ನವ ದೆಹಲಿ: ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೆ ಅಕ್ಟೋಬರ್ 17ರಂದು ನಡೆಯಲಿರುವ ಚುನಾವಣೆ(Cong Prez Poll)ಗೆ ತಿರುವನಂತಪುರಂ ಸಂಸದ ಶಶಿ ತರೂರ್, ಜಾರ್ಖಂಡ ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್.ತ್ರಿಪಾಠಿ ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದರು. ಇಲ್ಲಿ ಕೆ.ಎನ್.ತ್ರಿಪಾಠಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ, ನೇರ ಹಣಾಹಣಿ ಏರ್ಪಡುವುದು ಶಶಿ ತರೂರ್ ಮತ್ತು ಮಲ್ಲಿಕಾರ್ಜುನ್ ಖರ್ಗೆ ನಡುವೆಯೇ ಎಂದೇ ಹೇಳಲಾಗಿದೆ. ಈ ಮೂವರೂ ತಮ್ಮ ನಾಮಪತ್ರವನ್ನು ಎಐಸಿಸಿ ಪ್ರಧಾನ ಕಚೇರಿಯಲ್ಲಿರುವ ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ ಮಿಸ್ತ್ರಿ ಅವರಿಗೆ ಸಲ್ಲಿಸಿದ್ದಾರೆ.
ಶಶಿ ತರೂರ್ ಮತ್ತು ಕೆ.ಎನ್.ತ್ರಿಪಾಠಿಗಿಂತಲೂ ಮಲ್ಲಿಕಾರ್ಜುನ ಖರ್ಗೆಗೇ ಬೆಂಬಲ ಜಾಸ್ತಿ ಇರುವುದು ಈಗಲೇ ಗೋಚರಿಸುತ್ತಿದೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಜಿ23 ಸಮುದಾಯದ ಎಲ್ಲ ನಾಯಕರು, ದೀಪಿಂದರ್ ಹೂಡಾ ಸೇರಿ ಹಲವರು ಮಲ್ಲಿಕಾರ್ಜುನ ಖರ್ಗೆಗೇ ತಮ್ಮ ತಮ್ಮ ಮತ ಎಂದು ಹೇಳಿದ್ದಾರೆ.
ಇಂದು ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಶಶಿ ತರೂರ್, ‘ಕಾಂಗ್ರೆಸ್ ಪಕ್ಷದ ಬಗೆಗೆ ನನಗಿರುವ ದೂರದೃಷ್ಟಿಯನ್ನು ನಾನು ಪಕ್ಷದ ಎಲ್ಲ ಪ್ರತಿನಿಧಿಗಳಿಗೂ (ಅಧ್ಯಕ್ಷ ಚುನಾವಣೆಯಲ್ಲಿ ಮತದಾನ ಮಾಡುವವರು) ತಿಳಿಸುತ್ತೇನೆ. ಈ ಮೂಲಕವೇ ಅವರೆಲ್ಲರ ಬೆಂಬಲ ಕೋರುತ್ತೇನೆ. ಕಾಂಗ್ರೆಸ್ನ ಪ್ರತಿ ಕಾರ್ಯಕರ್ತನ ಧ್ವನಿಯಾಗಿ ನಾನು ಈ ಸ್ಥಾನಕ್ಕೆ ಸ್ಪರ್ಧಿಸಲು ಬಯಸುತ್ತೇನೆ’ ಎಂದು ತಿಳಿಸಿದ್ದಾರೆ. ‘ಕಾಂಗ್ರೆಸ್ನಲ್ಲಿ ಕೇಂದ್ರೀಕೃತವಾಗಿ ನಿರ್ಧಾರ ಕೈಗೊಳ್ಳುವ ಪದ್ಧತಿ ಇದೆ. ಆದರೆ ಆ ನಿಯಮವನ್ನು ಮೀರಬೇಕು. ನನ್ನ ಅನೇಕ ಸಹೋದ್ಯೋಗಿಗಳು ಒಮ್ಮತದ ಅಭ್ಯರ್ಥಿಯನ್ನು ನಿಲ್ಲಿಸುವ ಬಗ್ಗೆಯೂ ಪ್ರಸ್ತಾಪ ಮಾಡಿದ್ದರು. ಆದರೆ ನಾನು ಅವರಲ್ಲಿ ಒಬ್ಬನಲ್ಲ’ ಎಂದೂ ಶಶಿ ತರೂರ್ ಹೇಳಿಕೊಂಡಿದ್ದಾರೆ.
ಮಲ್ಲಿಕಾರ್ಜುನ್ ಖರ್ಗೆಯವರಂತೂ ಇಂದು ಕೊನೇ ಕ್ಷಣದಲ್ಲಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಕಾಲಿಟ್ಟಿದ್ದಾರೆ. ಶಶಿ ತರೂರ್ ಮತ್ತು ದಿಗ್ವಿಜಯ ಸಿಂಗ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ದಿಗ್ವಿಜಯ ಸಿಂಗ್ ನಾಮಪತ್ರ ಸಲ್ಲಿಸಲು ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಆದರೆ ನಾಮಪತ್ರ ಸಲ್ಲಿಕೆಯ ಕೊನೇ ದಿನವಾದ ಇಂದು ಏಕಾಏಕಿ ಬದಲಾವಣೆಯಾಗಿದೆ. ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಖಚಿತವಾಗುತ್ತಿದ್ದಂತೆ, ದಿಗ್ವಿಜಯ ಸಿಂಗ್ ಹಿಂದೆ ಸರಿದಿದ್ದಾರೆ. ಇವರು ಕಾಂಗ್ರೆಸ್ ಹೈಕಮಾಂಡ್ನ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದು, ಮುಂದಿನ ಅಧ್ಯಕ್ಷ ಖರ್ಗೆಯೇ ಎಂದೇ ಹೇಳಲಾಗುತ್ತಿದೆ.
ಅವಕಾಶವಿದೆ ಎಂದೇ ಸ್ಪರ್ಧಿಸಿದ ತ್ರಿಪಾಠಿ
ಕೆ.ಎನ್.ತ್ರಿಪಾಠಿ ಕೂಡ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿಕೊಂಡು ನಾಮಪತ್ರ ಸಲ್ಲಿಸಿದ್ದಾರೆ. ಜಾರ್ಖಂಡ ರಾಜ್ಯದ ಮಾಜಿ ಸಚಿವರೂ ಆಗಿರುವ ಇವರು ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಮಾತನಾಡಿ ‘ಕಾಂಗ್ರೆಸ್ನ ಯಾವುದೇ ಕಾರ್ಯಕರ್ತ, ಮುಖಂಡರೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದು ಎಂದು ನಮ್ಮ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹೇಳಿದ್ದಾರೆ. ಹೀಗೊಂದು ಅವಕಾಶ ಇರುವುದರಿಂದಲೇ ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ’ ಎಂದಿದ್ದಾರೆ.
ನೀವು ನಾಮಪತ್ರವನ್ನು ಸುಮ್ಮನೆ ಸಲ್ಲಿಸಿದ್ದಾ? ಅಥವಾ ನಿಜಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ತ್ರಿಪಾಠಿ ‘ನೀವೆಲ್ಲ ನನ್ನನ್ನು ಯಾಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಾಮಪತ್ರ ಹಿಂಪಡೆಯಲು ಇರುವ ಕೊನೇ ದಿನಾಂಕದವರೆಗೆ ಕಾದು ನೋಡಿ, ನಾನು ಕಣದಲ್ಲಿ ಇರುತ್ತೇನೋ, ಇಲ್ಲವೋ ಗೊತ್ತಾಗುತ್ತದೆ’ ಎಂದು ಹೇಳಿದ್ದಾರೆ. ಅಂದಹಾಗೇ, ತ್ರಿಪಾಠಿ ಮೊದಲು ಭಾರತೀಯ ವಾಯುಸೇನೆಯಲ್ಲಿ ಇದ್ದವರು. ರಾಜಕೀಯಕ್ಕೆ ಸೇರಲೆಂದೇ ಅದನ್ನು ಬಿಟ್ಟಿದ್ದಾರೆ. 2005ರಲ್ಲಿ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಡಾಲ್ಟೋಂಗಂಜ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ನಲ್ಲಿ ಸ್ಪರ್ಧಿಸಿ ಸೋತಿದ್ದರು.
ಇದನ್ನೂ ಓದಿ: Congress President | ಮಲ್ಲಿಕಾರ್ಜುನ ಖರ್ಗೆಯೇ ಕಾಂಗ್ರೆಸ್ನ ಮುಂದಿನ ಅಧ್ಯಕ್ಷ?; ದಿಗ್ವಿಜಯ ಸಿಂಗ್ ಹೊರಕ್ಕೆ!