Site icon Vistara News

Girl Child : ಕ್ರೈಸ್ತ ಮಿಷನರಿ ಆಶ್ರಯ ಮನೆಯಿಂದ 26 ಹಿಂದು ಹೆಣ್ಣು ಮಕ್ಕಳು ನಾಪತ್ತೆ

Girl Child missing

ಭೋಪಾಲ್: ಗುಜರಾತ್, ಜಾರ್ಖಂಡ್, ರಾಜಸ್ಥಾನ ಮತ್ತು ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಕನಿಷ್ಠ 26 ಬಾಲಕಿಯರು (Girl Child) ಭೋಪಾಲ್​ನಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಆಶ್ರಯ ಗೃಹದಿಂದ ನಾಪತ್ತೆಯಾಗಿದ್ದಾರೆ (Girl Child missing) ಎಂಬುದಾಗಿ ವರದಿಯಾಗಿದೆ. ಭೋಪಾಲ್​​ನ (bhopal news) ಹೊರವಲಯದಲ್ಲಿರುವ ಪರ್ವಾಲಿಯಾ ಪ್ರದೇಶದ ಆಂಚಲ್ ಬಾಲಕಿಯರ ಹಾಸ್ಟೆಲ್​ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (NCPCR) ಅಧ್ಯಕ್ಷ ಪ್ರಿಯಾಂಕ್ ಕನುಂಗೊ (Priyank Kanoongo) ಅನಿರೀಕ್ಷಿತ ಭೇಟಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಆಶ್ರಯ ಗೃಹದ ರಿಜಿಸ್ಟರ್ ಅನ್ನು ಪರಿಶೀಲಿಸಿದಾಗ 68 ಹುಡುಗಿಯರ ಬಗ್ಗೆ ನೋಂದಣಿ ಮಾಡಲಾಗಿತ್ತು. ಅವರಲ್ಲಿ 26 ಮಂದಿ ಅಲ್ಲಿ ಇರಲಿಲ್ಲ.

ಆಶ್ರಯ ಗೃಹದ ನಿರ್ದೇಶಕ ಅನಿಲ್ ಮ್ಯಾಥ್ಯೂ ಅವರನ್ನು ಕಾಣೆಯಾದ ಬಾಲಕಿಯರ ಬಗ್ಗೆ ಪ್ರಶ್ನಿಸಿದಾಗ, ಅವರು ಸಮರ್ಪಕ ಮಾಹಿತಿ ಕೊಟ್ಟಿರಲಿಲ್ಲ., ಹೀಗಾಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಬಾಲಕಿಯರು ಗುಜರಾತ್, ಜಾರ್ಖಂಡ್ ಮತ್ತು ರಾಜಸ್ಥಾನಕ್ಕೆ ಸೇರಿದವರಾಗಿದ್ದರೆ. ಅವರಲ್ಲಿ ಕೆಲವರು ಮಧ್ಯಪ್ರದೇಶದ ಸೆಹೋರ್, ರೈಸನ್, ಚಿಂದ್ವಾರ ಮತ್ತು ಬಾಲಾಘಾಟ್ ಮೂಲದವರು. ಎಫ್ಐಆರ್ ಪ್ರಕಾರ ಆಶ್ರಯ ಗೃಹವನ್ನು ಕಾನೂನುಬಾಹಿರವಾಗಿ ನಡೆಸಲಾಗುತ್ತಿತ್ತು. ಅಲ್ಲಿ ಇನ್ನೂ ಅನೇಕ ಅಕ್ರಮಗಳು ಕಂಡು ಬಂದಿವೆ.

ಆಶ್ರಯ ಮನೆಯನ್ನು ನಿರ್ವಹಿಸುತ್ತಿದ್ದ ಮಿಷನರಿಯೊಬ್ಬರು ಕೆಲವು ಹೆಣ್ಣು ಮಕ್ಕಳನ್ನು ಬೀದಿಗಳಿಂದ ರಕ್ಷಿಸಿದ್ದಾರೆ. ಆದರೆ ಯಾವುದೇ ಪರವಾನಗಿ ಇಲ್ಲದೆ ಆಶ್ರಯ ಮನೆಯನ್ನ ನಡೆಸುತ್ತಿದ್ದರು. ಮಕ್ಕಳನ್ನು ಮನೆಯಲ್ಲಿ ರಹಸ್ಯವಾಗಿ ಇರಿಸಲಾಗಿದೆ ಮತ್ತು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುವಂತೆ ಮಾಡಲಾಗಿದೆ ಎಂದು ಮಕ್ಕಳ ಆಯೋಗದ ಅಧ್ಯಕ್ಷರು ಆರೋಪಿಸಿದ್ದಾರೆ.

“6 ರಿಂದ 18 ವರ್ಷದೊಳಗಿನ ಹೆಚ್ಚಿನ ಹುಡುಗಿಯರು ಹಿಂದೂಗಳು. ದುರದೃಷ್ಟವಶಾತ್, ಮಧ್ಯಪ್ರದೇಶದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲ ” ಎಂದು ಅವರು ಆರೋಪಿಸಿದ್ದಾರೆ.

ಕಾಣೆಯಾದ ಎಲ್ಲಾ ಬಾಲಕಿಯರು ಮಕ್ಕಳ ಕಲ್ಯಾಣ ಸಮಿತಿಯ ಆದೇಶವಿಲ್ಲದೆ ವಾಸಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಆದರೆ, ಮಕ್ಕಳನ್ನು ರಕ್ಷಿಸಿ ನಂತರ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದ್ದೇವೆ ಎಂದು ಮಕ್ಕಳ ಗೃಹದ ಅಧಿಕಾರಿಗಳು ಹೇಳಿದ್ದಾರೆ. ಎಫ್ಐಆರ್ ಪ್ರಕಾರ ಆಶ್ರಯ ಮನೆಯ ಅಡುಗೆಮನೆಯಲ್ಲಿ ಮಾಂಸ ಮತ್ತು ಮೀನುಗಳು ಸಿಕ್ಕಿವೆ.

ಇದನ್ನೂ ಓದಿ : Ram Mandir: ಅಯೋಧ್ಯೆಯಲ್ಲಿ ಚಿಗಿತುಕೊಂಡ ರಿಯಲ್‌ ಎಸ್ಟೇಟ್‌ ; ಭೂಮಿ ಬೆಲೆ 4 ಪಟ್ಟು ಏರಿಕೆ

ಆಶ್ರಯ ಮನೆಯಲ್ಲಿ ವಿವಿಧ ಧರ್ಮಗಳ ಹುಡುಗಿಯರು ಇದ್ದರು ಎಂದು ಎಫ್​ಐಆರ್​​ನಲ್ಲಿ ತಿಳಿಸಲಾಗಿದೆ, ಆದರೆ, ಅವರನ್ನು ಕೇವಲ ಒಂದು ಧರ್ಮವನ್ನು (ಕ್ರಿಶ್ಚಿಯನ್ ಧರ್ಮ) ಪಾಲಿಸವಂತೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳ ಮನೆಯಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳು ಇರಲಿಲ್ಲ. ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿಯನ್ನು ಹೊರತುಪಡಿಸಿ ರಾತ್ರಿಯಲ್ಲಿ ಇಬ್ಬರು ಪುರುಷ ಕಾವಲುಗಾರರು ಇರುತ್ತಿದ್ದರು. ಇದು ನಿಯಮಗಳ ಉಲ್ಲಂಘನೆಯಾಗಿದೆ. ಬಾಲಕಿಯರ ಆಶ್ರಯ ಗೃಹದಲ್ಲಿ ಮಹಿಳಾ ಕಾವಲುಗಾರರನ್ನು ಮಾತ್ರ ಹೊಂದಿರುವುದು ಕಡ್ಡಾಯ. ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಕಳುಹಿಸಲಾಗಿದೆ.

ಕ್ರಮಕ್ಕೆ ಒತ್ತಾಯಿಸಿದ ಮಾಜಿ ಸಿಎಂ

ಬಾಲಕಿಯರು ಕಣ್ಮರೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶನಿವಾರ ಮೋಹನ್ ಯಾದವ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ “ಭೋಪಾಲ್ನ ಪರ್ವಾಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನುಮತಿಯಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಮಕ್ಕಳ ಗೃಹದಿಂದ 26 ಬಾಲಕಿಯರು ಕಣ್ಮರೆಯಾದ ಪ್ರಕರಣ ನನ್ನ ಗಮನಕ್ಕೆ ಬಂದಿದೆ” ಎಂದು ಚೌಹಾಣ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಶಿವರಾಜ್ ಸಿಂಗ್ ಚೌಹಾಣ್, ಈ ಬಗ್ಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Exit mobile version