ನವದೆಹಲಿ: ಕಳೆದ ಮಾರ್ಚ್‌ನಲ್ಲಿ ಬ್ರಹ್ಮೋಸ್ ಕ್ಷಿಪಣಿಯು (Brahmos Missile) ಅಚಾತುರ್ಯವಾಗಿ ಪಾಕಿಸ್ತಾನದ ಗಡಿ ಪ್ರವೇಶಿಸಿದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯ ಮೂವರು ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಕಾರ್ಯನಿರ್ವಹಣೆಯಲ್ಲಿ ಲೋಪವೆಸಗಿದ ಹಿನ್ನೆಲೆಯಲ್ಲಿ ಮೂವರನ್ನೂ ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಸಕ್ತ ವರ್ಷದ ಮಾರ್ಚ್ ೯ರಂದು ಬ್ರಹ್ಮೋಸ್ ಕ್ಷಿಪಣಿಯ ಪರಿಶೀಲನೆ ವೇಳೆ ಅದು ಅಚಾತುರ್ಯದಿಂದಾಗಿ ಪಾಕಿಸ್ತಾನದ ಗಡಿ ಪ್ರವೇಶಿಸಿ, ಅಲ್ಲಿನ ಭೂಭಾಗವೊಂದನ್ನು ಧ್ವಂಸಗೊಳಿಸಿತ್ತು. ಅಚಾತುರ್ಯವನ್ನು ಪಾಕಿಸ್ತಾನ ಖಂಡಿಸಿದ ಹಿನ್ನೆಲೆಯಲ್ಲಿ ಭಾರತವು ಸ್ಪಷ್ಟನೆ ನೀಡಬೇಕಾಯಿತು. ಅಲ್ಲದೆ, ಪ್ರಕರಣದ ಬಗ್ಗೆ ಕೋರ್ಟ್ ಆಫ್ ಎನ್‌ಕ್ವೈರಿಗೆ (ಸಿಒಐ) ವಹಿಸಲಾಗಿತ್ತು. ಅಚಾತುರ್ಯಕ್ಕೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂಬುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಮೂವರನ್ನೂ ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಮೂವರು ಅಧಿಕಾರಿಗಳನ್ನು ವಜಾಗೊಳಿಸಿದ ಆದೇಶವನ್ನು ಮಂಗಳವಾರವೇ ಅಧಿಕಾರಿಗಳಿಗೆ ರವಾನಿಸಲಾಗಿದ್ದು, ತತ್‌ಕ್ಷಣದಿಂದಲೇ ಆದೇಶ ಜಾರಿಗೆ ಬಂದಿದೆ. ಭಾರತದ ಕ್ಷಿಪಣಿಯು ಆಕಸ್ಮಿಕವಾಗಿ ಪಾಕಿಸ್ತಾನ ಗಡಿ ಪ್ರವೇಶಿಸಿದಾಗ ನೆರೆ ರಾಷ್ಟ್ರವು ಇದು ಉದ್ದೇಶಪೂರ್ವಕ ದಾಳಿ ಎಂದು ತಿಳಿದು ಪ್ರತಿದಾಳಿಗೆ ಸಿದ್ಧತೆ ನಡೆಸಿತ್ತು ಎಂದು ತಿಳಿದುಬಂದಿದೆ.