Site icon Vistara News

Congress Crisis | ಗೆಹ್ಲೋಟ್‌ ಬಿಟ್ಟು ನಿಷ್ಠರಿಗೆ ಶಿಕ್ಷೆ, ಹರಕೆಯ ಕುರಿ ಹುಡುಕುತ್ತಿದೆಯೇ ಕಾಂಗ್ರೆಸ್?

Rahul Gandhi Gehlot

ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್‌ (Congress Crisis) ಹರಕೆಯ ಕುರಿಗಳನ್ನು ಹುಡುಕುತ್ತಿದೆಯೇ? ಅಶೋಕ್‌ ಗೆಹ್ಲೋಟ್‌ ಅವರ ಬಂಡಾಯದ ವಿಷಯದಲ್ಲಿ ಗೆಹ್ಲೋಟ್‌ ಅವರನ್ನು ಬಿಟ್ಟು ಅವರ ಆಪ್ತರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸ್‌ ಮುಂದಾಗಿದೆ. ಅದರಲ್ಲೂ, ಸಚಿವ, ಮುಖ್ಯ ಸಚೇತಕ (ಚೀಫ್‌ ವಿಪ್‌) ಸೇರಿ ಮೂವರ ವಿರುದ್ಧವೇ ಶಿಸ್ತಿನ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸ್‌ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ರಾಜಸ್ಥಾನದಲ್ಲಿ ಉಂಟಾದ ಭಿನ್ನಮತ, ಬಿಕ್ಕಟ್ಟು ಕುರಿತು ಪಕ್ಷದ ವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಅಜಯ್‌ ಮಕೇನ್‌ ಅವರು ವರದಿ ನೀಡಿದ್ದು, ಅಶೋಕ್‌ ಗೆಹ್ಲೋಟ್‌ ಅವರ ಉಲ್ಲೇಖವೇ ಇರದೆ ಮುಖ್ಯ ಸಚೇತಕ ಮಹೇಶ್‌ ಜೋಶಿ, ಆರ್‌ಟಿಡಿಸಿ ಚೇರ್ಮನ್‌ ಧರ್ಮೇಂದ್ರ ಪಾಠಕ್‌ ಹಾಗೂ ಶಾಂತಿ ಧರಿವಾಲ್‌ ಅವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.

ಅಶೋಕ್‌ ಗೆಹ್ಲೋಟ್‌ ಅವರನ್ನು ಬೆಂಬಲಿಸಿಯೇ ೯೨ ಶಾಸಕರು ರಾಜೀನಾಮೆ ನೀಡಿದ್ದರು. ಅಶೋಕ್‌ ಗೆಹ್ಲೋಟ್‌ ಅವರೂ ನಾನು ರಾಜಸ್ಥಾನ ಬಿಟ್ಟು ಹೋಗುವುದಿಲ್ಲ ಎಂದು ಮೊದಲೇ ಹೇಳಿದ್ದರು. ಈಗ ಬಂಡಾಯಕ್ಕೆ ಕಾರಣರಾದ ಗೆಹ್ಲೋಟ್‌ ಅವರನ್ನು ಬಿಟ್ಟು, ಕೇವಲ ಅವರ ಬೆಂಬಲಿಗರು, ಅದರಲ್ಲೂ, ಮೂವರ ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳಲು ಮುಂದಾಗಿರುವುದು‌, ಅವರನ್ನೇ ದೂಷಿಸುತ್ತಿರುವುದು ಹರಕೆಯ ಕುರಿಗಳನ್ನು ಹುಡುಕಿದಂತೆಯೇ ಎಂಬುದಾಗಿ ವಿಶ್ಲೇಷಿಸಲಾಗಿದೆ.

ಬಂಡಾಯದ ಬಿಸಿಯಿಂದಾಗಿ ಗೆಹ್ಲೋಟ್‌ ಅವರು ರಾಜಸ್ಥಾನದ ಮುಖ್ಯಮಂತ್ರಿಯಾಗಿಯೇ ಉಳಿಯುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಂಸದ ಶಶಿ ತರೂರ್‌ ಹಾಗೂ ಪವನ್‌ ಬನ್ಸಾಲ್‌ ಅವರಿಗೆ ನಾಮಪತ್ರ ನೀಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Congress President | ಅಧ್ಯಕ್ಷ ರೇಸ್‌ನಿಂದ ಗೆಹ್ಲೋಟ್‌ ಔಟ್‌, ತರೂರ್‌, ಬನ್ಸಾಲ್‌ ಇನ್

Exit mobile version