ನವದೆಹಲಿ: ರಾಜಕಾರಣಿಗಳು ಎಂದರೆ ಯಾರೂ ಬಡವರಾಗಿರುವುದಿಲ್ಲ. ಶಾಸಕರು, ಸಚಿವರು, ಮುಖ್ಯಮಂತ್ರಿಗಳು ಬಹುತೇಕ ಕೋಟ್ಯಧೀಶರೇ ಆಗಿರುತ್ತಾರೆ. ಹಾಗಾಗಿ, ರಾಜಕಾರಣಿಗಳು ಹಾಗೂ ಬಡತನ ಎಂಬುದು ವಿರುದ್ಧಾರ್ಥಕ ಪದಗಳು ಎಂದೇ ಜನ ಭಾವಿಸಿರುತ್ತಾರೆ. ರಾಜಕಾರಣಿಗಳು ಕೂಡ ಹಾಗೆಯೇ ಇರುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ದೇಶದಲ್ಲಿ ಆಡಳಿತ ನಡೆಸುತ್ತಿರುವ 30 ಮುಖ್ಯಮಂತ್ರಿಗಳ ಪೈಕಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ 29 ಸಿಎಂಗಳು (Crorepati Chief Ministers) ಕೋಟ್ಯಧೀಶರಾಗಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾತ್ರ ಕೋಟ್ಯಧೀಶರಲ್ಲ ಎಂದು ತಿಳಿದುಬಂದಿದೆ.
ಹೌದು, ದೇಶದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಿಎಂಗಳ ಪೈಕಿ ದೀದಿ ಅವರನ್ನು ಹೊರತುಪಡಿಸಿದರೆ ಎಲ್ಲ ಮುಖ್ಯಮಂತ್ರಿಗಳು ಕೂಡ ಕೋಟ್ಯಧೀಶರಾಗಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಸಂಸ್ಥೆಯು ರಾಜಕಾರಣಿಗಳು ಸಲ್ಲಿಸಿರುವ ಅಫಿಡವಿಟ್‌ಗಳನ್ನು ವಿಶ್ಲೇಷಿಸಿ ವರದಿ ತಯಾರಿಸಿದೆ. ಮಮತಾ ಬ್ಯಾನರ್ಜಿ ಅವರ ಆಸ್ತಿ 15 ಲಕ್ಷ ರೂ. ಎಂದು ಅವರು ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಸಲ್ಲಿಸಿದ ಅಫಿಡವಿಟ್ ಮೂಲಕ ತಿಳಿದುಬಂದಿದೆ. ಹಾಗಾಗಿ, ಅವರೇ ದೇಶದಲ್ಲಿಯೇ ಕಡಿಮೆ ಆಸ್ತಿ ಹೊಂದಿರುವ ಸಿಎಂ ಎನಿಸಿದ್ದಾರೆ.
ದೇಶದಲ್ಲೇ ಜಗನ್ ಮೋಹನ್ ರೆಡ್ಡಿ ಶ್ರೀಮಂತ ಸಿಎಂ
ಆಂಧ್ರಪ್ರದೇಶದ ಮುಖ್ಯಮಂತ್ರಿ, ವೈಎಸ್‌ಆರ್ ಪಕ್ಷದ ಜಗನ್ ಮೋಹನ್ ರೆಡ್ಡಿ ಅವರು ದೇಶದಲ್ಲೇ ಶ್ರೀಮಂತ ಸಿಎಂ ಎನಿಸಿದ್ದಾರೆ. ಅವರ ಆಸ್ತಿಯು 510 ಕೋಟಿ ರೂ. ಇದೆ. ಮಮತಾ ಬ್ಯಾನರ್ಜಿ ಅವರನ್ನು ಹೊರತುಪಡಿಸಿ 29 ಸಿಎಂಗಳ ಸರಾಸರಿ ಆಸ್ತಿಯು 33.96 ಕೋಟಿ ರೂ. ಇದೆ. ಇನ್ನು ದೇಶದ ಒಟ್ಟು ಸಿಎಂಗಳ ಪೈಕಿ ಶೇ.97ರಷ್ಟು ಸಿಎಂಗಳು ಕೋಟ್ಯಧೀಶರಾಗಿದ್ದಾರೆ. ಜಗನ್ ಮೋಹನ್ ರೆಡ್ಡಿ ಅವರ ನಂತರ ಅರುಣಾಚಲ ಪ್ರದೇಶ ಸಿಎಂ ಪೇಮಾ ಖಂಡು ಅವರು ಎರಡನೇ ಶ್ರೀಮಂತ ಸಿಎಂ ಎನಿಸಿದ್ದಾರೆ. ಇವರ ಆಸ್ತಿ 163 ಕೋಟಿ ರೂ. ಇದೆ. ಇನ್ನು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರ ಆಸ್ತಿ 63 ಕೋಟಿ ರೂ. ಇದ್ದು, ಇವರು ತೃತೀಯ ಶ್ರೀಮಂತ ಸಿಎಂ ಎನಿಸಿದ್ದಾರೆ.
ಇದನ್ನೂ ಓದಿ: Richest Hindus of Pakistan : ಇವರು ಪಾಕಿಸ್ತಾನದ ಶ್ರೀಮಂತ ಹಿಂದೂಗಳು! ಎಷ್ಟಿದೆ ಆಸ್ತಿ?
30 ಮುಖ್ಯಮಂತ್ರಿಗಳಲ್ಲಿ ಶೇ.43ರಷ್ಟು ಅಂದರೆ, 13 ಮುಖ್ಯಮಂತ್ರಿಗಳ ವಿರುದ್ಧ ಕೊಲೆ ಯತ್ನ, ಅಪಹರಣ ಸೇರಿ ಹಲವು ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ದೇಶದ 28 ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಿದ್ದಾರೆ. ಹಾಗೆಯೇ, ಪುದುಚೇರಿ ಮತ್ತು ದೆಹಲಿ ಕೇಂದ್ರಾಡಳಿತ ಪ್ರದೇಶಗಳಿಗೂ ಮುಖ್ಯಮಂತ್ರಿ ಇದ್ದಾರೆ. ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಸಿಎಂ ಇಲ್ಲ. ಅಲ್ಲಿ ಚುನಾವಣೆ ಘೋಷಣೆ ಬಾಕಿ ಇದೆ.