರ ಕುಟುಂಬಗಳು ಮತ್ತು ಭಯೋತ್ಪಾದನಾ ದಾಳಿಯಿಂದ ಬದುಕುಳಿದವರ ಕುಟುಂಬಗಳು ಅನುಭವಿಸಿದ ಆಘಾತ ಮತ್ತು ದುಃಖದ ಧ್ವನಿಯನ್ನು ನಾನು ವಿಶ್ವ ಸಂಸ್ಥೆಯ ಗಮನಕ್ಕೆ ಗಮನಕ್ಕೆ ತರುತ್ತೇನೆ ಎಂದು ಅಂಜಲಿ ಅವರು ಹೇಳಿದರು. ಅಲ್ಲದೇ, ಅಂದು ನಡೆದ ಸಂಪೂರ್ಣ ಘಟನೆಯ ವಿವರಗಳನ್ನು ವಿಶ್ವ ಸಂಸ್ಥೆಯ ಮುಂದೆ ಮಂಡಿಸಿದರು.
ಇದನ್ನೂ ಓದಿ | India retaliates to Pak | ಪ್ರಧಾನಿ ಮೋದಿ ಕಟುಕ ಎಂದ ಭುಟ್ಟೋಗೆ 1971 ನರಮೇಧ ನೆನಪಿಸಿ, ತಿರುಗೇಟು ನೀಡಿದ ಭಾರತ!