Site icon Vistara News

Madhya Pradesh: ಮಧ್ಯಪ್ರದೇಶದಲ್ಲಿ 28 ಶಾಸಕರಿಗೆ ಮಂತ್ರಿಗಿರಿ; ಒಬಿಸಿಯವರಿಗೆಷ್ಟು ಖಾತೆ?

Madhya Pradesh Cabinet Expansion

28 Ministers Take Oath In Madhya Pradesh, 11 From OBC Category

ಭೋಪಾಲ್‌: ಮಧ್ಯಪ್ರದೇಶ (Madhya Pradesh) ಮುಖ್ಯಮಂತ್ರಿಯಾಗಿ ಮೋಹನ್‌ ಯಾದವ್‌ (Mohan Yadav) ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಸಚಿವ ಸಂಪುಟ ರಚನೆ ಮಾಡಿದ್ದಾರೆ. ಮೋಹನ್‌ ಯಾದವ್‌ ಕ್ಯಾಬಿನೆಟ್‌ಗೆ 28 ಶಾಸಕರು ಸೇರ್ಪಡೆಯಾಗಿದ್ದು, ಭೋಪಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಮಂಗುಭಾ ಸಿ ಪಟೇಲ್‌ (Mangubha C Patel) ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಎಲ್ಲ ಸಮುದಾಯದವರನ್ನು ಒಳಗೊಂಡ ನೂತನ ಸಚಿವ ಸಂಪುಟ ರಚನೆಯಾಗಿದ್ದು, ನಿರೀಕ್ಷೆ ಹೆಚ್ಚಾಗಿದೆ.

ಕೇಂದ್ರದ ಮಾಜಿ ಸಚಿವ ಪ್ರಹ್ಲಾದ್‌ ಪಟೇಲ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ ಸೇರಿ 28 ಶಾಸಕರು ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕರಿಸಿದ 28 ಸಚಿವರಲ್ಲಿ 18 ಶಾಸಕರಿಗೆ ಸಂಪುಟ ದರ್ಜೆ ಹಾಗೂ 10 ಶಾಸಕರಿಗೆ ಸ್ವತಂತ್ರ ನಿರ್ವಹಣೆಯ ಹೊಣೆಯನ್ನು ನೀಡಲಾಗಿದೆ. “ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಎಲ್ಲರಿಗೂ ಅಭಿನಂದನೆಗಳು. ಎಲ್ಲರ ಸಹಕಾರ, ಬದ್ಧತೆಯಿಂದ ರಾಜ್ಯವನ್ನು ಅಭಿವೃದ್ಧಿಗೊಳಿಸುವುದೇ ಗುರಿಯಾಗಿದೆ” ಎಂದು ಪ್ರಮಾಣವಚನ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ಮೋಹನ್‌ ಯಾದವ್‌ ತಿಳಿಸಿದರು.

ಪ್ರಮಾಣವಚನ ಸ್ವೀಕರಿಸಿದ 28 ಶಾಸಕರಲ್ಲಿ 9 ಮಂದಿ ಸಾಮಾನ್ಯ ವರ್ಗಕ್ಕೆ ಸೇರಿದ್ದಾರೆ. ಇನ್ನು 11 ಶಾಸಕರು ಒಬಿಸಿ, 5 ಶಾಸಕರು ಪರಿಶಿಷ್ಟ ಜಾತಿ ಹಾಗೂ ಮೂವರು ಶಾಸಕರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯನ್ನೂ ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ರಚಿಸಲಾಗಿದೆ ಎಂದೇ ಹೇಳಲಾಗುತ್ತಿದೆ. ಇನ್ನು ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಲಾಡ್ಲಿ ಬೆಹೆನಾ ಯೋಜನೆಯು ಹೆಣ್ಣುಮಕ್ಕಳ ಮತಗಳನ್ನು ಸೆಳೆಯಲು ಕಾರಣವಾದ ಕಾರಣ ಸಚಿವ ಸಂಪುಟದಲ್ಲಿ ಐವರು ಮಹಿಳೆಯರಿಗೆ ಆದ್ಯತೆ ನೀಡಿರುವುದು ವಿಶೇಷವಾಗಿದೆ.

ಇದನ್ನೂ ಓದಿ: Congress Party: ಸೋಲಿಗೆ ಮಧ್ಯಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ನಾಥ್‌ ತಲೆದಂಡ; ಛತ್ತೀಸ್​ಗಢದಲ್ಲೂ ಬದಲಾವಣೆ

ಭಾರಿ ಆಡಳಿತ ವಿರೋಧಿ ಅಲೆಯ ನಡುವೆಯೂ ಮಧ್ಯಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಒಟ್ಟು 230 ಸ್ಥಾನಗಳ ಪೈಕಿ 163 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿತ್ತು. ಕಾಂಗ್ರೆಸ್ ಪಕ್ಷವು ಕೇವಲ 65 ಸ್ಥಾನಗಳಿಗೆ ತೃಪ್ತಿ ಪಡಬೇಕಾಗಿದೆ. ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಬದಲಿಗೆ ಮೋಹನ್‌ ಯಾದವ್‌ ಅವರನ್ನು ಸಿಎಂ ಎಂದು ಘೋಷಿಸುವ ಮೂಲಕ ಬಿಜೆಪಿಯು ಬದಲಾವಣೆಗೆ ನಾಂದಿ ಹಾಡಿದೆ. ಈಗ ಸಚಿವ ಸಂಪುಟ ರಚನೆಯಲ್ಲೂ ಹಲವು ಪ್ರಯೋಗ ನಡೆಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version